ADVERTISEMENT

ರಸ್ತೆ ಅಭಿವೃದ್ಧಿ ಕಳಪೆ ಕಾಮಗಾರಿ: ದೂರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 3:59 IST
Last Updated 30 ಏಪ್ರಿಲ್ 2022, 3:59 IST
ನ್ಯಾಮತಿ ಪಟ್ಟಣದಲ್ಲಿ ರಸ್ತೆವಿಭಜಕಕ್ಕೆ ಅಳವಡಿಸುತ್ತಿರುವ ಬೀದಿದೀಪಗಳ ಕಾಮಗಾರಿ.
ನ್ಯಾಮತಿ ಪಟ್ಟಣದಲ್ಲಿ ರಸ್ತೆವಿಭಜಕಕ್ಕೆ ಅಳವಡಿಸುತ್ತಿರುವ ಬೀದಿದೀಪಗಳ ಕಾಮಗಾರಿ.   

ನ್ಯಾಮತಿ: ಅವಳಿ ತಾಲ್ಲೂಕಿನಲ್ಲಿ ₹ 22 ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ವಿಭಜಕ ಮತ್ತು ಅವುಗಳಿಗೆ ಅಳವಡಿಸುತ್ತಿರುವ ರೋಡ್‌ಲೈಟ್ ಪಿಲ್ಲರ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಸಂಘಟನೆಗಳ ಪದಾಧಿಕಾರಿಗಳು ದೂರಿದ್ದಾರೆ.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹರಮಗಟ್ಟ ಸಾಮಾಜಿಕ ಕಾರ್ಯಕರ್ತ ಧನಂಜಯ ಮತ್ತು ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು, ‘ಕಾಮಗಾರಿ ಸಂಬಂಧ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಶಿವಮೊಗ್ಗ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದರೆ ಯಾವುದೇ ದಾಖಲೆಗಳು ಇಲ್ಲ. ಇದ್ದರೂ ಕೊಡಲು ಬರುವುದಿಲ್ಲ. ಬೆಂಗಳೂರು ಕಚೇರಿಯಿಂದ ಪಡೆಯಿರಿ’ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ದೂರಿದರು.

‘ಬೆಂಗಳೂರು ಕಚೇರಿಗೆ ಮೇಲ್ಮನವಿ ಮೂಲಕ ಮಾಹಿತಿ ಕೇಳಿದಾಗ 174 ಪುಟಗಳ ಅಪೂರ್ಣ ಮಾಹಿತಿ ನೀಡಿರುತ್ತಾರೆ. ಹೊನ್ನಾಳಿ, ನ್ಯಾಮತಿ ರಸ್ತೆಗಳಲ್ಲಿ ಡಿವೈಡರ್ ಮಧ್ಯದಲ್ಲಿ ಅರಣ್ಯ ಇಲಾಖೆಯವರು ಹಾಕಿದ್ದ ಗಿಡಗಳನ್ನು ಕಿತ್ತು ಕಾಮಗಾರಿ ನಡೆಸಲಾಗುತ್ತಿದೆ. ಕಡಿಮೆ ಗುಣಮಟ್ಟದ ಕಬ್ಬಿಣ ಬಳಸುತ್ತಿರುವುದು ಕಂಡುಬಂದಿದೆ. ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಎಂಜಿನಿಯರ್ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿ ಮಾಹಿತಿಯ ಸೂಚನಾ ಫಲಕ ಹಾಕಿಲ್ಲ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದ ಎಂಜಿನಿಯರ್‌ಗಳಾದ ಶಶಿಧರ ಮತ್ತು ಮುರುಳಿ, ಗುತ್ತಿಗೆದಾರ ಚನ್ನರಾಯಪಟ್ಟಣದ ಬಿ.ಎಂ. ರಂಗೇಗೌಡ ಅವರ ಮೇಲೆ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರ ಹಣ ಪೋಲಾಗದಂತೆ ಬಿಲ್ ತಡೆ ಹಿಡಿಯುವಂತೆ ಕೆಆರ್‌ಡಿಸಿಎಲ್ ವ್ಯವಸ್ಥಾಪಕರಿಗೆ ದೂರು ನೀಡಲಾಗಿದೆ’ ಎಂದು ಅವರು ಮಾಹಿತಿ
ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.