ADVERTISEMENT

ಕೊನೆಭಾಗದ ಎಲ್ಲ ರೈತರಿಗೂ ನೀರು ಸಿಗುವಂತಾಗಲಿ

ಜಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಆಶಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 4:00 IST
Last Updated 30 ಏಪ್ರಿಲ್ 2022, 4:00 IST

ಜಗಳೂರು: ‘ರಾಜ್ಯದಲ್ಲಿ ಕೊನೆಯ ಭಾಗದ ರೈತರಿಗೂ ನೀರು ಸಿಗುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ನೀರಾವರಿ ಯೋಜನೆಗಳು ಜಾರಿಯಾಗಬೇಕಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಮಾರಂಭ
ದಲ್ಲಿ ಅವರು ಮಾತನಾಡಿದರು.

ರಾಜ್ಯದ ಕೆಲವೆಡೆ ಯಥೇಚ್ಛ ನೀರನ್ನು ಬಳಸಿ ಭತ್ತ, ಕಬ್ಬಿನ ಬೆಳೆಗಳನ್ನು ತೆಗೆಯುತ್ತಿರುವ ಪರಿಣಾಮ 4 ಲಕ್ಷ ಎಕರೆ ಜಮೀನು ಸಂಪೂರ್ಣ ಸವುಳಾಗಿ ಮಾರ್ಪಟ್ಟಿದೆ. ಫಲವತ್ತತೆ ಮತ್ತು ಮಣ್ಣಿನ ಸಾರ ನಾಶವಾಗಿದೆ. ನೀರನ್ನು ಹಿತಮಿತವಾಗಿ ಬಳಸಬೇಕು ಮತ್ತು ಕೊನೆಯ ಭಾಗದ ರೈತರಿಗೂ ಕೃಷಿಗೆ ನೀರು ದೊರೆಯುವಂತೆ ರೈತರು ಪರಸ್ಪರ ಸಹಕರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯಡಿ ₹ 22 ಸಾವಿರ ಕೋಟಿ ವೆಚ್ಚದಲ್ಲಿ 2.25 ಲಕ್ಷ ಹೆಕ್ಟೇರ್ ಹಾಗೂ ತಾಲ್ಲೂಕಿನಲ್ಲಿ ₹ 1,255 ಕೋಟಿ ವೆಚ್ಚದಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಹೇಳಿದರು.

ADVERTISEMENT

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಗಳೂರು ಕ್ಷೇತ್ರವನ್ನು ದತ್ತು ತೆಗೆದುಕೊಂಡು 57 ಕೆರೆಗೆ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಮಂಜೂರು ಮಾಡುವ ಮೂಲಕ ನನ್ನ ಪಾಲಿನ ದೊರೆಯಾಗಿದ್ದಾರೆ. ಈ ಎರಡು ಯೋಜನೆಗಳಿಂದ ಬಯಲುಸೀಮೆ ಕೆಲವೇ ವರ್ಷದಲ್ಲಿ ಹಸಿರಿನಿಂದ ಕಂಗೊಳಿಸಲಿದೆ. 57 ಕೆರೆಗಳನ್ನು ತುಂಬಿಸುವ ₹ 640 ಕೋಟಿ ಹಾಗೂ ₹ 1,255 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯನ್ನು ನಮ್ಮ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅಲ್ಲದೇ 164 ಹಳ್ಳಿಗಳಿಗೆ ಜಲ ಜೀವನ್ ಮಿಷನ್ ಯೋಜನೆಗೆ ₹ 274 ಕೋಟಿ ಅನುದಾನ ಮತ್ತು 1734 ಅಲೆಮಾರಿ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ‘ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರಗಳಿದ್ದು, ಅಭಿವೃದ್ಧಿಯ ಪರ್ವಕ್ಕೆ ಕಾರಣವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ’ ಎಂದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ‘ಬೆಂಗಳೂರಿನಲ್ಲಿ ನವೆಂಬರ್‌ 2ರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಜಗಳೂರಿನ್ಲಲೂ ಉದ್ಯೋಗ ಮೇಳ ಆಯೋಜಿಸಲಾಗುವುದು’ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ನಡೆಸಿದ ನೀರಾವರಿ ಸಮಿತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ತೋರಣಗಟ್ಟೆ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಕೊನೆಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವ ಸಮಯದಲ್ಲಿ ಮುಖ್ಯಮಂತ್ರಿ ಸೇರಿ ಎಲ್ಲರೂ ವೇದಿಕೆಯಿಂದ ಹೊರನಡೆದರು. ಇದರಿಂದಾಗಿ ಫಲಾನುಭವಿಗಳ ಮನೆಬಾಗಿಲಿಗೆ ತೆರಳಿ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಎನ್.ರವಿಕುಮಾರ್, ವೈ.ಎ.ನಾರಾಯಣಸ್ವಾಮಿ, ಕೆ.ಎಸ್‌. ನವೀನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷೆ ಮಂಜಮ್ಮ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಿಇಒ ಡಾ.ಎ.ಚನ್ನಪ್ಪ, ತಹಶೀಲ್ದಾರ್ ಸಂತೋಷ್ ಇದ್ದರು.

ಶಾಸಕ ರಾಮಚಂದ್ರಗೆ ಬಿಜೆಪಿ ಟಿಕೆಟ್ ಖಚಿತ

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ ಶಾಸಕ ರಾಮಚಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರಾಮಚಂದ್ರ ಅವರು ಎಲ್ಲಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೋ ಅಲ್ಲಿಯವರೆಗೆ ಪಕ್ಷದ ಟಿಕೆಟ್ ಅವರಿಗೇ. ಅವರನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಳೆದ 100 ವರ್ಷಗಳಲ್ಲಿ 75 ವರ್ಷ ಬರಗಾಲಕ್ಕೆ ಸಿಲುಕಿದ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ವರದಾನವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.