ADVERTISEMENT

ಬಾಕಿ ಕಮಿಷನ್ ಬಿಡುಗಡೆಗೆ ಆಗ್ರಹ

ಸರ್ಕಾರಗಳ ವಿರುದ್ಧ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಕಿಡಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 3:17 IST
Last Updated 14 ನವೆಂಬರ್ 2025, 3:17 IST

ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಹಾಗೂ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರಕ್ಕೆ ನ್ಯಾಯಬೆಲೆ ಅಂಗಡಿಗಳಿಗೆ ನೀಡುವ ಕಮಿಷನ್‌ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

‘ರಾಜ್ಯದ ವಿತರಕರಿಗೆ ಪ್ರತಿ ತಿಂಗಳು ₹ 177 ಕೋಟಿ ಎನ್‌ಎಫ್‌ಎಸ್‌ಎ ಕಮಿಷನ್‌ ನಿಗದಿಯಾಗಿದೆ. ಕೇಂದ್ರ ಸರ್ಕಾರ ಮೇ ತಿಂಗಳಿಂದ ಕಮಿಷನ್‌ ಬಾಕಿ ಉಳಿಸಿಕೊಂಡಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ವಿತರಕರಿಗೆ ₹ 20 ಕೋಟಿ ಕಮಿಷನ್‌ ನಿಗದಿಯಾಗಿದೆ. ರಾಜ್ಯ ಸರ್ಕಾರದ ಆಗಸ್ಟ್‌ನಿಂದ ಕಮಿಷನ್‌ ಬಾಕಿ ಉಳಿಸಿಕೊಂಡಿದೆ’ ಎಂದು ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 20,461 ವಿತರಕರು ಕಾರ್ಯನಿರ್ವಹಿಸುತ್ತಿದ್ದೇವೆ. ಕಮಿಷನ್‌ ಆಧಾರದ ಮೇರೆಗೆ ಜೀವನ ಕಟ್ಟಿಕೊಂಡಿದ್ದೇವೆ. ಆರು ತಿಂಗಳು ಕಮಿಷನ್‌ ಬಾಕಿ ಉಳಿಸಿಕೊಂಡರೆ ಬದುಕು ನಡೆಸುವುದು ಕಷ್ಟವಾಗುತ್ತದೆ. ಈ ತಿಂಗಳ ಅಂತ್ಯದ ಒಳಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಮಿಷನ್‌ ಬಿಡುಗಡೆ ಮಾಡದಿದ್ದರೆ ಮುಂದಿನ ತಿಂಗಳ ಪಡಿತರ ಎತ್ತುವಳಿ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ನ್ಯಾಯಬೆಲೆ ಅಂಗಡಿ ತಲುಪುವುದು ವಿಳಂಬವಾಗುತ್ತಿದೆ. ಜನರಿಗೆ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಮಾಸಾಂತ್ಯದವರೆಗೂ ಪಡಿತರ ನೀಡದೇ ತೊಂದರೆ ಉಂಟಾಗುತ್ತಿದೆ. ಪಡಿತರ ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ನ್ಯಾಯಬೆಲೆ ಅಂಗಡಿ ಸೇರಬೇಕು. ಅಕ್ಕಿ ಬದಲಾಗಿ ವಿತರಿಸುವ ರಾಗಿ, ಜೋಳದ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿದ್ದು, ಕೂಡಲೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ನ್ಯಾಯಬೆಲೆ ಅಂಗಡಿಯ ಪರವಾನಗಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. 2016ರ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅನುಕಂಪದ ಆಧಾರದ ಮೇರೆಗೆ ಪರವಾನಗಿ ವಿತರಿಸಬೇಕು. ಇಂದಿರಾ ಕಿಟ್‌ನ ಪ್ರತಿ ಕ್ವಿಂಟಲ್‌ ಪಡಿತರಕ್ಕೆ ₹ 25 ಕಮಿಷನ್‌ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಕೋಶಾಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಕೆ. ರಾಮಚಂದ್ರ, ರಾಜಶೇಖರ ತಳವಾರ, ಚಂಬಣ್ಣ ಹೊಸಮನಿ, ಎನ್‌.ಎಂ. ತಿಪ್ಪೇಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.