ವೇತನ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್ಎಂ) ಅಡಿ ರಾಜ್ಯದ ವಿವಿಧೆಡೆ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಇದೇ ಉದ್ಯೋಗ ನಂಬಿರುವ ಸಾವಿರಾರು ಸಿಬ್ಬಂದಿಯ ಜೀವನ ಸಂಕಷ್ಟಮಯವಾಗಿದೆ.
ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 28,000 ಜನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೊಕ್ಕಸ ಬರಿದಾಗಿರುವುದಾಗಿ ಹೇಳಿ ಇವರಿಗೆ ಜನವರಿ ತಿಂಗಳ ಸಂಬಳ ನೀಡಿಲ್ಲ. ಫೆಬ್ರುವರಿಯ ವೇತನ ಕೊಡುವುದೂ ಅನುಮಾನ ಎಂದು ಹೇಳಲಾಗುತ್ತಿದೆ.
‘ನಮಗೆ ಬೇರೆ ಯಾವ ಮೂಲಗಳಿಂದಲೂ ಆದಾಯ ಇಲ್ಲ. ತಿಂಗಳ ಸಂಬಳದಲ್ಲೇ ಸಂಸಾರ ನಿಭಾಯಿಸಬೇಕು. ಎರಡು ತಿಂಗಳಿಂದ ವೇತನ ಬಾರದ್ದರಿಂದ ಮನೆ ಬಾಡಿಗೆ ಕಟ್ಟಿಲ್ಲ. ದಿನಸಿ ಕೊಂಡುಕೊಳ್ಳಲೂ ಕೈಯಲ್ಲಿ ಕಾಸಿಲ್ಲ. ಸಣ್ಣ ಪುಟ್ಟ ಖರ್ಚಿಗೆ ಹಣ ಬೇಕೆಂದರೆ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಅಂಗಲಾಚಬೇಕಿದೆ. ನಮ್ಮ ಬದುಕು ಯಾತನಾಮಯವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
‘ಸಂಬಳ ಹೆಚ್ಚಿಸುವುದು ಒತ್ತಟ್ಟಿಗಿರಲಿ, ಈಗ ತಿಂಗಳ ವೇತನವನ್ನೂ ಸರಿಯಾಗಿ ಕೊಡುತ್ತಿಲ್ಲ. ಎನ್‌ಎಚ್‌ಎಂ ಅಡಿ ಕಾರ್ಯ ನಿರ್ವಹಿಸುವವರ ಸೇವೆಯನ್ನು ಕಾಯಂಗೊಳಿಸುವುದಾಗಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ಹೇಳಿತ್ತು. ಪ್ರಣಾಳಿಕೆಯಲ್ಲೂ ಇದನ್ನು ಸೇರ್ಪಡೆ ಮಾಡಿತ್ತು. ಆದರೆ ಈಗ ಮಾತು ತಪ್ಪಿದೆ. ನೌಕರರ ವೇತನಕ್ಕಾಗಿ ಇಟ್ಟಿದ್ದ ನಿಧಿಯನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಇದರಿಂದ ನಾವು ಪರಿತಪಿಸುವಂತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು ದೂರಿದರು.
‘ನಮಗೆ ಈಗ ಸಿಗುತ್ತಿರುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಹಲವು ಬಾರಿ ಹೋರಾಟ ನಡೆಸಿದರೂ ಸರ್ಕಾರ ನಮ್ಮ ಮನವಿಗೆ ಕಿವಿಗೊಟ್ಟಿಲ್ಲ. ತಿಂಗಳ ಕೊನೆಯಲ್ಲೇ ಸಂಬಳ ಪಾವತಿಸಬೇಕೆಂಬ ನಿಯಮವಿದೆ. ಆದರೂ ಇದರ ಪಾಲನೆಯಾಗುತ್ತಿಲ್ಲ’ ಎಂದು ದಾವಣಗೆರೆ ಜಿಲ್ಲಾ ಕ್ಷಯರೋಗ ಕೇಂದ್ರದಲ್ಲಿ ಸಂದರ್ಶಕರಾಗಿರುವ ಸುರೇಶ್‌ಕುಮಾರ್ ಕೋಟೆ ಬೇಸರ ವ್ಯಕ್ತಪಡಿಸಿದರು.
‘ಹಿಂದೆಂದೂ ಈ ರೀತಿಯ ಸಮಸ್ಯೆಯಾಗಿರಲಿಲ್ಲ. ಅನುದಾನದ ಕೊರತೆಯಿಂದಾಗಿ ಈ ಬಾರಿ ಸಮಯಕ್ಕೆ ಸರಿಯಾಗಿ ನೌಕರರಿಗೆ ಸಂಬಳ ನೀಡುವುದಕ್ಕೆ ಆಗಿಲ್ಲ. ನಮ್ಮ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದ ಎಲ್ಲಾ ಕಡೆಯೂ ಈ ಸಮಸ್ಯೆಯಾಗಿದೆ. ಇದೀಗ ಅನುದಾನ ಬಿಡುಗಡೆಯಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ನೌಕರರ ಬಾಕಿ ವೇತನ ಪಾವತಿಸುತ್ತೇವೆ’ ಎಂದು ದಾವಣಗೆರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ ತಿಳಿಸಿದರು.
ಸರ್ಕಾರವೇ ನಮ್ಮನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ನೌಕರರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ.– ಹಾಲಸ್ವಾಮಿ ಎನ್.ಸಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ, ಎನ್‌ಎಚ್‌ಎಂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ
ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರವೇ ವೇತನ ಪಾವತಿಗೆ ಕ್ರಮ ವಹಿಸುವಂತೆ ಸೂಚಿಸುತ್ತೇನೆ.–ಆಯನೂರು ಮಂಜುನಾಥ್, ಗೌರವಾಧ್ಯಕ್ಷ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.