ADVERTISEMENT

ಡಗ್ಸ್‌: ದಾವಣಗೆರೆ ಜಿಲ್ಲೆಗೆ ವಿಸ್ತರಿಸಿದ ವಿದೇಶಿ ಜಾಲ

ಜಿ.ಬಿ.ನಾಗರಾಜ್
Published 31 ಜುಲೈ 2025, 6:31 IST
Last Updated 31 ಜುಲೈ 2025, 6:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಮಾದಕ ವಸ್ತು ಮಾರಾಟದಲ್ಲಿ ಸಕ್ರಿಯವಾಗಿರುವ ವಿದೇಶಿ ಜಾಲ ಮಧ್ಯ ಕರ್ನಾಟಕಕ್ಕೂ ವಿಸ್ತರಿಸಿರುವುದು ನೈಜೀರಿಯಾ ಪ್ರಜೆಗಳ ಬಂಧನದಿಂದ ದೃಢಪಟ್ಟಿದೆ. ದಂಧೆಯ ಕಬಂಧ ಬಾಹುಗಳು ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಗಾಂಜಾದಂತಹ ನೈಸರ್ಗಿಕ ಮಾದಕ ವಸ್ತುಗಳಿಗೆ ದಾಸರಾಗಿದ್ದವರು ‘ಸಿಂಥೆಟಿಕ್ ಡ್ರಗ್ಸ್’ಗಳತ್ತ ವಾಲುತ್ತಿದ್ದಾರೆ. ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ‘ಎಂಡಿಎಂಎ’ ರೀತಿಯ ದುಬಾರಿ ಬೆಲೆಯ ಮಾದಕ ವಸ್ತುಗಳು ಜಿಲ್ಲೆಯಲ್ಲಿ ಲಭ್ಯವಾಗುತ್ತಿವೆ. 6 ತಿಂಗಳಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ದೂರವಾಣಿ, ಮೊಬೈಲ್‌ ಫೋನ್‌, ಇ–ಮೇಲ್‌ ಹಾಗೂ ಆ‍್ಯಪ್‌ ಮೂಲಕ ನಡೆಯುತ್ತಿದ್ದ ಈ ದಂಧೆ ‘ಡಾರ್ಕ್‌ನೆಟ್‌’ನಲ್ಲಿ ಸಕ್ರಿಯವಾಗಿದೆ. ವಿದ್ಯಾರ್ಥಿಗಳು, ಯುವ ಸಮೂಹವನ್ನು ಸಂಪರ್ಕಿಸುವ ಈ ಜಾಲವು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಬೆಂಗಳೂರಿನಿಂದ ಬಂದು ನಗರದ ಹೊರವಲಯದ ಬಾಡಾ ಕ್ರಾಸ್‌ ಬಳಿ ಜುಲೈ 24ರಂದು ಡ್ರಗ್ಸ್‌ ಮಾರಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದಾಗ ನೈಜೀರಿಯಾದ ಇಬ್ಬರು ಪ್ರಜೆಗಳು ಸೇರಿದಂತೆ ಐವರು ಸೆರೆಸಿಕ್ಕಿದ್ದಾರೆ. ನಗರದ ಖಾಸಗಿ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ತುಮಕೂರು ಜಿಲ್ಲೆಯ ಪಾವಗಡದ ವಿದ್ಯಾರ್ಥಿಯೂ ಬಂಧಿತರಲ್ಲೊಬ್ಬ.

ADVERTISEMENT

‘ಶಿಕ್ಷಣ ಕಾಶಿ’ ಎಂಬ ಖ್ಯಾತಿ ಪಡೆಯುತ್ತಿರುವ ದಾವಣಗೆರೆಯು ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. 2 ವೈದ್ಯಕೀಯ, 2 ದಂತ ವೈದ್ಯಕೀಯ, 5 ಎಂಜಿನಿಯರಿಂಗ್ ಹಾಗೂ ನರ್ಸಿಂಗ್‌, ಆಯುರ್ವೇದ ಕಾಲೇಜುಗಳು ಇಲ್ಲಿವೆ. ಉತ್ತರ ಭಾರತೀಯರು ಸೇರಿ ಹಲವು ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ನಗರದಲ್ಲಿ ದೊಡ್ಡದಾಗಿದೆ. ಡ್ರಗ್ಸ್‌ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿರುವರಲ್ಲಿ ವಿದ್ಯಾರ್ಥಿ ಹಾಗೂ ಯುವ ಸಮೂಹವೇ ಹೆಚ್ಚು. ಮಾದಕ ವಸ್ತುಗಳ ತಡೆಗೆ ‘ಮಾದಕ ದ್ರವ್ಯ ವಿರೋಧಿ ಸಮಿತಿ’ ಇನ್ನೂ ಎಲ್ಲ ಶಾಲೆ–ಕಾಲೇಜುಗಳಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಬಡಾವಣೆಗಳಲ್ಲಿ ರಾತ್ರಿ ಜೀವನವೂ ಭಿನ್ನ. ವಾರಾಂತ್ಯದ ದಿನಗಳಲ್ಲಿ ಪಾರ್ಟಿಗಳು ಜೋರಾಗಿ ನಡೆಯುತ್ತವೆ. ಮಧ್ಯರಾತ್ರಿ ಕಳೆದ ಬಳಿಕವೂ ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ಗಿಗ್‌ ಕಾರ್ಮಿಕರ ವಾಹನಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಮದ್ಯ ಮತ್ತು ಗಾಂಜಾ ಮಾತ್ರವಲ್ಲದೇ ಕೋಕೆನ್‌, ಹೆರಾಯಿನ್‌, ಮಾರ್ಫಿನ್‌ ಸೇರಿದಂತೆ ಇತರ ಮಾದಕ ವಸ್ತುಗಳ ವ್ಯವಹಾರವೂ ಇಲ್ಲಿ ಜೋರಾಗಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ₹ 5.75 ಲಕ್ಷಕ್ಕೂ ಅಧಿಕ ಮೌಲ್ಯದ 80 ಗ್ರಾಂ ‘ಎಂಡಿಎಂಎ’ ಪುಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಅವಧಿಯಲ್ಲಿ ₹ 1.21 ಲಕ್ಷ ಮೌಲ್ಯದ 42 ಗ್ರಾಂ ಅಫೀಮು ಕೂಡ ಸಿಕ್ಕಿದೆ.

ಮಾದಕ ವಸ್ತು ಪ್ರಕರಣ ಹೆಚ್ಚಳ

ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಾ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 413ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 500ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ. 2023ರಲ್ಲಿ 90 ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ ಈ ಸಂಖ್ಯೆ 173 ಕ್ಕೆ ಏರಿಕೆಯಾಗಿತ್ತು. 2025ರಲ್ಲಿ ಜುಲೈ ವರೆಗೆ 150ಕ್ಕೂ ಪ್ರಕರಣ ದಾಖಲಾಗಿವೆ. ಇದರಲ್ಲಿ ಗಾಂಜಾ ಸಂಬಂಧಿ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. 3 ವರ್ಷಗಳಲ್ಲಿ ₹ 35 ಲಕ್ಷಕ್ಕೂ ಅಧಿಕ ಮೌಲ್ಯದ 58 ಕೆ.ಜಿ.ಗೂ ಹೆಚ್ಚಿನ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೀಡಾ ಅಂಗಡಿಯಲ್ಲಿ ಗಾಂಜಾ

ಬೀಡಿ ಸಿಗರೇಟುಗಳಷ್ಟೇ ಸುಲಭವಾಗಿ ಮಾದಕ ವಸ್ತುಗಳು ಬೀಡಾ ಅಂಗಡಿಗಳಲ್ಲಿ ಲಭ್ಯವಾಗುತ್ತಿವೆ. ಜನ ಜಂಗುಳಿಯಿಂದ ಕೂಡಿರುವ ‘ರಾಮ್‌ ಅಂಡ್‌ ಕೊ’ ವೃತ್ತದಲ್ಲಿನ ಬೀಡಾ ಅಂಗಡಿಯಲ್ಲಿ ಪತ್ತೆಯಾದ ಗಾಂಜಾ ಈ ಜಾಲದ ಸ್ವರೂಪವನ್ನು ಬಿಚ್ಚಿಟ್ಟಿದೆ. ‘ಚಾಕೊಲೇಟ್‌’ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಉತ್ತರ ಭಾರತದಿಂದ ಗಾಂಜಾ ತಂದು ಬೀಡಾ ಅಂಗಡಿಗಳಲ್ಲಿಟ್ಟು ಮಾರಾಟ ಮಾಡಲಾಗುತ್ತಿದೆ. ಕಾಲೇಜುಗಳ ಸುತ್ತಲಿನ ಇಂತಹ ಚಿಕ್ಕ ಅಂಗಡಿಗಳು ಯುವಸಮೂಹವನ್ನು ಸೆಳೆಯುತ್ತಿರುವುದು ಅನುಮಾನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.