
ದಾವಣಗೆರೆ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆಗೆ ಪೋಷಕರು ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ನಿಂಚನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಗಣೇಶ್ ಬಾಬು ಹೇಳಿದರು.
ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ನಿಂಚನ ಪಬ್ಲಿಕ್ ಶಾಲೆಯ 18ನೇ ವಾರ್ಷಿಕೋತ್ಸವ ‘ನಿಂಚನೋತ್ಸವ- 2025’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸುಲಭವಾದ ಕೆಲಸವಾಗಿಲ್ಲ. ಹೆಚ್ಚುತ್ತಿರುವ ಸ್ಪರ್ಧೆಯ ನಡುವೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕಾದ ಗುರುತರ ಹೊಣೆ ಶಿಕ್ಷಕರ ಮೇಲಿದೆ. ನಿತ್ಯ ಶಾಲೆಯಲ್ಲಿ ನಮ್ಮ ಮಗು ಏನು ಕಲಿಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿರುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
‘ಜಿಲ್ಲೆಯಲ್ಲಿ ನೂರಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಜಿಲ್ಲೆಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ ಶಾಮನೂರು ಶಿವಶಂಕರಪ್ಪ ಅವರ ಶೈಕ್ಷಣಿಕ ಸೇವೆ ಸದಾ ಸ್ಮರಣೀಯ. 1998 ರಿಂದಲೂ ಅವರೊಂದಿಗೆ ನನ್ನ ಒಡನಾಟವಿತ್ತು. ಪ್ರತಿ ಚುನಾವಣೆಗಳಲ್ಲೂ ಅವರೊಂದಿಗೆ ಕೆಲಸ ಮಾಡಿದ ತೃಪ್ತಿ ನನಗಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕೆ.ಆರ್.ಎಸ್.ಎಂ. ಟ್ರಸ್ಟ್‌ನ ಅಧ್ಯಕ್ಷ ಎಸ್.ನಿಂಗಪ್ಪ ಹೇಳಿದರು.
‘ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಇತರೆ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ವಿಭಾಗದ ಮುಖ್ಯಸ್ಥ ಮಂಜುನಾಥ್ ಹುಲ್ಮನಿ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಔಷಧ ವಿಭಾಗದ ಪ್ರೊ.ಆಶಾ ಎಂ.ಹುಲ್ಮನಿ ಮಾತನಾಡಿದರು.
ಬಿಆರ್‌ಸಿ ಚೌಡಪ್ಪ, ಸಿಆರ್‌ಪಿ ಅನಿಲ್ ಕುಮಾರ್, ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಬಿ.ರವಿಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಎಚ್.ಶಂಕರಮೂರ್ತಿ, ಆಡಳಿತಾಧಿಕಾರಿ ಕಿರಣ್ ದತ್ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಎಚ್.ಡಿ.ಅಶ್ವಿನಿ ವಾರ್ಷಿಕ ವರದಿ ವಾಚಿಸಿದರು. ಡಿ.ಎಂ.ಸಂತೋಷ್ ಅತಿಥಿಗಳನ್ನು ಸ್ವಾಗತಿಸಿದರು. ಸಹನಾ ಪ್ರಿಯ ಹಾಗೂ ಭೂಮಿಕಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.