ADVERTISEMENT

ಐನೂರು ಜನರನ್ನು ಡಂಪ್ ಮಾಡಿರುವ ನಿರಾಣಿ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 20:37 IST
Last Updated 21 ಏಪ್ರಿಲ್ 2019, 20:37 IST

ದಾವಣಗೆರೆ: ಹಣ ಹಂಚಲು ಜಿಲ್ಲೆಯ ವಿವಿಧ ಕಡೆಗಳಲ್ಲಿ 500 ಮಂದಿಯನ್ನು ಮರುಗೇಶ್‌ ನಿರಾಣಿ ಡಂಪ್‌ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಆರೋಪಿಸಿದರು.

ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿರುವುದರಿಂದ ಚುನಾವಣಾಧಿಕಾರಿಗಳು ಕೂಡಲೇ ಹೊರ ಜಿಲ್ಲೆಗಳಿಂದ ಬಂದಿರುವ ಅಂಥವರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿದ್ದೇಶ್ವರ ಅವರು ದುಡ್ಡಿಲ್ಲದೇ ಚುನವಣೆಗಳಲ್ಲಿ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ದುಗ್ಗಮ್ಮ ದೇವಸ್ಥಾನದಲ್ಲಿ ಬಂದು ಗಂಟೆ ಹೊಡೆದು ಈ ಮಾತನ್ನು ಹೇಳಲಿ ಎಂದು ಸವಾಲು ಹಾಕಿದರು.

ADVERTISEMENT

ಸಿದ್ದೇಶ್ವರ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಅಂಬೇಡ್ಕರ್‌ ಪ್ರತಿಮೆಗಳನ್ನು ಪುಡಿಮಾಡಬೇಕು ಎಂದು ಹೇಳಿದ್ದ ತೇಜಸ್ವಿ ಸೂರ್ಯನನ್ನು ಜಿಲ್ಲೆಗೆ ಕರೆಸಿ ಕೋಮುಭಾವನೆ ಕೆರಳಿಸಲು ಕೈಹಾಕಿದ್ದಾರೆ ಎಂದರು.

ಕಾರ್ಯಕರ್ತರು ಎಚ್ಚೆತ್ತುಕೊಳ್ಳದಿದ್ದರೆ ವಾಜಪೇಯಿಗೆ ಬಂದ ಗತಿಯೇ ನರೇಂದ್ರ ಮೋದಿಗೂ ಬರಲಿದೆ ಎಂದು ಸಿದ್ದೇಶ್ವರ ಹಿಂದೊಮ್ಮೆ ಹೇಳಿದ್ದರು. ಆ ಮಾತುಗಳು ನಿಜವಾಗುವ ಲಕ್ಷಣ ಕಾಣಿಸುತ್ತಿದೆ. ಆರ್‌ಎಸ್‌ಎಸ್‌ನಲ್ಲಿ ಇದ್ದುಕೊಂಡು ನಾಲ್ಕು ಗೋಡೆಗಳ ಮಧ್ಯೆ ಕಿತಾಪತಿ ಮಾಡುತ್ತಿರುವ ಸಂತೋಷ್‌ ಜಿ. ಈಗ ಹೊರಗೆ ಬಂದು ಡಿಎನ್‌ಎ ನೋಡಿ ಟಿಕೆಟ್‌ ನೀಡಲಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಯಡಿಯೂರಪ್ಪರ ಮಗ, ಉದಾಸಿ ಮಗ, ರವಿ ಸುಬ್ರಹ್ಮಣ್ಯರ ಸಂಬಂಧಿಗೆ ಹೇಗೆ ಟಿಕೆಟ್‌ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ದೇಶ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಿ ಎನ್ನುವ ಬಿಜೆಪಿ ಹೇಳುತ್ತದೆ. ಉಗ್ರರನ್ನು ಹಿಮ್ಮೆಟ್ಟಿಸಿ ಹತರಾದ ಪ್ರಾಮಾಣಿಕ ಅಧಿಕಾರಿ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ತನ್ನ ಶಾಪದಿಂದ ಸತ್ತಿರುವುದಾಗಿ ಭಯೋತ್ಪಾದಕಿ ಪ್ರಜ್ಞಾಸಿಂಗ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅದನ್ನು ಸಮರ್ಥಿಸುತ್ತಿದ್ದಾರೆ. ಇದುವೇ ಇವರ ದೇಶಪ್ರೇಮ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವಾಗ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅನ್ನ, ಹಾಲು ನೀಡಿದ ಕಾಂಗ್ರೆಸನ್ನು ಜನ ಮರೆಯುವುದಿಲ್ಲ. ಮಂಜಪ್ಪ ಅವರನ್ನು ಇಲ್ಲಿ ಗೆಲ್ಲಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಲ್ಲವಾಲಿ ಗಾಜಿಖಾನ್‌, ಎಚ್‌. ಸುಬಾನ್‌ಸಾಬ್‌, ಆರ್‌. ನವೀದ್‌ ಬಾಷಾ, ಎಚ್‌. ಹರೀಶ್‌, ಖಾಜಿ ಖಲೀಲ್‌, ಶಿವಕುಮಾರ್‌, ಲಿಯಾಕತ್‌ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.