ಹರಿಹರ: ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿಯನ್ನು ಸಾತ್ವಿಕ್ ಎಂಬ ಕಂಪನಿಗೆ ಹಸ್ತಾಂತರ ಮಾಡುವ ಪ್ರಸ್ತಾಪ ವಿರೋಧಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು.
ತಹಶೀಲ್ದಾರ್ ಗುರುಬಸವರಾಜ್ ಇವರಿಗೆ ಮನವಿ ಸಲ್ಲಿಸಿದ ಮುಖಂಡರು, ಮೆಕ್ಕೆಜೋಳ ಸಂಸ್ಕರಣೆ ಮಾಡುವ ಬೆಳ್ಳೂಡಿ ಸಮೀಪದ ಕಂಪನಿಯನ್ನು ಕಾರ್ಗಿಲ್ ಸಂಸ್ಥೆಯವರೇ ಮುಂದುವರಿಸಬೇಕು. 160 ವರ್ಷಗಳ ಕಾರ್ಗಿಲ್ ಕಂಪನಿಯವರು ಪರಿಸರ ಮಾಲಿನ್ಯವಾಗದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಸುತ್ತಲಿನ ಗ್ರಾಮಗಳ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಉತ್ತಮ ಬೆಲೆ ನೀಡಿ ರೈತರಿಂದ ಮೆಕ್ಕೆಜೋಳ ಖರೀದಿಸುತ್ತಿದ್ದಾರೆ. ಗ್ವಾಲಿಯರ್‌ನಲ್ಲಿ ಕಂಪನಿಯೊಂದನ್ನು ನಿರ್ವಹಣೆ ಮಾಡುತ್ತಿರುವ ಸಾತ್ವಿಕ್ ಸಂಸ್ಥೆಯವರ ವಿರುದ್ಧ ಹಲವು ಆರೋಪಗಳಿವೆ ಎಂದು ದೂರಿದರು.
‘ನಾವುಗಳು ಕಾರ್ಗಿಲ್ ಕಂಪನಿಯ ಸಮಾಜಮುಖಿ ಗುಣವನ್ನು ನೋಡಿ ಜಮೀನನ್ನು ನೀಡಿದ್ದೇವೆ. ಹಲವು ಆರೋಪ ಇರುವ ಸಾತ್ವಿಕ್ ಸಂಸ್ಥೆಗೆ ಕಾರ್ಗಿಲ್ ಕಂಪನಿಯನ್ನು ಮಾರಾಟ ಮಾಡುವುದು, ಗುತ್ತಿಗೆ ನೀಡುವುದಾದರೆ, ರೈತರ ಜಮೀನನ್ನು ವಾಪಸ್ ನೀಡಲು ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಹೇಳಿದರು.
‘ತಾಲ್ಲೂಕು ಆಡಳಿತದವರು ಕಂಪನಿಯ ಹಸ್ತಾಂತರ ತಡೆಯಬೇಕು, ತಪ್ಪಿದಲ್ಲಿ ಕಾರ್ಮಿಕರು, ರೈತರು ಸೇರಿ ಬೃಹತ್ ಹೋರಾಟವನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಮಧು ತೊಗಲೇರಿ, ಬುಳ್ಳಾಪುರ ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.