ADVERTISEMENT

ದಾವಣಗೆರೆ | ಹೊಸ ಬಸ್‌ ನಿಲ್ದಾಣ: ಅಂಗಡಿ ಜಾಗ ಭಣಭಣ!

ಜಿ.ಬಿ.ನಾಗರಾಜ್
Published 15 ಮೇ 2025, 6:46 IST
Last Updated 15 ಮೇ 2025, 6:46 IST
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಹೊಸ ಬಸ್‌ ನಿಲ್ದಾಣದಲ್ಲಿ ಖಾಲಿ ಇರುವ 1.30 ಲಕ್ಷ ಚದರಡಿಯ ವಾಣಿಜ್ಯ ಉದ್ದೇಶದ ಸ್ಥಳವನ್ನು ಬಾಡಿಗೆ ಪಡೆಯಲು ಯಾರೊಬ್ಬರೂ ಉತ್ಸಕತೆ ತೋರುತ್ತಿಲ್ಲ. ಮಾಸಿಕ ಬಾಡಿಗೆಯನ್ನು ಶೇ 25ರಷ್ಟು ಕಡಿತಗೊಳಿಸಿ 4ನೇ ಬಾರಿಗೆ ಟೆಂಡರ್‌ ಕರೆಯಲಾಗಿದೆ.

6 ಎಕರೆ 7 ಗುಂಟೆ ವಿಸ್ತೀರ್ಣದಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆಯ ₹ 109 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ 2024ರ ಸೆ.22ರಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಕಟ್ಟಡದ ತಳಮಹಡಿಯ ಪಾರ್ಕಿಂಗ್‌ನಿಂದ ಹಿಡಿದು, ಮೊದಲ ಹಾಗೂ ಎರಡನೇ ಮಹಡಿಯನ್ನು ಬಾಡಿಗೆ ನೀಡಲು ಈವರೆಗೆ 3 ಬಾರಿ ಕರೆದಿದ್ದ ಟೆಂಡರ್‌ಗೆ ಯಾವುದೇ ಅರ್ಜಿ ಬಂದಿಲ್ಲ.

ಬಸ್‌ ನಿಲ್ದಾಣದ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯನ್ನು ಮಾಲ್‌ ಮಾದರಿಯಲ್ಲಿ ನಿರ್ಮಿಸಲಾಗಿದೆ. ದೊಡ್ಡ ಮಾಲ್‌ಗಳಿಗೆ ಬಾಡಿಗೆ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. 175 ಆಸನಗಳ ಸಾಮರ್ಥ್ಯ ಹೊಂದಿದ ಎರಡು ಚಿತ್ರಮಂದಿರ ಹಾಗೂ 300 ಜನರು ಕುಳಿತುಕೊಳ್ಳುವ ಒಂದು ಚಿತ್ರಮಂದಿರವನ್ನೂ ಇದು ಒಳಗೊಂಡಿದೆ.

ADVERTISEMENT

ಸಿನಿಮಾ ಅಥವಾ ವಾಣಿಜ್ಯ ಮಳಿಗೆಗೆ ಬರುವ ಗ್ರಾಹಕರು ಹಾಗೂ ಕೆಲಸ ಮಾಡುವ ಸಿಬ್ಬಂದಿಗೆ ತಳಮಹಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ತಳಮಹಡಿಯ 17,000 ಚದರ ಅಡಿಯ ಪಾರ್ಕಿಂಗ್‌ ಸ್ಥಳವನ್ನು ಬಾಡಿಗೆದಾರರಿಗೆ ಮೀಸಲಿಡಲಾಗಿದೆ.

ಈ ವಾಣಿಜ್ಯ ಮಳಿಗೆಗಳಿಗೆ ಮೊದಲ ಬಾರಿಗೆ ಟೆಂಡರ್‌ ಕರೆದಾಗ ಮಾಸಿಕ ಬಾಡಿಗೆಯನ್ನು ₹ 59 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಮೂರನೇ ಬಾರಿಗೆ ಈ ಬಾಡಿಗೆಯನ್ನು ₹ 55 ಲಕ್ಷಕ್ಕೆ ಇಳಿಸಲಾಯಿತು. ಆಗಲೂ ಯಾರೊಬ್ಬರು ಆಸಕ್ತಿ ತೋರದಿರುವ ಕಾರಣಕ್ಕೆ ಮಾಸಿಕ ಬಾಡಿಗೆಯನ್ನು ₹ 41 ಲಕ್ಷಕ್ಕೆ ಕಡಿಮೆ ಮಾಡಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಕಟ್ಟಡ ಹಾಗೂ ಭೂಮಿಯ ಮೌಲ್ಯಕ್ಕೆ ಅನುಗುಣವಾಗಿ ಬಾಡಿಗೆ ನಿಗದಿಪಡಿಸಲಾಗಿದೆ.

‘ಮಾಲ್‌ ಮಾದರಿಯ ಈ ಕಟ್ಟಡದ ಬಾಡಿಗೆ ದೊಡ್ಡ ಕಂಪನಿಗಳು ಮುಂದೆ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈವರೆಗಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಪಾಲ್ಗೊಂಡಿಲ್ಲ. ದೊಡ್ಡ ಕಂಪನಿಗಳೂ ಉತ್ಸುಕತೆ ತೋರಿಲ್ಲ. ಮಾಸಿಕ ಬಾಡಿಗೆ ಹೆಚ್ಚಿರಬಹುದು ಎಂಬುದನ್ನು ಕೇಂದ್ರ ಕಚೇರಿಯೊಂದಿಗೆ ಚರ್ಚಿಸಲಾಗಿತ್ತು. ಮಾಸಿಕ ಬಾಡಿಗೆಯನ್ನು ಶೇ 25ರಷ್ಟು ಕಡಿಮೆ ಮಾಡಿ 4ನೇ ಬಾಡಿಗೆ ಟೆಂಡರ್‌ ಕರೆಯಲಾಗಿದೆ’ ಎಂದು ವಿಭಾಗೀಯ ಸಂಚಾರ ನಿಯಂತ್ರಕ ಫಕ್ರುದ್ದೀನ್‌ ತಿಳಿಸಿದರು.

ಖಾಲಿ ಇರುವ 1.30 ಚದರಡಿ ಸ್ಥಳವನ್ನು ಒಂದು ಸಂಸ್ಥೆ, ಕಂಪನಿ ಅಥವಾ ಒಬ್ಬ ವ್ಯಕ್ತಿಗೆ ಬಾಡಿಗೆ ನೀಡಲು ಕೆಎಸ್‌ಆರ್‌ಟಿಸಿ ನಿಯಮ ರೂಪಿಸಿದೆ. ಬಾಡಿಗೆ ಪಡೆದವರು ಮಾಲ್‌, ಸಿನಿಮಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದಾವಣಗೆರೆ ನಗರದಲ್ಲಿ ಮಾಲ್‌ ಸಂಸ್ಕೃತಿಗೆ ಜನರು ಇನ್ನೂ ಒಗ್ಗಿಕೊಳ್ಳದೇ ಇರುವ ಕಾರಣಕ್ಕೆ ಇದನ್ನು ಬಾಡಿಗೆ ಪಡೆಯಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಖಾಲಿಯಿರುವ ವಾಣಿಜ್ಯ ಮಳಿಗೆ ಎದುರು ವ್ಯಕ್ತಿಯೊಬ್ಬರು ಮಲಗಿರುವುದು –ಪ್ರಜಾವಾಣಿ ಚಿತ್ರ
ಈವರೆಗಿನ ಟೆಂಡರ್‌ನಲ್ಲಿ ಬಾಡಿಗೆ ಪಡೆಯಲು ಯಾರೊಬ್ಬರು ಉತ್ಸುಕತೆ ತೋರಿಲ್ಲ. 4ನೇ ಬಾರಿಗೆ ಟೆಂಡರ್‌ ಕರೆಯಲಾಗಿದ್ದು ಮೇ 19ರವರೆಗೆ ಕಾಲಾವಕಾಶವಿದೆ
ಕಿರಣ್‌ ಕುಮಾರ್‌ ಬಸಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.