ADVERTISEMENT

ಶ್ರೇಷ್ಠ ಕಾರ್ಯಕ್ಕೆ ಮುಪ್ಪಿಲ್ಲ: ವಿರಕ್ತಮಠದ ಬಸವಪ್ರಭು ಸ್ವಾಮೀಜಿ

ಪುಸ್ತಕ ಬಿಡುಗಡೆ, ಮಕ್ಕಳ ಲೋಕದ ವಾರ್ಷಿಕೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 13:59 IST
Last Updated 18 ಅಕ್ಟೋಬರ್ 2020, 13:59 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅವರು ಪುಸ್ತಕ ಬಿಡುಗಡೆ ಮಾಡಿದರು
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅವರು ಪುಸ್ತಕ ಬಿಡುಗಡೆ ಮಾಡಿದರು   

ದಾವಣಗೆರೆ: ಶ್ರೇಷ್ಠ ಕಾರ್ಯಗಳಿಗೆ ಮತ್ತು ಆ ಕಾರ್ಯಗಳನ್ನು ಮಾಡುವವರಿಗೆ ಮುಪ್ಪು ಅಡರುವುದಿಲ್ಲ. ಹಾಗಾಗಿ 83 ವರ್ಷದ ಕೆ.ಎನ್‌. ಸ್ವಾಮಿ ಈಗಲೂ ಯುವಕರು ನಾಚುವಂತೆ ಕ್ರಿಯಾಶೀಲರಾಗಿ ಇರಲು ಸಾಧ್ಯವಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ದತ್ತಿ ಉಪನ್ಯಾಸ ಹಾಗೂ ಪುಸ್ತಕ ಲೋಕಾರ್ಪಣೆ ಮತ್ತು ಸಿದ್ಧಗಂಗಾ ಮಕ್ಕಳ ಲೋಕ ಸಾಂಸ್ಕೃತಿಕ ಸಂಸ್ಥೆಯ 11ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಕೆ.ಎನ್‌. ಸ್ವಾಮಿ ದಾವಣಗೆರೆಯ ಸಾಂಸ್ಕೃತಿಕ ಸಂಪನ್ಮೂಲ ವ್ಯಕ್ತಿ. ಕನ್ನಡ ಸಾಹಿತ್ಯದಲ್ಲಿ ಅಪಾರ ‍ಪಾಂಡಿತ್ಯ ಗಳಿಸಿ ತಮ್ಮ ವಿದ್ವತ್‌ ಅನ್ನು ಮಕ್ಕಳಿಗೆ ಧಾರೆ ಎರೆದು ಪ್ರತಿಭಾವಂತರಾಗಿ ತಯಾರು ಮಾಡುವ ಶ್ರೇಷ್ಠ ಗುರು ಎಂದು ಶ್ಲಾಘಿಸಿದರು.

ADVERTISEMENT

ಬಹುತೇಕರು ನಿವೃತ್ತಿ ನಂತರ ಸಾಹಿತಿಗಳು ರಾಜಕೀಯ ಲಾಭ ಪಡೆಯಲು, ಅಧಿಕಾರ ಗಳಿಸಲು ರಾಜಕೀಯ ಪಕ್ಷಗಳಿಗೆ ಸೇರತುತ್ತಾರೆ. ಆದರೆ ಸ್ವಾಮಿ ಅವರು ಸಮಾಜದಲ್ಲಿ ಬಹುಮುಖಿ ವ್ಯಕ್ತಿತ್ವಗಳನ್ನು ರೂಪಿಸಲು ತೊಡಗಿಸಿಕೊಂಡರು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಮಾತನಾಡಿ, ‘ವಿಶ್ವ ಅರ್ಥ ವ್ಯವಸ್ಥೆ ಮನುಷ್ಯನನ್ನು ವ್ಯಾವಹರಿಕನನ್ನಾಗಿ ಮಾಡಿದೆ. ಇದೇ ಸಂದರ್ಭದಲ್ಲಿ ಕಣ್ಣಿಗೆ ಕಾಣದ ಅಣು ಜನರ ಮಧ್ಯೆ ಜೀವಂತ ಸಂವಹನ ಮತ್ತು ಸಂಬಂಧವನ್ನು ಕಡಿದು ಹಾಕಿದೆ’ ಎಂದು ವಿಷಾದಿಸಿದರು.

ಕಲಿಕೆಯಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌, ಟಿವಿ ದೂರ ಇಡಬೇಕು ಎಂಬುದು ಪಾಲಕರ, ಬೋಧಕರ ನಿಯಂತ್ರಣ ಆಗಿತ್ತು. ಈಗ ಅದೇ ಅವಶ್ಯಕವಾಗಿವೆ. ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಕಂಡು ಬರುವ ಅಲ್ಲಿನ ಪ್ರಕೃತಿ, ಪ್ರಾಣಿ, ಪಕ್ಷಿ ಸಮುದ್ರಗಳನ್ನೇ ನೈಜ ಎಂದು ಭ್ರಮಿಸಿ ವಿಸ್ಮೀತವಾಗುತ್ತಿದೆ. ಮಕ್ಕಳು ಮೌನಮುನಿಗಳಾಗಿ ಮೌನಜಗತ್ತನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಮನುಷ್ಯ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿರುವಾಗಲೇ ಪ್ರಕೃತಿ ಮನುಷ್ಯನ ವಿರುದ್ಧ ಸಮರ ಸಾರುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಪರಿಸರ ಪ್ರಜ್ಞೆ ತುಂಬಬೇಕು ಎಂದು ಸಲಹೆ ನೀಡಿದರು.

ಸತ್ಯಭಾಮ ಮಂಜುನಾಥ್, ಜಿ. ಸಿ. ನಿರ್ಮಲ ಉಪನ್ಯಾಸ ನೀಡಿದರು. ಮಕ್ಕಳ ಲೋಕದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಸ್ವಾಮಿ, ಸಿದ್ದಗಂಗಾ ವಿದ್ಯಾಸಂಸ್ಥೆ ನಿರ್ದೇಶಕ ಡಿ ಎಸ್ ಜಯಂತ್, ಡಾ. ಕವಿತಾಕೃಷ್ಣ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಎಂ. ಪುಟ್ಟನಾಯ್ಕ, ಡಾ.ನಾಗಪ್ರಕಾಶ್‌ ಇದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.