ADVERTISEMENT

ಕೆರೆ ಒತ್ತುವರಿ ತೆರವಿಗೆ ಸೂಚನೆ: ಜಿ.ಎಂ.ಗಂಗಾಧರಸ್ವಾಮಿ

‘ನೆಲ–ಜಲ’ ಸಂರಕ್ಷಣೆಗೆ ರೈತರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 8:10 IST
Last Updated 15 ಜುಲೈ 2025, 8:10 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೆರೆ ಒತ್ತುವರಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ತೆರವುಗೊಳಿಸಿದ ಮಾಹಿತಿಯನ್ನು ದಾಖಲೆ ಸಮೇತ ಜಿಲ್ಲಾಡಳಿತಕ್ಕೆ ಸಲ್ಲಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೆಲ-ಜಲ ಹಾಗೂ ಪರಿಸರ ಸಂರಕ್ಷಣೆ ಕುರಿತು ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆರೆ ಸಂರಕ್ಷಣೆಗೆ ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಗಮನ ಹರಿಸಬೇಕು. ಕೆರೆ ಒತ್ತುವರಿ ಹಾಗೂ ತೆರವುಗೊಳಿಸಿರುವುದನ್ನು ದಾಖಲೆ ಸಮೇತ ವರದಿ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಮಳೆ ನೀರು ಸಂಗ್ರಹ ಕಾರ್ಯ ತಮಿಳುನಾಡಿನಲ್ಲಿ ಅದ್ಭುತವಾಗಿ ನಡೆದಿದೆ. ಕೊಳವೆಬಾವಿ ಮರುಪೂಣಕ್ಕೆ ಅನುದಾನ ಲಭ್ಯವಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೂ ತೊಂದರೆ ಉಂಟಾಗುತ್ತಿದೆ. ಇಂತಹ ಕೊಳವೆಬಾವಿಗಳ ಮರುಪೂರಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ಅಂಗನವಾಡಿ, ವಿದ್ಯಾರ್ಥಿನಿಲಯ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಮಳೆನೀರು ಸಂಗ್ರಹದ ವ್ಯವಸ್ಥೆ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಪರಿಸರ ಸಂರಕ್ಷಣೆಯ ಕ್ರಾಂತಿ ಒಂದೇ ದಿನದಲ್ಲಿ ಸಾಧ್ಯವಿಲ್ಲ. ಇದು ಹಂತಹಂತವಾಗಿ ಜನಾಂದೋಲನವಾಗಿ ರೂಪುಗೊಳ್ಳಬೇಕು’ ಎಂದು ಹೇಳಿದರು.

‘ಬೂದು ನೀರು, ಕಪ್ಪು ನೀರು ನಿರ್ವಹಣೆ, ಸ್ವಚ್ಛತೆಗೆ ಸರ್ಕಾರದಲ್ಲಿ ಅನುದಾನದ ಲಭ್ಯತೆ ಇದೆ. ಇದಕ್ಕೆ ₹ 4,000 ಕೋಟಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದರಲ್ಲಿ ಒಂದಷ್ಟು ಭಾಗವನ್ನು ಜಿಲ್ಲೆಗೂ ತರಲು ಅವಕಾಶವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಉಪವಿಭಾಗಾಧಿಕಾರಿಗಳಾದ ಸಂತೋಷ್‌ ಪಾಟೀಲ್‌, ಅಭಿಷೇಕ್‌, ನಾಗರಿಕ ಹಿತರಕ್ಷಣಾ ಸಮಿತಿಯ ಈಶ್ವರಪ್ಪ, ರೈತ ಮುಖಂಡ ಸಿದ್ಧನೂರು ವಿಶ್ವನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.