ADVERTISEMENT

ಚನ್ನಗಿರಿ: ಸಮಗ್ರ ಅಭಿವೃದ್ಧಿ ಕಾಣದ ಅಡಿಕೆ ನಾಡು

ಶೈಕ್ಷಣಿಕ ಪ್ರಗತಿ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಚನ್ನಗಿರಿ ತಾಲ್ಲೂಕು

ಎಚ್.ವಿ.ನಟರಾಜ್
Published 14 ಆಗಸ್ಟ್ 2022, 3:54 IST
Last Updated 14 ಆಗಸ್ಟ್ 2022, 3:54 IST
ಚನ್ನಗಿರಿ ಪಟ್ಟಣದಲ್ಲಿರುವ ಕೆಳದಿ ಚೆನ್ನಮ್ಮ ಕಟ್ಟಿಸಿರುವ ಕೋಟೆ.
ಚನ್ನಗಿರಿ ಪಟ್ಟಣದಲ್ಲಿರುವ ಕೆಳದಿ ಚೆನ್ನಮ್ಮ ಕಟ್ಟಿಸಿರುವ ಕೋಟೆ.   

ಚನ್ನಗಿರಿ: ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರಿದ ಮೇಲೆ ಶೈಕ್ಷಣಿಕವಾಗಿ ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದುತ್ತದೆ ಎಂಬ ಕನಸು ಕಂಡವರು ಹಲವರು. ಆದರೆ, ಶೈಕ್ಷಣಿಕ ಪ್ರಗತಿಗೆ ಉನ್ನತ ಕಾಲೇಜುಗಳು ಇದುವರೆಗೆ ಪ್ರಾರಂಭಗೊಂಡಿಲ್ಲ.

ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿದ್ದ ತಾಲ್ಲೂಕು ಸಾಹಿತ್ಯಿಕ ಚಟುವಟಿಕೆಯಲ್ಲಿ ಮುಂದಿತ್ತು. ಜತೆಗೆ ತಾಲ್ಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಲು ಇದುವೆರೆಗೆ ಆಯ್ಕೆಯಾದ ಯಾವ ಜನಪ್ರತಿನಿಧಿಗಳೂ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸದಿರುವುದು ದುರ್ದೈವದ ಸಂಗತಿಯಾಗಿದೆ.

1997ರಿಂದ ಈ ತಾಲ್ಲೂಕು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ರೈತರ ಬದುಕು ಹಸನಾಗಿದೆ. ಇನ್ನು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಡಿಸೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಸಂತೇಬೆನ್ನೂರು ಹಾಗೂ ಬಸವಾಪಟ್ಟಣ ಮತ್ತು ಕಸಬಾ ಹೋಬಳಿಗಳ ರೈತರಿಗೆ ಅನುಕೂಲವಾಗಲಿದೆ.

ADVERTISEMENT

‘ದಾವಣಗೆರೆ ಹೇಳಿ ಕೇಳಿ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಕಾಂಚಾಣ ಸದ್ಧು ಕೇಳಿ ಬರುತ್ತದೆ. ಜಿಲ್ಲಾ ಕೇಂದ್ರಕ್ಕೆ ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದರೆ ಜೇಬು ತುಂಬಾ ಹಣ ಇರಬೇಕಾಗುತ್ತದೆ. ದುಡ್ಡಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ’ಎನ್ನುತ್ತಾರೆ ಕನ್ನಡ ಪರ ಸಂಘಟನೆ ಹೋರಾಟಗಾರ ಬುಳ್ಳಿ ನಾಗರಾಜ್.

‘ಚನ್ನಗಿರಿ ಪಟ್ಟಣ ಸೇರಿದಂತೆ ಉಬ್ರಾಣಿ ಹಾಗೂ ಕಸಬಾ ಹೋಬಳಿಗಳ ಜನರಿಗೆ ಶಿವಮೊಗ್ಗ ಜಿಲ್ಲಾ ಕೇಂದ್ರ ಕೇವಲ 40 ಕಿಮೀ ದೂರದಲ್ಲಿತ್ತು. ಜನರು ಜಿಲ್ಲಾ ಕೇಂದ್ರಕ್ಕೆ ಹೋಗಿ ಸಲೀಸಾಗಿ ಕೆಲಸ, ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ದಾವಣಗೆರೆ ಜಿಲ್ಲಾ ಕೇಂದ್ರ ಚನ್ನಗಿರಿ ಪಟ್ಟಣಕ್ಕೆ 60 ಕಿ.ಮೀ ಹಾಗೂ ಉಬ್ರಾಣಿ ಹೋಬಳಿಯವರಿಗೆ 90 ಕಿ.ಮೀ ದೂರದಲ್ಲಿದೆ. ಜನರು ಜಿಲ್ಲಾ ಕೇಂದ್ರಕ್ಕೆ ಹೋಗಿ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ, ಕಾರ್ಯಗಳನ್ನು ಮಾಡಿಕೊಂಡು ಬರಲು ಇಡೀ ದಿನ ಬೇಕಾಗುತ್ತದೆ’ಎಂದುತಿಳಿಸಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿದ್ದಾಗ ತಾಲ್ಲೂಕು ಸಾಹಿತ್ಯಿಕವಾಗಿ ಸಮೃದ್ಧವಾಗಿತ್ತು. ಈಗ ತುಂಬಾ ಸೊರಗಿ ಹೋಗಿದೆ. 1997ರಲ್ಲಿ ದಾವಣಗೆರೆ ಜಿಲ್ಲೆಗೆ ತಾಲ್ಲೂಕನ್ನು ಸೇರಿಸುವುದನ್ನು ವಿರೋಧಿಸಿ, ಬಿ.ಎಸ್. ನಾಗರಾಜ್, ಒ.ಎಸ್. ನಾಗರಾಜ್, ಸಿ.ಎಚ್. ಶ್ರೀನಿವಾಸ್, ಬುಳುಸಾಗರ ಸಿದ್ಧರಾಮಣ್ಣ ಹಾಗೂ ಡಿಎಸ್ಎಸ್ ಸಂಘಟನೆಗಳು ಪ್ರಬಲ ಹೋರಾಟ ಮಾಡಿದ್ದವು. ಆದರೆ, ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ತಮ್ಮ ಸ್ವಂತ ಗ್ರಾಮ ಕಾರಿಗನೂರು ಸೇರಿ ಬಸವಾಪಟ್ಟಣ ಹೋಬಳಿಯವರಿಗೆ ದಾವಣಗೆರೆ ಹತ್ತಿರವಾಗುತ್ತದೆ ಎಂದು ಹಠಕ್ಕೆ ಬಿದ್ದು, ದಾವಣಗೆರೆಗೆ ಸೇರ್ಪಡೆ ಮಾಡಿದರು’ ಎಂದು ಹೇಳಿದರು.

‘ಚರಂಡಿ, ಕಾಂಕ್ರೀಟ್ ರಸ್ತೆ, ಸಮುದಾಯ ಭವನ, ದೇವಸ್ಥಾನ ನಿರ್ಮಾಣ, ಸರ್ಕಾರಿ ಕಚೇರಿ ನಿರ್ಮಾಣ ಮಾಡುವುದರಿಂದ ಮಾತ್ರ ತಾಲ್ಲೂಕು ಸಂಪೂರ್ಣ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತಾಲ್ಲೂಕಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಇದುವರೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಯಾವುದೇ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದಾಗಿಲ್ಲ’ಎಂದು ಹೊದಿಗೆರೆ ರಮೇಶ್
ಆರೋಪಿಸಿದರು.

‘ಉನ್ನತ ಶಿಕ್ಷಣ ಸ್ಥಳೀಯವಾಗಿ ಸಿಗಲಿ’
‘ತಾಲ್ಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಯಾವುದೇ ಎಂಜಿನಿಯರಿಂಗ್‌ ಕಾಲೇಜು, ಬಿ.ಇಡಿ, ಡಿ.ಇಡಿ ಕಾಲೇಜುಗಳನ್ನು ಇದುವರೆಗೆ ಸ್ಥಾಪನೆ ಮಾಡಿಲ್ಲ. ಹಾಗಾಗಿ ತಾಲ್ಲೂಕಿನ ಬಡ ವರ್ಗಗಳ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಶಿವಮೊಗ್ಗ, ದಾವಣಗೆರೆ ಮುಂತಾದ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿದೆ. ಈ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ ಪಡೆಯುವಷ್ಟು ಆರ್ಥಿಕವಾಗಿ ವಿದ್ಯಾರ್ಥಿಗಳು ಶಕ್ತರಾಗಿರುವುದಿಲ್ಲ. ಹಾಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು’ ಎಂದು ಹೊದಿಗೆರೆ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.