ADVERTISEMENT

ನ್ಯಾಮತಿ | ತಾಲ್ಲೂಕಿನ ಸ್ಥಾನಮಾನ ಸಿಕ್ಕರೂ ಅಭಿವೃದ್ಧಿ ಗೌಣ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 3:15 IST
Last Updated 24 ಡಿಸೆಂಬರ್ 2025, 3:15 IST
ನ್ಯಾಮತಿಯ ಮಹಾಂತೇಶ್ವರ ರಸ್ತೆಯ ತಿರುವಿನಲ್ಲಿ ದ್ವಿಚಕ್ರ ಸೇರಿ ಇತರೆ ವಾಹನಗಳನ್ನು ನಿಲುಗಡೆ ಮಾಡಿರುವುದು 
ನ್ಯಾಮತಿಯ ಮಹಾಂತೇಶ್ವರ ರಸ್ತೆಯ ತಿರುವಿನಲ್ಲಿ ದ್ವಿಚಕ್ರ ಸೇರಿ ಇತರೆ ವಾಹನಗಳನ್ನು ನಿಲುಗಡೆ ಮಾಡಿರುವುದು    

ನ್ಯಾಮತಿ: ತಾಲ್ಲೂಕಿನ ಸ್ಥಾನಮಾನ ಲಭಿಸಿ ಆರು ವರ್ಷ ಕಳೆಯುತ್ತಿದ್ದರೂ ನ್ಯಾಮತಿಯಲ್ಲಿ ನಗರ ಮತ್ತು ಹಳ್ಳಿಗಳಿಂದ ಬರುವ ಜನರ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶವೇ ಇಲ್ಲ. ರಸ್ತೆಯ ಇಕ್ಕೆಲ, ಸಾರ್ವಜನಿಕ ಸ್ಥಳ ಹೀಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ನ್ಯಾಮತಿಯ ಜನ ತಾಲ್ಲೂಕು ಕಚೇರಿ ಹೊರತುಪಡಿಸಿ, ಉಳಿದ ಎಲ್ಲದಕ್ಕೂ ಹಳೆಯ ತಾಲ್ಲೂಕು ಹೊನ್ನಾಳಿಯನ್ನೇ ಅವಲಂಬಿಸುವಂತಾಗಿದೆ. ನೂತನ ತಾಲ್ಲೂಕಿನ ಅಭಿವೃದ್ಧಿ ಶ್ರಮಿಸಬೇಕಿದ್ದ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. 

ಕುಡಿಯುವ ನೀರಿನ ಪೈಪ್‌ಗಳ ಅಳವಡಿಕೆ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಒಳಚರಂಡಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಓಡಾಡಲೂ ಜನ ತೊಂದರೆ ಎದುರಿಸುವಂತಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಇಲ್ಲ. ಇದರಿಂದಾಗಿ ಪ್ರಯಾಣಿಕರ ಗೋಳು ಹೇಳತೀರದಾಗಿದೆ.

ADVERTISEMENT

‘ನ್ಯಾಮತಿಯು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ರಸ್ತೆ ವಿಸ್ತರಣೆ ಆಗಿದೆ. ಆದರೂ ವಾಹನಗಳ ನಿಲುಗಡೆ ಸಮಸ್ಯೆಗೆ ನೀಗಿಲ್ಲ. ನಾನಾ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುವ ಜನ ಹಿಡಿ ಶಾಪ ಹಾಕುವುದು ಸಾಮಾನ್ಯವಾಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಲಕ್ಷಾಂತರ ರೂಪಾಯಿ ಅನುದಾನ ಎಲ್ಲಿಗೆ ಹೋಗುತ್ತಿದೆ’ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.   

ನೂರಾರು ವಾಹನ ಸಂಚಾರ: ಹೊನ್ನಾಳಿಯಿಂದ ನ್ಯಾಮತಿ, ಸವಳಂಗ ಮಾರ್ಗವಾಗಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಿಲುಗಡೆಗೆ ಸೂಕ್ತ ನಿಲ್ದಾಣವೇ ಇಲ್ಲ. ಆದ್ದರಿಂದ ಪ್ರಯಾಣಿಕರು ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ರಸ್ತೆಯಲ್ಲೇ ನಿಲ್ಲುವ ದುಃಸ್ಥಿತಿ ಎದುರಾಗಿದೆ.   

ಶತಮಾನಗಳಿಂದಲೂ ವ್ಯಾಪಾರ ವಹಿವಾಟಿಗೆ ನ್ಯಾಮತಿ ಪ್ರಸಿದ್ಧಿ. ತಾಲ್ಲೂಕು ಆದ ನಂತರ ಕಚೇರಿ ಕೆಲಸ, ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು, ನೌಕರರು, ರೈತರು, ವ್ಯಾಪಾರಸ್ಥರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿದೆ. ಹೀಗೆ ಬರುವವರು ಗಾಂಧಿ ರಸ್ತೆ, ನೆಹರೂ ರಸ್ತೆ, ಮಹಾಂತೇಶ್ವರ ರಸ್ತೆ, ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. 

ಪಟ್ಟಣ ಪಂಚಾಯಿತಿ ತಿರುವಿನ ಮಹಾಂತೇಶ್ವರ ರಸ್ತೆಯಲ್ಲಿ ಬ್ಯಾಂಕ್, ಕ್ಲಿನಿಕ್, ಖಾಸಗಿ ಆಸ್ಪತ್ರೆಗಳಿವೆ. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯ ರಸ್ತೆಯ ಅಕ್ಕಪಕ್ಕದಲ್ಲಿ ಹಣ್ಣಿನ ಗಾಡಿಗಳು, ಎಳನೀರು, ತರಕಾರಿ ಮಾರಾಟಗಾರರು ವ್ಯಾಪಾರದಲ್ಲಿ ತೊಡಗುವುದರಿಂದ ಸಂಚಾರ ವ್ಯವಸ್ಥೆಗೆ ಸಂಚಕಾರ ಉಂಟಾಗಿದೆ.  

ನಾಲ್ಕು ದಶಕಗಳಿಂದ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೇ ಇರುವುದು ತಾಲ್ಲೂಕಿನ ದುರಂತ. ಹೆಸರಿಗಷ್ಟೇ ಇರುವ ಬಸ್ ನಿಲ್ದಾಣ ಶಿಥಿಲಾವಸ್ಥೆ ತಲುಪಿದೆ. ಶೌಚಾಲಯ ಸೌಲಭ್ಯ ಇಲ್ಲದೇ ಇರುವುದರಿಂದ ಹೊರಗಿನಿಂದ ಬಂದ ಪ್ರಯಾಣಿಕರು ಅವ್ಯವಸ್ಥೆ ಕಂಡು ಶಪಿಸುವಂತಾಗಿದೆ. ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಸಂಚಾರ ನಿಯಮಗಳನ್ನು ಯಾರೂ ಪಾಲನೆ ಮಾಡುತ್ತಿಲ್ಲ. ದಂಡಾಸ್ತ್ರಕ್ಕೂ ಬಗ್ಗುತ್ತಿಲ್ಲ. ಇದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. 

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿ 5 ವರ್ಷಗಳಾದರೂ ಚುನಾವಣೆ ನಡೆದಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಇರುವುದು ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣ 
ಜಿ.ನಿಜಲಿಂಗಪ್ಪ, ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ 
ಪಟ್ಟಣದಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ನೀಗಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು 
ಪಿ.ಗಣೇಶರಾವ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.