ADVERTISEMENT

ನ್ಯಾಮತಿ: ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಮೆಟ್ಟಿಲೇರಿದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:36 IST
Last Updated 31 ಜುಲೈ 2025, 6:36 IST
<div class="paragraphs"><p>ನ್ಯಾಮತಿಯ ಎಸ್‌ಬಿಐ ವ್ಯವಸ್ಥಾಪಕರಿಗೆ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಗ್ರಾಹಕರು ಮನವಿ ಸಲ್ಲಿಸಿದರು</p></div>

ನ್ಯಾಮತಿಯ ಎಸ್‌ಬಿಐ ವ್ಯವಸ್ಥಾಪಕರಿಗೆ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಗ್ರಾಹಕರು ಮನವಿ ಸಲ್ಲಿಸಿದರು

   

ನ್ಯಾಮತಿ: ಚಿನ್ನಾಭರಣ ಅಡವಿಟ್ಟು ಪಡೆದಿದ್ದ ಸಾಲ ಮರುಪಾವತಿಸಲು ಸಿದ್ಧರಿರುವ ಗ್ರಾಹಕರಿಗೆ ಬ್ಯಾಂಕ್‌ನಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಕಾರಣಕ್ಕೆ ಗ್ರಾಹಕರು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಿಂದ ಬ್ಯಾಂಕ್ ವ್ಯವಸ್ಥಾಪಕರಿಗೆ ಬುಧವಾರ ನೋಟಿಸ್‌ ನೀಡಿದರು. 

ನ್ಯಾಮತಿಯಲ್ಲಿನ ಎಸ್‌ಬಿಐ ಶಾಖೆಯಲ್ಲಿ 2024ರ ಅಕ್ಟೋಬರ್ 26ರಂದು ದರೋಡೆ ನಡೆದಿತ್ತು. 509 ಗ್ರಾಹಕರಿಗೆ ಸೇರಿದ್ದ 17 ಕೆ.ಜಿ. 705 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಪ್ರಕರಣ ಭೇದಿಸಿದ್ದ ಪೊಲೀಸರು ಮಾರ್ಚ್ 27ರಂದು 6 ಜನರನ್ನು ಬಂಧಿಸಿ 17 ಕೆ.ಜಿ. 100 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು. 

ADVERTISEMENT

ಈ ಚಿನ್ನಾಭರಣವನ್ನು ಗ್ರಾಹಕರಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಆದರೂ, ಗ್ರಾಹಕರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಲಾಗಿತ್ತು. ಪೊಲೀಸರು ಮತ್ತು ಬ್ಯಾಂಕ್ ವ್ಯವಸ್ಥಾಪಕರ ಗೊಂದಲ‌ದ ಹೇಳಿಕೆಯಿಂದ ಅಸಮಾಧಾನಗೊಂಡ ಗ್ರಾಹಕರು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಮೊರೆ ಹೋಗಿದ್ದರು. ಇದೀಗ ಕೇಂದ್ರದ ಮೂಲಕವೇ ನೋಟಿಸ್ ಕೊಡಿಸಿದ್ದಾರೆ.  

‘ಚಿನ್ನಾಭರಣವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ, ಬ್ಯಾಂಕ್‌ನವರು ಕಾನೂನು ರೀತ್ಯಾ ನ್ಯಾಯಾಲಯದಿಂದ ಚಿನ್ನಾಭರಣ ಪಡೆಯಬೇಕು’ ಎಂದು ಪೊಲೀಸರು ಗ್ರಾಹಕರಿಗೆ ಉತ್ತರಿಸುತ್ತಾರೆ. 

‘ಸಾಲಕ್ಕಾಗಿ ಅಡವಿಟ್ಟ ಗ್ರಾಹಕರ ಚಿನ್ನಾಭರಣ ವಿವರಗಳ ಚೀಟಿ, ಸಾಲ ಪಡೆದ ಮಾಹಿತಿಯನ್ನು ಚಿಕ್ಕ ಚೀಲದಲ್ಲಿ ಹಾಕಿ ಇಡಲಾಗಿತ್ತು. ಇದೀಗ ಚಿನ್ನಾಭರಣದ ಜೊತೆಗೆ ಚೀಟಿಗಳಿಲ್ಲ. ಚಿನ್ನಾಭರಣದ ನೈಜತೆ, ಅದರ ವಾರಸುದಾರರನ್ನು ಗುರುತಿಸಬೇಕಾಗಿದೆ. ಈ ಸಂಬಂಧ ಜಿಲ್ಲಾ ನ್ಯಾಯಾಲದಲ್ಲಿ ಪ್ರಕರಣ ಇದ್ದು, ಗುರುವಾರ ವಿಚಾರಣೆ ನಡೆಯಲಿದೆ. ಆ ಬಳಿಕ ಮೇಲಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರಿಗೆ ಸಮಜಾಯಿಷಿ ನೀಡಿದರು. 

ಚಿನ್ನಾಭರಣದ ಸಾಲ ತೀರಿಸಲು ನಾವು ಸಿದ್ಧರಿದ್ದೇವೆ ಎಂದು ಗ್ರಾಹಕರಾದ ಎಂ.ಎಚ್.ಮಂಜಪ್ಪ, ನಾಗರಾಜಪ್ಪ ಕೊಡಚಗೊಂಡನಹಳ್ಳಿ, ರವಿ ಚಟ್ನಹಳ್ಳಿ, ಉಮೇಶ ಕೆಂಚಿಕೊಪ್ಪ, ಜಯಚಂದ್ರ ರಾಮೇಶ್ವರ, ಸಿದ್ಧನಗೌಡ ಯರಗನಾಳ್, ನಾಗರಾಜ ಚಟ್ನಹಳ್ಳಿ, ಮಹೇಂದ್ರ ದೊಡ್ಡೇತ್ತಿನಹಳ್ಳಿ, ಶಿವಲಿಂಗಪ್ಪ ಯರಗನಾಳ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.