ADVERTISEMENT

ದಿಢೀರ್‌ ಶ್ರೀಮಂತನಾಗುವ ಬಯಕೆ: ಬ್ಯಾಂಕಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:34 IST
Last Updated 14 ಮೇ 2025, 14:34 IST
   

ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕಿನ ಚಿನ್ನಾಭರಣವನ್ನು ಕದ್ದು ಬೇರೆಡೆ ಅಡವಿಟ್ಟು ₹ 2 ಕೋಟಿಗೂ ಅಧಿಕ ಸಾಲ ಪಡೆದು ‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್‌ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್‌ ಅಧಿಕಾರಿಯೊಬ್ಬ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕಿನ ಚಿನ್ನ ಸಾಲದ ಅಧಿಕಾರಿ ಟಿ.ಪಿ.ಸಂಜಯ್‌ (33) ಬಂಧಿತ ಆರೋಪಿ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದ ಕದ್ದು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದರೊಂದಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ 2 ಕೆ.ಜಿ. 744 ಗ್ರಾಂ ನಕಲಿ ಚಿನ್ನಾಭರಣವನ್ನು ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ತಾನೇ ಅಡವಿಟ್ಟುಕೊಂಡು ₹ 1.52 ಕೋಟಿ ಸಾಲ ಪಡೆದಿದ್ದ ಸಂಗತಿ ಕೂಡ ತನಿಖೆಯಿಂದ ಗೊತ್ತಾಗಿದೆ.

ADVERTISEMENT

‘ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ನ ಚಿನ್ನ ಸಾಲದ ಅಧಿಕಾರಿಯಾಗಿ ಆರೋಪಿ 2024ರ ಅಕ್ಟೋಬರ್‌ನಿಂದ ಕೆಲಸ ಮಾಡುತ್ತಿದ್ದ. ಚಿನ್ನಾಭರಣವನ್ನು ಪರಿಶೀಲಿಸಿ ಅಡವಿಟ್ಟುಕೊಂಡು ದಾಖಲೆಗಳನ್ನು ಸೃಜಿಸುವುದು ಆರೋಪಿಯ ಜವಾಬ್ದಾರಿಯಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಅಸಲಿ ಚಿನ್ನಾಭರಣವನ್ನು ಹಂತಹಂತವಾಗಿ ಕಳವು ಮಾಡಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಳವು ಮಾಡಿದ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಫೈನಾನ್ಸ್‌ನಲ್ಲಿ ತಂದೆ, ತಾಯಿ ಹಾಗೂ ತನ್ನ ಹೆಸರಿನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ. ಆನ್‌ಲೈನ್‌ ಜೂಜು ಹಾಗೂ ಮೋಜು ಮಸ್ತಿಗೆ ಬಹುತೇಕ ಹಣವನ್ನು ಖರ್ಚು ಮಾಡಿದ್ದಾನೆ’ ಎಂದು ವಿವರಿಸಿದರು.

‘ಬ್ಯಾಂಕಿನ ಅಧಿಕಾರಿಗಳು ಏಪ್ರಿಲ್‌ನಲ್ಲಿ ಚಿನ್ನಾಭರಣ ಸಾಲದ ಲೆಕ್ಕ ಪರಿಶೋಧನೆ ನಡೆಸಿದಾಗ ಗ್ರಾಹಕರು ಅಡವಿಟ್ಟಿದ್ದ ಚಿನ್ನ ಕಳವಾಗಿರುವ ಸಂಗತಿ ಪತ್ತೆಯಾಗಿತ್ತು. ಸಿ.ಸಿ.ಟಿವಿ ಪರಿಶೀಲಿಸಿದ ಬ್ಯಾಂಕ್ ಅಧಿಕಾರಿಗಳು ಕೆ.ಟಿ.ಜೆ ನಗರ ಠಾಣೆಯ ಮೆಟ್ಟಿಲೇರಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣವನ್ನು ಬೇರೆಡೆ ಅಡವಿಟ್ಟಿದ್ದು ಗೊತ್ತಾಗಿತ್ತು. ನ್ಯಾಯಾಲಯದ ಅನುಮತಿ ಪಡೆದು ಬ್ಯಾಂಕಿನಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬಿಸಿಎ ಪದವೀಧರನಾಗಿರುವ ಆರೋಪಿ ಸಂಜಯ್‌ ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಚಿನ್ನಾಭರಣ ಸಾಲ ಅಡವಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದ. ಕಳೆದ ವರ್ಷವಷ್ಟೇ ಆರೋಪಿಗೆ ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚು ಚಿನ್ನಾಭರಣವನ್ನು ಅಡವಿಟ್ಟ ಆರೋಪಿಯ ಬಗ್ಗೆ ಬ್ಯಾಂಕ್‌ ಮೆಚ್ಚುಗೆ ವ್ಯಕ್ತಪಡಿಸಿತ್ತು. ಕೃತ್ಯದ ಬಗ್ಗೆ ಅನುಮಾನ ಮೂಡದಂತೆ ಆರೋಪಿ ವರ್ತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಚಿನ್ನ ಅಡವಿಟ್ಟು ಸಾಲ

ಅತ್ಯಂತ ಕಡಿಮೆ ಅವಧಿಯಲ್ಲಿ ಬ್ಯಾಂಕಿನ ಎಲ್ಲ ಅಧಿಕಾರಿಗಳ ವಿಶ್ವಾಸವನ್ನು ಆರೋಪಿ ಗಳಿಸಿದ್ದ. ಚಿನ್ನಾಭರಣ ಸಾಲಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಯನ್ನು ಪಡೆದುಕೊಂಡಿದ್ದ. ಇದೇ ಅವಕಾಶವನ್ನು ಬಳಸಿಕೊಂಡು ನಕಲಿ ಚಿನ್ನವನ್ನು ಅಡವಿಟ್ಟುಕೊಂಡು ತಾನೇ ಸಾಲ ಪಡೆದಿದ್ದ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ.

‘ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಹಂತ–ಹಂತವಾಗಿ ನಕಲಿ ಚಿನ್ನಾಭರಣಗಳನ್ನು ತನ್ನದೇ ಬ್ಯಾಂಕಿನಲ್ಲಿ ಅಡವಿಟ್ಟುಕೊಂಡಿದ್ದ. ಚಿನ್ನಾರಭರಣ ಪರಿಶೀಲನೆ, ದಾಖಲೆಗಳ ಸೃಷ್ಟಿಯ ಕೆಲಸವನ್ನು ತಾನೇ ನಿರ್ವಹಿಸಿದ್ದ. ಇಂತಹ 2 ಕೆ.ಜಿ 744 ಗ್ರಾಂ ನಕಲಿ ಚಿನ್ನಾಭರಣವನ್ನು ಅಡವಿಟ್ಟು ₹ 1.52 ಕೋಟಿ ಸಾಲ ಪಡೆದಿದ್ದ’ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.