ADVERTISEMENT

ಜಗಳೂರು:ಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ

ಜಗಳೂರು: 10 ಮಾರಾಟಗಾರರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 16:32 IST
Last Updated 16 ಆಗಸ್ಟ್ 2020, 16:32 IST
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿ ಶ್ರೀನಿವಾಸುಲು ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತು
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿ ಶ್ರೀನಿವಾಸುಲು ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತು   

ಜಗಳೂರು:ತಾಲ್ಲೂಕಿನ ವಿವಿಧೆಡೆ ಬೀಜ ಹಾಗೂ ಗೊಬ್ಬರ ಮಾರಾಟಗಾರರ ಅಂಗಡಿಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಭಾನುವಾರ ದಿಢೀರ್ ದಾಳಿ ನಡೆಸಿ ಯೂರಿಯಾ ಹಾಗೂ ರಸಗೊಬ್ಬರ ದಾಸ್ತಾನು, ದಾಖಲೆಗಳನ್ನು ಪರಿಶೀಲಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸುಲು ನೇತೃತ್ವದಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ಬಿಳಿಚೋಡು, ಸೊಕ್ಕೆ ಹೋಬಳಿ ವ್ಯಾಪ್ತಿಯ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಲಾಯಿತು. ಯೂರಿಯಾ ಗೊಬ್ಬರ ವಿತರಣೆಯಲ್ಲಿನ ಲೋಪ ಸೇರಿ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸದ ತಾಲ್ಲೂಕಿನ 10 ಮಾರಾಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆಯಾಗಿದ್ದು, ಕೃತಕ ಅಭಾವ ಸೃಷ್ಟಿಸಿ, ದು‌ಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಕಾರಣ ಅಧಿಕಾರಿಗಳ ದಾಳಿ ಮಹತ್ವ ಪಡೆದಿದೆ.

ADVERTISEMENT

‘ಕೃಷಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪರಿಕರಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಗೊಬ್ಬರದ ದಾಸ್ತಾನು ಮತ್ತು ಅಗತ್ಯ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸಲಾಯಿತು. ನಾಮಫಲಕಗಳಲ್ಲಿ ದರಪಟ್ಟಿ ಪ್ರಕಟಿಸದ ಹಾಗೂ ದಾಸ್ತಾನು, ಮಾರಾಟಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ನಿರ್ವಹಣೆ ಮಾಡದಿರುವ ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ತೊಂದರೆಯಾಗದಂತೆ ಗೊಬ್ಬರ ಹಾಗೂ ಬೀಜ ವಿತರಣೆ ಮಾಡಬೇಕು. ಯಾವುದೇ ಲೋಪಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸುಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.