ADVERTISEMENT

ಸರ್ಕಾರಿ ಶಾಲೆ ದತ್ತು ಪಡೆಯಲು ಸೂಚನೆ

ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ ತಾಕೀತು

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್‌ ಇದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್‌ ಇದ್ದರು.   

ದಾವಣಗೆರೆ: ಸರ್ಕಾರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕನಿಷ್ಠ ಒಂದು ಸರ್ಕಾರಿ ಶಾಲೆಯನ್ನಾದರೂ ದತ್ತು ಪಡೆದು, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಎಸ್ಸೆಸ್ಸೆಲ್ಸಿಯಲ್ಲಿ ಶೇ 80ಕ್ಕಿಂತಲೂ ಹೆಚ್ಚು ಫಲಿತಾಂಶ ಜಿಲ್ಲೆಗೆ ಬರುತ್ತಿದೆ. ಆದರೆ, ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕೇವಲ ಶೇ 27 ಇದೆ. ಹೀಗಾಗಿ ಪ್ರಾಥಮಿಕ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ರಾಮನಗರ, ಹಾಸನ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಲವು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಅಧಿಕಾರಿಗಳು ಶಾಲೆ ದತ್ತು ಪಡೆಯಬೇಕು. ಮೊದಲ ಹಂತದಲ್ಲಿ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ತಿಂಗಳಿಗೆ ಒಮ್ಮೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಕಲಿಕಾ ಗುಣಮಟ್ಟವನ್ನು ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ಬೆಂಗಳೂರಿನ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್‌) ಅಡಿ ₹ 150 ಕೋಟಿ ಅನುದಾನ ಲಭಿಸಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಸಿ.ಎಸ್‌.ಆರ್‌. ಅಡಿ ಅನುದಾನ ಸಂಗ್ರಹಿಸಬೇಕು. ಶಾಸಕರೂ ದತ್ತು ಪಡೆಯುವಂತೆ ಪ್ರೇರೇಪಿಸಬೇಕು’ ಎಂದು ಉಮಾಶಂಕರ್‌ ಹೇಳಿದರು.

ADVERTISEMENT

‘2001ರಿಂದ 2019ರ ಅವಧಿಯಲ್ಲಿ ಶಾಸಕರ ನಿಧಿನಿಯಿಂದ ಶಾಲೆಗಳ ಅಭಿವೃದ್ಧಿಗೆ ಒಟ್ಟು ₹ 243 ಕೋಟಿ ಲಭಿಸಿದೆ. ಶಾಸಕರ ನಿಧಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ₹ 15.50 ಕೋಟಿ ಲಭಿಸಿದ್ದರೆ, ದಾವಣಗೆರೆಯಲ್ಲಿ ಕೇವಲ ₹ 6.60 ಕೋಟಿ ಸಿಕ್ಕಿದೆ. ಹೀಗಾಗಿ ಶಾಸಕರಿಂದಲೂ ಅನುದಾನ ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಾಮಾನ್ಯ ಪರೀಕ್ಷೆ: ‘ನಲಿ–ಕಲಿ’ ಇರುವ ತರಗತಿವರೆಗೆ ರಾಜ್ಯದ ಮಕ್ಕಳ ಕಲಿಕಾ ಮಟ್ಟವುದೇಶದಲ್ಲಿ 3ನೇ ಸ್ಥಾನದಲ್ಲಿದೆ. ಆದರೆ, ನಂತರದ ತರಗತಿಯ ಮಕ್ಕಳ ಕಲಿಕಾ ಮಟ್ಟ 12ನೇ ಸ್ಥಾನಕ್ಕೇರಿದೆ. ಕಲಿಕಾ ಮಟ್ಟವನ್ನು ಹೆಚ್ಚಿಸಲು ಈ ಬಾರಿಯಿಂದಲೇ 7ನೇ ತರಗತಿಗೆ ಸಾಮಾನ್ಯ ಪರೀಕ್ಷೆ ಆರಂಭಿಸಲಾಗುತ್ತಿದೆ. ಇದನ್ನು ಮುಂದೆ 5ನೇ ತರಗತಿಯಿಂದಲೇ ನಡೆಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ’ ಎಂದರು.

ಖಾತೆ ಮಾಡಿಸಿಕೊಳ್ಳಿ: ಸರ್ಕಾರಿ ಶಾಲೆಗಳ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಅಪ್‌ಡೇಟ್‌ ಮಾಡಿಸಿಕೊಳ್ಳಬೇಕು. ಯಾವ ಶಾಲೆಗಳ ಜಾಗಗಳಿಗೆ ಇನ್ನೂ ಖಾತೆಯಾಗಿಲ್ಲ ಎಂಬುದನ್ನು ಪತ್ತೆ ಮಾಡಿ ಕೂಡಲೇ ಜಿಲ್ಲಾಧಿಕಾರಿ ನೆರವು ಪಡೆದು ಖಾತೆ ಬದಲಾವಣೆ ಮಾಡಿಸಿಕೊಳ್ಳಬೇಕು. ಭೂಮಿಯ ಬೆಲೆ ಹೆಚ್ಚುತ್ತಿರುವುದರಿಂದ ಭೂದಾನ ಮಾಡಿದವರ ವಾರಸುದಾರರು ಈಗ ತಕರಾರು ತೆಗೆಯುವ ಸಾಧ್ಯತೆ ಇದೆ. ಇದಕ್ಕೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕು’ ಎಂದು ಉಮಾಶಂಕರ್‌ ಅವರು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಅವರಿಗೆ ಸೂಚಿಸಿದರು.

ಅನುದಾನಕ್ಕೆ ಬೇಡಿಕೆ: ‘ಜಿಲ್ಲೆಯಲ್ಲಿ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಬಂದ ಅತಿವೃಷ್ಟಿಯಿಂದ ಅಂದಾಜು ₹ 18.98 ಕೋಟಿ ನಷ್ಟವಾಗಿತ್ತು. ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ₹ 7.80 ಕೋಟಿ ಬಿಡುಗಡೆ ಮಾಡಬೇಕಾಗಿದ್ದು, ಇನ್ನೂ ಅನುದಾನ ಬಂದಿಲ್ಲ. ಸಿಆರ್‌ಎಫ್‌ನಡಿ ₹ 46 ಲಕ್ಷ ಮೊತ್ತದ ಕೆಲಸ ಕೈಗೊಳ್ಳಲಾಗಿದೆ. ಸದ್ಯ ₹ 3 ಕೋಟಿ ಮಾತ್ರ ಖಾತೆಯಲ್ಲಿದ್ದು, ಇನ್ನಷ್ಟು ಅನುದಾನವನ್ನು ಸರ್ಕಾರದಿಂದ ತುರ್ತಾಗಿ ಬಿಡುಗಡೆ ಮಾಡಿಸಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

‘ಜಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ ಪೂರೈಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂದೇಹ ಮೂಡಿದೆ. ಹೀಗಾಗಿ ಟ್ಯಾಂಕರ್‌ ಬಿಲ್‌ಗಳನ್ನು ತಡೆಹಿಡಿಯಲಾಗಿದ್ದು, ಜಿಪಿಎಸ್‌ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ಸಭೆಗೆ ಮಾಹಿತಿ ನೀಡಿದರು.

ಕಂದಾಯ ಇಲಾಖೆಯ ಪ್ರಗತಿ ವಿವರ ನೀಡಿದ ಜಿಲ್ಲಾಧಿಕಾರಿ, ‘ಈ ಮೊದಲು 86 ಸಾವಿರ ಆರ್‌.ಟಿ.ಸಿ. ತಿದ್ದುಪಡಿ ಪ್ರಕರಣ ಬಾಕಿ ಉಳಿದಿತ್ತು. ಈಗ 17 ಸಾವಿರಕ್ಕೆ ಇಳಿಕೆಯಾಗಿದ್ದು, ಮಾರ್ಚ್‌ 31ರ ವೇಳೆಗೆ ಎಲ್ಲಾ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು. ಪಿಂಚಣಿ ಅದಾಲತ್‌ ಮೂಲಕ ವಿ.ಎ. ಹಾಗೂ ಆರ್‌.ಐ ಮೂಲಕ ಸರ್ವೆ ನಡೆಸಿ ಸುಮಾರು 25 ಸಾವಿರ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಸಕಾಲದಲ್ಲಿ ರ‍್ಯಾಂಕಿಂಗ್‌ ಕಡಿಮೆಯಾಗುತ್ತಿದ್ದು, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು’ ಎಂದು ಹೇಳಿದರು.

ವಸತಿ ಯೋಜನೆ, ನರೇಗಾ, ಸ್ವಚ್ಛ ಭಾರತ್‌ ಮಿಷನ್‌ ಸೇರಿ ಹಲವು ಯೋಜನೆಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿ ಮಾಹಿತಿ ಪಡೆದರು. ವಿವಿಧ ಇಲಾಖೆಗಳ ಪ್ರಗತಿಗಳನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿದ್ಯಾರ್ಥಿಗಳಲ್ಲಿ ಕನಸು ಬಿತ್ತನೆ ಯೋಜನೆ

‘ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ’ ಶೀರ್ಷಿಕೆಯಡಿ ಕುಗ್ರಾಮಗಳ ಸರ್ಕಾರಿ ಶಾಲೆಗೆ ಎಲ್ಲಾ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಒಂದು ದಿನ ತೆರಳಿ ಮಕ್ಕಳಲ್ಲಿ ದೊಡ್ಡ ಕನಸು ಬಿತ್ತುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಜನವರಿ 29ಕ್ಕೆ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮಕ್ಕೆ ಅಧಿಕಾರಿಗಳು ಹೋಗುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜವನ್ನು ವಿಸ್ತರಿಸಲಾಗುವುದು. ಯಾವ ಯಾವ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತವೆ, ಅವುಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡಲಾಗುವುದು. ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಲಾಗುವುದು. ಸರ್ಕಾರಿ ಬಸ್‌ನಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ತೆರಳೋಣ’ ಎಂದು ಹೇಳಿದರು.

ಶೀಘ್ರವೇ ಹೊನ್ನಾಳಿ ಉಪವಿಭಾಗ ರಚನೆ

‘ಹೊನ್ನಾಳಿ, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕುಗಳು ಒಳಗೊಂಡ ಹೊನ್ನಾಳಿ ಉಪವಿಭಾಗ ರಚನೆ ಬಗ್ಗೆ ಆಹ್ವಾನಿಸಿದ್ದ ಆಕ್ಷೇಪಣೆಯ ಅವಧಿ ಫೆ. 3ಕ್ಕೆ ಕೊನೆಗೊಳ್ಳಲಿದೆ. ಆ ಬಳಿಕ ನೂತನ ಉಪವಿಭಾಗ ರಚಿಸಲಾಗುವುದು. ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ₹ 1 ಕೋಟಿ ಅಗತ್ಯವಿದ್ದು, ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ನಿರ್ಮಿಸಿರುವ ರಂಗ ಮಂದಿರದಲ್ಲಿ ನಡುವೆ ಬಂದಿರುವ ಎರಡು ಪಿಲ್ಲರ್‌ ತೆರವುಗೊಳಿಸಲು ಹಾಗೂ ಸೌಂಡ್ ಪ್ರೂಫ್‌ ಮಾಡಲು ₹ 5 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತಿದೆ. ನ್ಯಾಮತಿ ತಾಲ್ಲೂಕು ಕಚೇರಿ ನಿರ್ಮಿಸಲು ₹ 10 ಕೋಟಿ ಅನುದಾನದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಭೆಯ ಗಮನಕ್ಕೆ ತಂದರು.

ಸಭೆ ವಿಳಂಬ: ಅಧಿಕಾರಿಗಳ ಕಾಲಹರಣ

ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮಧ್ಯಾಹ್ನ 12ಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ನಿಗದಿಯಾಗಿತ್ತು. ಆದರೆ, ಉಸ್ತುವಾರಿ ಕಾರ್ಯದರ್ಶಿ ಬರುವುದು ವಿಳಂಬವಾಗಲಿದೆ ಎಂಬ ಕಾರಣಕ್ಕೆ ಮಧ್ಯಾಹ್ನ 2.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ನಂತರ ಸಭೆಯನ್ನು 3ಕ್ಕೆ ಮುಂದೂಡಲಾಯಿತು. ಬಹುತೇಕ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ 3 ಗಂಟೆಗೆ ಬಂದು ಕಾಯುತ್ತ ಕುಳಿತರು. ಸಭೆ ಆರಂಭವಾಗದೇ ಇರುವುದರಿಂದ ಕಾದು ಬೇಸತ್ತ ಅಧಿಕಾರಿಗಳು ಹಾಡಹರಟೆ ಹೊಡೆಯುತ್ತ ಕಾಲಹರಣ ಮಾಡಿದರು. 4.15ಕ್ಕೆ ಜಿಲ್ಲಾಧಿಕಾರಿ ಬಂದರು. ಉಸ್ತುವಾರಿ ಕಾರ್ಯದರ್ಶಿ ಬಂದ ಬಳಿಕ 4.35ಕ್ಕೆ ಸಭೆ ಆರಂಭಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.