ADVERTISEMENT

11ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

ವಿದ್ಯುತ್ ಸಂಪರ್ಕ ಕಡಿತಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:52 IST
Last Updated 3 ಜುಲೈ 2022, 2:52 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರವು ಸ್ಪಂದಿಸದಿರುವುದು ಹಾಗೂ ರೈತರಿಂದ ಒತ್ತಾಯಪೂರ್ವಕವಾಗಿ ವಿದ್ಯುತ್ ದರ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಜುಲೈ 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

‘ಸರ್ಕಾರವು ಕಬ್ಬು ನಿಯಂತ್ರಣ ಮಂಡಳಿ ಸಭೆಯನ್ನು ಮೂರು ವರ್ಷಗಳಿಂದಲೂ ನಡೆಸದಿರುವುದು ಖಂಡನೀಯ. ಎಸ್‌ಎಪಿ (ಸ್ಟೇಟ್ ಅಡ್ವೈಸರಿ ಪ್ರೈಸ್)ಯನ್ನೂ 4 ವರ್ಷಗಳಿಂದ ಕೊಟ್ಟಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಫ್‌ಆರ್‌ಪಿಗಿಂತಲೂ ಕಡಿಮೆ ಬಿಲ್ ಕೊಡುತ್ತಿದ್ದಾರೆ. ಏಕೆಂದರೆ ಶಾಸಕರು, ಮಂತ್ರಿಗಳೇ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಅವರನ್ನು ಎದುರಿಸುವ ಶಕ್ತಿ ಎಂದು ಸಿಎಂಗೆ ಇಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

‘ವಿದ್ಯುತ್ ತಾರತಮ್ಯ ನೀತಿ ವಿರುದ್ಧ ರೈತಸಂಘದ ಮುಖಂಡ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಈ ಹಿಂದೆ ಕರ ನಿರಾಕರಣೆ ಚಳವಳಿ ನಡೆದಿದ್ದು, 13 ಜಿಲ್ಲೆಗಳ ಜನರು ವ್ಯಾಪಕವಾಗಿ ಬಿಲ್ ಕಟ್ಟಿರಲಿಲ್ಲ. ಪುಟ್ಟಣಯ್ಯ ನೇತೃತ್ವದಲ್ಲಿ ಸರ್ಕಾರದ ಜೊತೆ ಚರ್ಚಿಸಿದ ವೇಳೆ ಹಳೆ ಬಿಲ್‌ ಅನ್ನು ಮನ್ನಾ ಮಾಡಿತು. ಆದರೆ ಈಗ ಹಳೇ ಬಾಕಿ ವಸೂಲಿ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು’ ಎಂದರು.

ನರಗುಂದದಲ್ಲಿ ಬೃಹತ್ ಸಮಾವೇಶ: ‘ಜುಲೈ 21ರಂದು ನರಗುಂದದ ಬಂಡಾಯ ನಡೆದು 42 ವರ್ಷಗಳು ಸಂದಿದ್ದು, ಅದರ ನೆನಪಿಗೆ ರೈತ ಸೇನೆಯ ಜೊತೆಗೂಡಿ ಬೃಹತ್ ಸಮಾವೇಶ ನಡೆಸಲಾಗುವುದು. ದೆಹಲಿಯಿಂದ ಕಿಸಾನ್ ಮೋರ್ಚಾದ ಯೋಗೇಂದ್ರ ಯಾದವ್ ಆಗಮಿಸುವರು’ ಎಂದರು.

ನವೆಂಬರ್ 26ರಂದು ಲಡಾಯಿ: ‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ರಾಜ್ಯದಲ್ಲಿ ಶೇ 47ರಷ್ಟು ನೋಂದಣಿ ಜಾಸ್ತಿಯಾಗಿದೆ. ಸಣ್ಣ ಹಿಡುವಳಿದಾರರ ಭೂಮಿ ಬಂಡವಾಳಶಾಹಿಗಳ ಕೈವಶವಾಗುತ್ತಿದ್ದು, ಇದರ ವಿರುದ್ಧ ದೊಡ್ಡ ಹೋರಾಟ ನಡೆಸಲು ಸಂಯುಕ್ತ ಕರ್ನಾಟಕ ಹೋರಾಟ ಆಗಸ್ಟ್ ತಿಂಗಳಲ್ಲಿ 1500 ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷಾತೀತವಾಗಿ ಸಮಾವೇಶ ಮಾಡಿ ಈ ಮೂರು ಕಾಯ್ದೆಗಳ ವಿರುದ್ಧ ನಿರ್ಣಯ ಪಾಸ್ ಮಾಡಲಾಗುವುದು. 3 ಸಾವಿರ ಗ್ರಾಮಗಳಲ್ಲಿ ಕಾಯ್ದೆಗಳ ಅನಾಹುತಗಳ ಬಗ್ಗೆ ಜಾಗೃತಿ ಸಮಾವೇಶ ಮಾಡಲಾಗುವುದು. ನವೆಂಬರ್ 26ರಂದು ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಲಡಾಯಿ ಮಾಡಲಾಗುವುದು’ ಎಂದು ಹೇಳಿದರು.

‘ಶ್ವೇತ ಪತ್ರ ಹೊರಡಿಸಲಿ’: ‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು
ಆಗ್ರಹಿಸಿದರು.

ರೈತಮುಖಂಡರಾದ ನುಲೇನೂರು ಶಂಕ್ರಪ್ಪ, ಮಲ್ಲಯ್ಯ, ಕೊಗ್ಗಲೂರು ಹನುಮಂತಪ್ಪ, ರವಿಕಿರಣ್ ಪೂಣಚ್ಚ, ಅರುಣ್‌ಕುಮಾರ್ ಕುರುಡಿ, ಬುಳ್ಳಾಪುರ ಹನುಮಂತಪ್ಪ, ಟಿ.ಗೋಪಾಲ್, ರವಿ, ಶ್ರೀನಿವಾಸ್ ಇದ್ದರು.

ಚರ್ಚೆಗೆ ಈಗಲೂ ಬದ್ಧ

‘ರೈತ ಸಂಘಟನೆಗಳನ್ನು ಒಂದುಗೂಡಿಸಲು ಬಸವರಾಜಪ್ಪ ನನ್ನ ನಡುವೆ ಅಧಿಕೃತವಾಗಿ ಮಾತುಕತೆ ನಡೆದಿಲ್ಲ. ಚರ್ಚೆಗೆ ಈಗಲೂ ಮುಕ್ತವಾಗಿದ್ದೇವೆ. ವ್ಯಕ್ತಿಗಳು ಒಂದಾದರೆ ಸಂಘಟನೆಗಳು ಒಂದಾಗುವುದಿಲ್ಲ. ರೈತ ಸಂಘದ ವಿಚಾರಗಳು ಒಂದಾಗಬೇಕು. ಮೂಲ ಚಳವಳಿ, ತಾತ್ವಿಕ ಹಾಗೂ ಸೈದ್ಧಾಂತಿಕ ಸ್ಪಷ್ಟತೆ, ಆಶೋತ್ತರಗಳ ಗುರಿ, ರಾಜಕೀಯ ಸ್ಪಷ್ಟತೆ ಇರಬೇಕು. ಆಗ ಮಾತ್ರ ಒಗ್ಗಟ್ಟಾಗಿ ಸಂಘಟನೆ ಕಟ್ಟಬಹುದು’ ಎಂದು ಬಡಗಲಪುರ ನಾಗೇಂದ್ರ ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಹಸಿರು ಟವೆಲ್‌ ದುರುಪಯೋಗವಾಗುತ್ತಿದ್ದು, ಇದು ಮುಂದೊಂದು ದಿನ ಗಾಂಧಿ ಟೋಪಿಯ ರೀತಿ ಆಗುತ್ತಿದೆ. ಗಾಂಧಿ ಟೋಪಿಯನ್ನು ಒಳ್ಳೆಯವರು, ಕೆಟ್ಟವರು ಇಬ್ಬರೂ ಧರಿಸುತ್ತಾರೆ. ಹಸಿರು ಟವೆಲ್‌ನ ಮೌಲ್ಯ–ಘನತೆಗೆ ಮಸಿ ಬಳಿಯುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.