ADVERTISEMENT

ಕಾನ್ವೆಂಟ್‌ ಶಾಲೆ ಸರ್ಕಾರವೇ ತೆರೆಯಲಿ

ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪನಾಯ್ಕ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 11:10 IST
Last Updated 27 ಜೂನ್ 2018, 11:10 IST
‘ಶಾಲೆ ಕಡೆ ನನ್ನ ನಡೆ’ ಜನಜಾಗೃತಿ ಅಭಿಯಾನ ದಾವಣಗೆರೆಯಲ್ಲಿ ಬುಧವಾರ ನಡೆಯಿತು
‘ಶಾಲೆ ಕಡೆ ನನ್ನ ನಡೆ’ ಜನಜಾಗೃತಿ ಅಭಿಯಾನ ದಾವಣಗೆರೆಯಲ್ಲಿ ಬುಧವಾರ ನಡೆಯಿತು   

ದಾವಣಗೆರೆ: ಕಾನ್ವೆಂಟ್‌ಗಳನ್ನು ಸರ್ಕಾರವೇ ತೆರೆದು ಮಕ್ಕಳಿಗೆ ಶಿಸ್ತುಬದ್ಧ ಶಿಕ್ಷಣ ನೀಡಬೇಕು. ಇದರಿಂದ ಹೆತ್ತವರಿಗೆ ಇರುವ ಕೀಳರಿಮೆ ಕೂಡಾ ಕಡಿಮೆಯಾಗಲಿದೆ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪನಾಯ್ಕ ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಸಾಮಾಜಿಕ ಪರಿವರ್ತನಾ ಜನಾಂದೋಲನ ಸಮಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಕಾರ್ಮಿಕ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಇಲ್ಲಿನ ಸ್ತ್ರೀಶಕ್ತಿಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ, ಬಾಲ್ಯ ವಿವಾಹ ತಡೆ, ‘ಶಾಲೆ ಕಡೆ ನನ್ನ ನಡೆ’ ಜನಜಾಗೃತಿ ಅಭಿಯಾನ ಮತ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಿಲ್ಲಿಯ ಕೊಳಚೆ ಪ್ರದೇಶಗಳಲ್ಲಿ ಅಧ್ಯಯನಕ್ಕೆ ಹೋಗಿದ್ದಾಗ ಅಲ್ಲಿ ಉತ್ತಮ ಶಾಲೆಗಳನ್ನು ತೆರೆದಿರುವುದು ಕಂಡಿತು. ಪಠ್ಯ, ಸಂಗೀತ, ದೈಹಿಕ ಶಿಕ್ಷಣ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಅಲ್ಲಿ ಶಿಕ್ಷಕರಿದ್ದರು. ಅಂಥ ವ್ಯವಸ್ಥೆ ಕರ್ನಾಟಕದಲ್ಲಿಯೂ ಆಗಬೇಕು. ಯಾವ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಕರ ಕೊರತೆ ಇರಬಾರದು ಎಂದು ತಿಳಿಸಿದರು.

ADVERTISEMENT

ಶಾಲೆಯ ಪಕ್ಕದಲ್ಲಿಯೇ ಅಂಗನವಾಡಿಗಳನ್ನು ತೆರೆಯಬೇಕು. ಶಾಲೆಗಳಲ್ಲಿ ಸಾರ್ವಜನಿಕರ ಪಾಲುದಾರಿಕೆ ಇದ್ದಾಗ ಆ ಶಾಲೆಗಳು ಪರಿಣಾಮಕಾರಿಯಾಗಿರುತ್ತವೆ ಎಂದರು.

ಬಳ್ಳಾರಿ ವಿಭಾಗ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ತೊರೆಯಲು, ಬಾಲಕಾರ್ಮಿಕರಾಗಲು ಹೆತ್ತವರೇ ಕಾರಣ. ಸರ್ಕಾರ ಶಿಕ್ಷಣಕ್ಕಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಹೆತ್ತವರು ಎಲ್ಲಾ ಕಷ್ಟಗಳ ನಡುವೆ ಮಕ್ಕಳಿಗೆ ಓದಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಬಾಲಕಾರ್ಮಿಕರು ಸಿಗಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಾಮಾಜಿಕ ಪರಿವರ್ತನಾ ಜನಾಂದೋಲನ ರಾಜ್ಯಾಧ್ಯಕ್ಷ ಅಂಬಣ್ಣ ಅರೋಲಿಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಾಲೆ ಕಡೆ ನಮ್ಮ ನಡೆ ಎಂಬುದು ಸಾಂಕೇತಿಕ ಆಚರಣೆ ಅಥವಾ ಸಂಭ್ರಮದ ಆಚರಣೆ ಆಗುವ ಬದಲು ಸಮರ್ಥ ಅನುಷ್ಠಾನದ ಆಚರಣೆಯಾಗಬೇಕು. ಸಮುದಾಯಕ್ಕೆ ಜಾಗೃತಿ ಇಲ್ಲ ಎಂದು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬದಲು ಶಿಕ್ಷಣ ಪಡೆದವರು ಸಮುದಾಯವನ್ನು ಒಳಗೊಳ್ಳುವಿಕೆ ಎಷ್ಟಿದೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳು ಶಾಲೆ ತೊರೆಯಲು ಬಡತನ, ಜಾಗೃತಿ ಕೊರತೆ ಕಾರಣ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಬಹಳಷ್ಟು ಬಾರಿ ನಮ್ಮ ಪಠ್ಯಕ್ರಮವೇ ಶಾಲೆ ತೊರೆಯಲು ಕಾರಣವಾಗಿರುತ್ತದೆ. ಗಣಿತ ಅರ್ಥವಾಗದೇ, ಇಂಗ್ಲಿಷ್‌ ತಲೆಗೆ ಹೋಗದೆ, ಶಿಕ್ಷಕರಿಂದ ಹೊಡೆತ ತಿಂದು ಶಾಲೆ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಹಾಗಾಗಿ ಸರಳ ಗಣಿತ, ಸುಲಭ ಇಂಗ್ಲಿಷ್‌ ಕಲಿಸುವಂತಾಗಬೇಕು’ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ನಿರಂಜನ್‌, ಚೈಲ್ಡ್‌ ಲೈನ್‌ ನೋಡಲ್‌ ಏಜೆನ್ಸಿಯ ಎಂ.ಬಿ. ಮಂಜಪ್ಪ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಂ. ಮಂಜುನಾತ್‌, ಪೊಲೀಸ್‌ ವೃತ್ತ ನಿರೀಕ್ಷಕ ಶಂಕರ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಲ್‌. ಮಂಜುನಾತ, ಪೀಪಲ್‌ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಎಪಿಡಿಯ ಸುರೇಶ್‌ ಅವರೂ ಇದ್ದರು. ತ್ರಿವೇಣಿ ಸ್ವಾಗತಿಸಿದರು. ಬಿ. ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.