ADVERTISEMENT

ಕೇಂದ್ರ ಗೃಹಸಚಿವರ ಕಾರ್ಯಕ್ರಮಕ್ಕೆ ಪಾಸ್‌ ಇದ್ದವರಿಗಷ್ಟೇ ಅವಕಾಶ: ಡಿ.ಸಿ.

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 6:37 IST
Last Updated 1 ಸೆಪ್ಟೆಂಬರ್ 2021, 6:37 IST
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಗೆ ಬರುವ ಕಾರಣ, ಅವರು ಸಾಗುವ ರಸ್ತೆಗಳ ಪಕ್ಕದಲ್ಲಿ ಇರುವ ಎಲ್ಲ ಫುಟ್‌ಪಾತ್‌ ಅಂಗಡಿಗಳನ್ನು ಪೊಲೀಸರು ತೆರವುಗೊಳಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಗೆ ಬರುವ ಕಾರಣ, ಅವರು ಸಾಗುವ ರಸ್ತೆಗಳ ಪಕ್ಕದಲ್ಲಿ ಇರುವ ಎಲ್ಲ ಫುಟ್‌ಪಾತ್‌ ಅಂಗಡಿಗಳನ್ನು ಪೊಲೀಸರು ತೆರವುಗೊಳಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೆ.2ರಂದು ಜಿಲ್ಲೆಯಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಅಧಿಕಾರಿಗಳ ಸಹಿತ ಪಾಸ್‌ ಇದ್ದವರಿಗಷ್ಟೇ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದರು.

ಸುದ್ದಿಗಾರರಿಗೆ ಕಾರ್ಯಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿ, ‘ಹುಬ್ಬಳ್ಳಿಯಿಂದ ಮಧ್ಯಾಹ್ನ ದಾವಣಗೆರೆಗೆ ಕೇಂದ್ರ ಗೃಹ ಸಚಿವರು ಬರಲಿದ್ದಾರೆ. ಜಿಎಂಐಟಿ ಹೆಲಿಪ್ಯಾಡ್‌ಗೆ ಬಂದು ಜಿಎಂಐಟಿ ಅತಿಥಿಗೃಹದಲ್ಲಿ ಊಟ ಮಾಡುವರು. ಅಲ್ಲಿಂದ ರಾಮನಗರಕ್ಕೆ ತೆರಳಿ ಗಾಂಧಿಭವನವನ್ನು ಉದ್ಘಾಟಿಸುವರು. ಬಳಿಕ ಕೊಂಡಜ್ಜಿ ಸ್ಕೌಟ್ಸ್‌ ಆ್ಯಂಡ್‌ ಗೈಡ್‌ ಸಂಸ್ಥೆಯಲ್ಲಿ ಕೊಂಡಜ್ಜಿ ಬಸಪ್ಪ ಅವರ ಸಮಾಧಿ ಮತ್ತು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವರು’ ಎಂದು ವಿವರಿಸಿದರು.

ಕೊಂಡಜ್ಜಿಯಲ್ಲಿ ನಿರ್ಮಾಣಗೊಂಡಿರುವ ಪೊಲೀಸ್‌ ಪಬ್ಲಿಕ್‌ ವಸತಿಶಾಲೆಯನ್ನು ಉದ್ಘಾಟಿಸುವರು. ದಾವಣಗೆರೆಯಲ್ಲಿ ₹ 15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪೊಲೀಸ್‌ ವಸತಿಗೃಹಗಳನ್ನು ಕೂಡ ಕೊಂಡಜ್ಜಿಯಿಂದಲೇ ಉದ್ಘಾಟಿಸುವರು ಎಂದರು.

ADVERTISEMENT

ಜಿಎಂಐಟಿಯಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್‌ ಲೈಬ್ರೆರಿಗೆ ಚಾಲನೆ ನೀಡುವರು. ಬಳಿಕ ಹುಬ್ಬಳ್ಳಿಗೆ ತೆರಳುವರು ಎಂದು ಮಾಹಿತಿ ನೀಡಿದರು.

ಎಲ್ಲಿಯೂ ಸಭಾ ಕಾರ್ಯಕ್ರಮಗಳು ಇರುವುದಿಲ್ಲ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬಿಗಿ ಬಂದೋಬಸ್ತು ಮಾಡಲಾಗಿದೆ. ದೆಹಲಿಯಿಂದ ಸಿಆರ್‌ಪಿಎಫ್‌ ಪ್ರಮುಖರು ಬಂದಿದ್ದಾರೆ. ಇಲ್ಲಿನ ಪೊಲೀಸ್‌ ಅಧಿಕಾರಿಗಳು, ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿದ್ದಾರೆ. ಎಲ್ಲಿ ಹೇಗೆ ಕಾರ್ಯಕ್ರಮ ಇರಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ ಎಂದರು.

ಈ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಸಹಿತ ಹಲವು ಸಚಿವರು ಭಾಗಿಯಾಗಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಇರಲಿದ್ದಾರೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.