ADVERTISEMENT

ನ್ಯಾಯಬೆಲೆ ಅಂಗಡಿ ಬಲು ದೂರ; ಪಡಿತರ ಹೊತ್ತು ತರಲು ಭಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 2:51 IST
Last Updated 6 ಜೂನ್ 2022, 2:51 IST
ಹರಿಹರದ ಹರ್ಲಾಪುರ–ಬಾಂಗ್ಲಾ ಬಡಾವಣೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುತ್ತಿರುವುದು.
ಹರಿಹರದ ಹರ್ಲಾಪುರ–ಬಾಂಗ್ಲಾ ಬಡಾವಣೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುತ್ತಿರುವುದು.   

ದಾವಣಗೆರೆ/ ಸಂತೇಬೆನ್ನೂರು: ಬಡವರ ಹಸಿವನ್ನು ನೀಗಿಸಲು ಸರ್ಕಾರ ಉಚಿತವಾಗಿ ಪಡಿತರ ಧಾನ್ಯಗಳನ್ನು ನೀಡುತ್ತಿದೆ. ಆದರೆ, ಆದ್ಯತಾ ಪಡಿತರ ಚೀಟಿ (ಪಿ.ಎಚ್‌.ಎಚ್‌.) ಹೊಂದಿರುವವರು ದೂರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಧಾನ್ಯವನ್ನು ಹೊತ್ತು ತರಲು ಒಂದು ದಿನದ ಕೂಲಿ ಕೆಲಸವನ್ನೇ ಬಿಡಬೇಕಾದ ಪರಿಸ್ಥಿತಿ ಜಿಲ್ಲೆಯ ಹಲವು ಹಳ್ಳಿಗಳಲ್ಲಿದೆ.

ಹೊಸ ಪಡಿತರ ಅಂಗಡಿಗಳನ್ನು ತೆರೆಯಲು ಸರ್ಕಾರ ರೂಪಿಸಿರುವ ನಿಯಮಾವಳಿಗಳು ಸಾರಿಗೆ ಸೌಲಭ್ಯ ಸಮರ್ಪಕವಾಗಿ ಇಲ್ಲದ ಹಲವು ಹಳ್ಳಿಗಳ ಜನರಿಗೆ ನ್ಯಾಯಬೆಲೆ ಅಂಗಡಿಗಳನ್ನು ದೂರವಾಗಿಸಿದ್ದು, ಪಡಿತರ ಧಾನ್ಯಗಳನ್ನು ಹೊತ್ತು ಮನೆಗೆ ತರಲು ಪ್ರತಿ ತಿಂಗಳೂ ಪ್ರಯಾಸ ಪಡುವಂತಾಗಿದೆ.

‘ಪ್ರತಿ ತಿಂಗಳು ಪಡಿತರ ಧಾನ್ಯ ತರಲು 9 ಕಿ.ಮೀ ದೂರದ ದೊಡ್ಡಬ್ಬಿಗೆರೆ ಹೋಗಬೇಕು. ಕುಳೇನೂರು–ದೊಡ್ಡಬ್ಬಿಗೆರೆ ನಡುವೆ ಕೆರೆ ಇರೋದ್ರಿಂದ ಸಂತೇಬೆನ್ನೂರು ಮೂಲಕ ಹೋಗಬೇಕು. ಅಕ್ಕಿ, ರಾಗಿ, ಗೋಧಿಯನ್ನು ಹೊತ್ತು ತರಲು ಹೈರಾಣಾಗುತ್ತಿದ್ದೇವೆ. ಗ್ರಾಮದಲ್ಲಿ ಸುಮಾರು 150 ಪಡಿತರ ಚೀಟಿ ಪಡೆದ ಕುಟುಂಬಗಳಿವೆ. ಸಾರಿಗೆ ವ್ಯವಸ್ಥೆಯೂ ಇಲ್ಲದೆ ಪರದಾಡುವ ಸ್ಥಿತಿ ಇದೆ’ ಎಂದು ಕುಳೇನೂರು ಗ್ರಾಮದ ರಂಗಸ್ವಾಮಿ ಅಲವತ್ತುಕೊಳ್ಳುತ್ತಾರೆ.

ADVERTISEMENT

‘ಬಹುತೇಕ ಬಡ ರೈತರೇ ಇರುವ ಚಿಕ್ಕಬೆನ್ನೂರು ಗ್ರಾಮದ ಜನ ಪಡಿತರ ಧಾನ್ಯ ತರಲು ಗೊಲ್ಲರಹಳ್ಳಿಗೆ ಹೋಗಬೇಕು. ಸುಮಾರು ನಾಲ್ಕು ಕಿ.ಮೀ ದೂರ ನಡೆಯಬೇಕು. ಬಸ್ಸಿನ ವ್ಯವಸ್ಥೆ ಇಲ್ಲದೇ 20 ಕೆ.ಜಿ. ಅಕ್ಕಿ ಹೊತ್ತು ತರುವುದು ಆಯಾಸದ ಕೆಲಸ. ಸುಮಾರು 200 ಮನೆಗಳಲ್ಲಿ ಬಹುತೇಕ ಕುಟುಂಬಗಳು ಪಡಿತರ ವ್ಯವಸ್ಥೆಯಲ್ಲಿ ನೋಂದಣಿ ಆಗಿದ್ದಾರೆ. ನಮ್ಮ ಗ್ರಾಮದಲ್ಲಿಯೇ ಪಡಿತರ ವಿತರಣಾ ವ್ಯವಸ್ಥೆ ಕಲ್ಪಿಸುವ ಮೂಲಕ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಚಿಕ್ಕಬೆನ್ನೂರು ಗ್ರಾಮದ ಚಂದ್ರು.

ಕೊಮಾರನಹಳ್ಳಿ, ಸೋಮನಾಳ್, ಭೀಮನೆರೆ, ಶಿವಕುಳೇನೂರು, ಗೊಲ್ಲರಹಟ್ಟಿ ಸೇರಿ ಇನ್ನೂ ಹಲವು ಹಳ್ಳಿಗಳಲ್ಲಿ ಪಡಿತರ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಲ್ಲಿನ ಗ್ರಾಮದ ಪಡಿತರದಾರರನ್ನು ಪಕ್ಕದ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳೊಂದಿಗೆ ಜೋಡಿಸಲಾಗಿದೆ. ಆಯಾ ಹಳ್ಳಿಗಳಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಹೊಸಹಳ್ಳಿ ಜನರ ಪಡಿಪಾಟಲು: ‘ಹೊಸಹಳ್ಳಿಯ ಗ್ರಾಮದ ಜನ ಪಡಿತರ ಧಾನ್ಯ ತರಲು ನಾಲ್ಕು ಕಿ.ಮೀ ದೂರದ ಹೆಬ್ಬಾಳು ಗ್ರಾಮಕ್ಕೆ ಹೋಗಬೇಕು. ರಸ್ತೆಯೂ ಸರಿಯಾಗಿಲ್ಲ. ಸಾರಿಗೆ ಸೌಲಭ್ಯವೂ ಇಲ್ಲ. ಆಟೊ, ಬೈಕ್‌ನಲ್ಲಿ ಹೋಗಿ ತರಬೇಕಾಗುತ್ತಿದೆ. ಮಹಿಳೆಯರು, ವೃದ್ಧರಿಗೆ ಪಡಿತರ ತರುವುದು ಕಷ್ಟವಾಗುತ್ತಿದೆ. ಗ್ರಾಮದಲ್ಲಿ ಸುಮಾರು 120 ಪಡಿತರ ಕಾರ್ಡ್‌ದಾರರು ಇದ್ದಾರೆ. ಹೊಸಹಳ್ಳಿಯಲ್ಲೇ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಮಾಡಿರುವ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಗುಡಾಳ್‌ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ ನಾಯ್ಕ ದೂರುತ್ತಾರೆ.

‘ಒಂದೂವರೆ ಕಿ.ಮೀ ದೂರದಲ್ಲೇ ಹಾಲವರ್ತಿಯಲ್ಲಿ ನ್ಯಾಯಬೆಲೆ ಅಂಗಡಿ ಇದೆ. ಆದರೆ, ಹೊಸಹಳ್ಳಿಯನ್ನು ಹೆಬ್ಬಾಳು ನ್ಯಾಯಬೆಲೆ ಅಂಗಡಿಗೆ ಜೋಡಿಸಿರುವುದರಿಂದ 4 ಕಿ.ಮೀ ದೂರ ಹೋಗಬೇಕಾಗುತ್ತಿದೆ. ಬಯೊಮೆಟ್ರಿಕ್‌ ಸಮಸ್ಯೆಯಾದರೆ ಒಮ್ಮೊಮ್ಮೆ ಪಡಿತರ ತರಲು ಎರಡು ದಿನ ಅಲೆಯಬೇಕಾಗುತ್ತಿದೆ. ಒಂದು ದಿನದ ಕೂಲಿ ಕೆಲಸವೂ ಹೋಗಲಿದೆ’ ಎಂದು ಕುಮಾರ ನಾಯ್ಕ ಬೇಸರ ವ್ಯಕ್ತಪಡಿಸಿದರು.

ತಾಂಡಾಗಳಲ್ಲಿ ಅಂಗಡಿ ತೆರೆಯಲು ಕ್ರಮ

‘ಸರ್ಕಾರದ ನಿಯಮದಂತೆ ಗ್ರಾಮೀಣ ಭಾಗದಲ್ಲಿ 500 ಪಡಿತರ ಕಾರ್ಡ್‌ಗಳು ಹಾಗೂ ನಗರ ಪ್ರದೇಶಗಳಲ್ಲಿ 800 ಕಾರ್ಡ್‌ಗಳಿದ್ದರೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿದೆ. ಇದೀಗ ಸರ್ಕಾರ ತಾಂಡಾ, ಗೊಲ್ಲರಹಟ್ಟಿಗಳಲ್ಲಿ 100 ಕಾರ್ಡ್‌ಗಳಿದ್ದರೂ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಬಹುದು ಎಂದು ಸುತ್ತೋಲೆ ಹೊರಡಿಸಿದೆ. ಅದರಂತೆ ಜಿಲ್ಲೆಯ ತಾಂಡಾಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಸಯ್ಯದ್‌ ಖಲೀಂ ಉಲ್ಲಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಚನ್ನಗಿರಿಯಲ್ಲಿ 18 ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಮಂಜೂರಾತಿ ಸಿಕ್ಕಿದ್ದು, ಈಗಾಗಲೇ 6 ಕಡೆ ಆರಂಭಿಸಲಾಗಿದೆ. ಹೊನ್ನಾಳಿಯಲ್ಲಿ 16 ಹಾಗೂ ಜಗಳೂರಿನಲ್ಲಿ 9 ಕಡೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಮಂಜೂರಾತಿ ಸಿಕ್ಕಿದೆ. ಮಾನವೀಯತೆ ದೃಷ್ಟಿಯಿಂದ ಹಳ್ಳಿಗಳಲ್ಲಿ 400 ಕಾರ್ಡ್‌ಗಳಿದ್ದರೂ ಹೊಸದಾಗಿ ಅಂಗಡಿ ತೆರೆಯಲು ಮುಂದಾಗುತ್ತಿದ್ದೇವೆ’ ಎಂದು ತಿಳಿಸಿದರು.

7,916 ಅನರ್ಹ ಕಾರ್ಡ್‌ ರದ್ದು:
₹ 50 ಲಕ್ಷ ದಂಡ ವಸೂಲಿ

ಜಿಲ್ಲೆಯಲ್ಲಿ 2021ರ ಏಪ್ರಿಲ್‌ನಿಂದ 2022ರ ಮಾರ್ಚ್‌ವರೆಗೆ ಒಟ್ಟು 7,916 ಅನರ್ಹ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದ್ದು, ಒಟ್ಟು ₹ 50.12 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇವರ ಪೈಕಿ ಸರ್ಕಾರಿ ನೌಕರರು ಹೊಂದಿದ್ದ 81 ಅಂತ್ಯೋದಯ ಕಾರ್ಡ್‌ ಹಾಗೂ 451 ಪಿ.ಎಚ್‌.ಎಚ್‌ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿದ್ದು, ಕಾರ್ಡ್‌ದಾರರಿಂದ ಒಟ್ಟು ₹ 45.48 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುತ್ತಿದ್ದ 168 ಕುಟುಂಬದ ಅಂತ್ಯೋದಯ (₹63,845 ದಂಡ) ಹಾಗೂ 1,880 ಪಿ.ಎಚ್‌.ಎಚ್‌. ಕಾರ್ಡ್‌ಗಳನ್ನು (₹ 2.55 ಲಕ್ಷ ದಂಡ) ಅನರ್ಹಗೊಳಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

----

ವಲಸಿಗರಿಗೆ ಕೈಗೆಟಕದ ಪಡಿತರ

- ಡಿ. ಶ್ರೀನಿವಾಸ್

ಜಗಳೂರು: ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಹೊಟ್ಟೆಪಾಡಿಗಾಗಿ ಕೂಲಿಯನ್ನರಸಿ ದೂರದ ಜಿಲ್ಲೆಗಳಿಗೆ ಗುಳೆ ಹೋಗುವ ಎಷ್ಟೋ ವಲಸಿಗರಿಗೆ ಪಡಿತರ ಕೈಗೆಟಕುತ್ತಿಲ್ಲ.

ನರೇಗಾ ಜಾರಿಯಲ್ಲಿನ ವೈಫಲ್ಯ ಹಾಗೂ ವಿಪರೀತ ಭ್ರಷ್ಟಚಾರಾದ ಪರಿಣಾಮ ‘ಖಾತ್ರಿ’ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕಸಬಾ ಹಾಗೂ ಬಿಳಿಚೋಡು ಹೋಬಳಿಯಾದ್ಯಂತ ಕೂಲಿಕಾರರು ಸಾಮೂಹಿಕವಾಗಿ ಗುಳೇ ಹೋಗುತ್ತಿದ್ದು, ಇವರು ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

‘ನಮ್ಮ ಊರಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವರ್ಷದಲ್ಲಿ ಆರೇಳು ತಿಂಗಳು ಕಾಫಿ ಸೀಮೆಗೆ ವಲಸೆ ಹೋಗುತ್ತೇವೆ. ಅಲ್ಲಿ ನಮಗೆ ರೇಷನ್ ಕೊಡುವುದಿಲ್ಲ. ಇಲ್ಲಿದ್ದಾಗ ಮಾತ್ರ ಪಡೆಯುತ್ತೇವೆ. ನಮ್ಮ ಊರಿನಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ. ನಾಲ್ಕು ಕಿ.ಮೀ ದೂರದ ಅಸಗೋಡು ಗ್ರಾಮಕ್ಕೆ ನಡೆದುಕೊಂಡು ಹೋಗಿ ರೇಷನ್ ತರಬೇಕು. ಅಂಗಡಿ ಮಾಲೀಕರು ಪ್ರತಿ ಕಾರ್ಡಿಗೆ ₹ 20ರಿಂದ ₹ 30 ಕೊಟ್ಟರೆ ಮಾತ್ರ ರೇಷನ್ ಕೊಡುತ್ತಾರೆ’ ಎಂದು ಅಸಗೋಡು ವಡ್ಡರಹಟ್ಟಿ ಗ್ರಾಮದ ಚಂದ್ರಪ್ಪ ದೂರಿದರು.

180 ಹಳ್ಳಿಗಳಿಗೆ 95 ಅಂಗಡಿ: ತಾಲ್ಲೂಕಿನಲ್ಲಿ 180ಕ್ಕೂ ಹೆಚ್ಚು ಹಳ್ಳಿಗಳಿದ್ದು, ಕೇವಲ 95 ನ್ಯಾಯಬೆಲೆ ಅಂಗಡಿಗಳಿವೆ. ಕನಿಷ್ಠ 500 ಕಾರ್ಡ್ ಇದ್ದಲ್ಲಿ ಮಾತ್ರ ನ್ಯಾಯಬೆಲೆ ಅಂಗಡಿಗೆ ಅವಕಾಶ ನೀಡಲಾಗುತ್ತದೆ. ಅರ್ಧಕ್ಕರ್ಧ ಹಳ್ಳಿಗಳಲ್ಲಿ ಅಂಗಡಿಗಳು ಇಲ್ಲದ ಕಾರಣ ನಾಲ್ಕೈದು ಕಿ.ಮೀ ದೂರ ನಡೆದು, ಇಡೀ ದಿನ ಕೂಲಿನಾಲಿ, ಕೆಲಸ ಬಿಟ್ಟು ಪಕ್ಕದ ಹಳ್ಳಿಗಳಿಂದ ಪಡಿತರ ಪಡೆಯುವ ಸ್ಥಿತಿ ಇದೆ.

ಕಳಪೆ ಅಕ್ಕಿ ಪೂರೈಕೆ: ತಾಲ್ಲೂಕಿನ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಮುಗ್ಗಿದ ಕಳಪೆ ಅಕ್ಕಿಯನ್ನು ಕೊಟ್ಟಿದ್ದು, ಸೇವಿಸಲು ಯೋಗ್ಯವಿಲ್ಲದ ಕಾರಣ ತಾಯಿಟೊಣೆ ಮುಂತಾದ ಕಡೆ ಈಚೆಗೆ ಜನರು ಪ್ರತಿಭಟನೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

---

ವಿತರಣೆ ವ್ಯವಸ್ಥೆ ಸುಧಾರಣೆಯಾಗಲಿ

ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದಿರುವುದರಿಂದ ಪಡಿತರ ಧಾನ್ಯ ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ನ್ಯಾಯಬೆಲೆ ಅಂಗಡಿ ಸ್ಥಾಪನೆ ಮಾಡುವಷ್ಟು ಕುಟುಂಬಗಳಿಲ್ಲದ ಗ್ರಾಮಗಳಾದ ಒಡೆಯರ ಬಸಾಪುರ, ಮೂಗಿನಗೊಂದಿ, ಪಾಮೇನಹಳ್ಳಿ, ಕಡ್ಲೆಗೊಂದಿ, ಸಲಗನಹಳ್ಳಿ, ಹಿಂಡಸಘಟ್ಟ, ಸತ್ಯನಾರಾಯಣ ಕ್ಯಾಂಪ್, ನೆಹರೂ ಕ್ಯಾಂಪ್ ಮತ್ತು ಭಾಸ್ಕರ್ ರಾವ್ ಕ್ಯಾಂಪ್‌ನ ಪಡಿತರದಾರರನ್ನು ಸಮೀಪದ ದೊಡ್ಡ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜೋಡಿಸಲಾಗಿದೆ. ನಿಗದಿತ ದಿನದಂದು ಅವರ ಗ್ರಾಮಕ್ಕೆ ಬರುವ ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಿಸುತ್ತಿದ್ದಾರೆ. ಆ ದಿನದಂದು ಪಡಿತರ ಪಡೆಯದಿದ್ದರೆ ನ್ಯಾಯಬೆಲೆ ಅಂಗಡಿಗೇ ಹೋಗಿ ಪಡೆಯಬೇಕು.

‘ಸಗಟು ಕೇಂದ್ರದಿಂದ ಅಂಗಡಿಯವರಿಗೆ ಸರಬರಾಜು ಆಗುವ ಪಡಿತರದಲ್ಲಿ ಪ್ರತಿ ಒಂದು ಕ್ವಿಂಟಲ್‌ಗೆ ಒಂದು ಕೆ.ಜಿ. ಕಡಿಮೆ ಇರುತ್ತದೆ. ಸರ್ಕಾರ ಐದಾರು ತಿಂಗಳಿಗೆ ಒಮ್ಮೆ ಕಮಿಷನ್‌ ನೀಡುವುದು ಹಾಗೂ ಕಾಲಕ್ಕೆ ತಕ್ಕಂತೆ ಕಮಿಷನ್‌ ಮೊತ್ತವನ್ನು ಹೆಚ್ಚಿಸದೇ ಇರುವುದರಿಂದ ಆ ಭಾರವನ್ನು ಅಂಗಡಿಯವರು ಪಡಿತರದಾರರ ಮೇಲೆ ವರ್ಗಾಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಹಲವೆಡೆ ಒಂದು ಕೆ.ಜಿ. ಪಡಿತರ ಕಡಿಮೆ ತೂಕ ಮಾಡುತ್ತಾರೆ. ಬಯೋಮೆಟ್ರಿಕ್‌ಗೆ ₹ 10 ಪಡೆಯುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಒತ್ತಾಯಿಸುತ್ತಾರೆ.

‘ಪಡಿತರಕ್ಕಾಗಿ ಎರಡು ಬಾರಿ ಓಡಾಡಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕೈಗೊಳ್ಳುತ್ತೇವೆ. ಒಂದು ದೇಶ, ಒಂದು ಪಡಿತರ ಯೋಜನೆಯಡಿ ಅಲೆಮಾರಿಗಳನ್ನು ಹುಡುಕಿ ಅವರ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಲುಪಿಸಲಾಗುತ್ತಿದೆ’ ಎಂದು ಆಹಾರ ಇಲಾಖೆ ಶಿರಸ್ತೇದಾರ್‌ ಯು.ಆರ್.ರಮೇಶ್ ಮಾಹಿತಿ ನೀಡಿದರು.

---

ತಿಂಗಳ ಪೂರ್ತಿ ವಿತರಣೆಯಾಗಲಿ

-ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕು 61 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ತಾಲ್ಲೂಕು ಆಗಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಪಡಿತರ ಧಾನ್ಯಗಳನ್ನು ಅಂತ್ಯೋದಯ, ಬಿಪಿಎಲ‍್ ಹಾಗೂ ಎಪಿಎಲ್ ಕಾರ್ಡುದಾರರಿಗೆ ವಿತರಿಸುವ ಕಾರ್ಯವನ್ನು ಮಾಡುತ್ತಿದೆ. ಹಲವಾರು ಸಣ್ಣ ಪುಟ್ಟ ಲೋಪಗಳನ್ನು ಹೊರತುಪಡಿಸಿ ತಾಲ್ಲೂಕಿನ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಸಕಾಲಕ್ಕೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ.

ಬೆರಳಚ್ಚು ಅಥವಾ ಕಾರ್ಡ್‌ದಾರರ ಮೊಬೈಲ್ ಒಟಿಪಿ ಮೂಲಕವೇ ಪಡಿತರ ವಿತರಣೆ ಮಾಡಲಾಗುತ್ತಿದೆ. ಸಣ್ಣ–ಪುಟ್ಟ ಸಮಸ್ಯೆಗಳು ಬಂದಾಗ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಗೆಹರಿಸುತ್ತೇವೆ. ಇದುವರೆಗೆ ತಾಲ್ಲೂಕಿನಲ್ಲಿ 950 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಹೊಸದಾಗಿ ಅರ್ಜಿಗಳನ್ನು ತೆಗೆದುಕೊಳ್ಳುತ್ತಿದ್ದು, 400 ಅರ್ಜಿಗಳ ಪರಿಶೀಲನೆ ಕಾರ್ಯ ನಡೆದಿದೆ. ಎರಡು ತಿಂಗಳಲ್ಲಿ ಈ ಅರ್ಜಿಗಳನ್ನು ಇರ್ತರ್ಥ್ಯಪಡಿಸಲಾಗುವುದು ಎಂದು ಆಹಾರ ಇಲಾಖೆ ಶಿರಸ್ತೇದಾರ್‌ ಜಯರಾಂ ನಾಯ್ಕ ತಿಳಿಸಿದರು.

ಪ್ರತಿ ತಿಂಗಳು 11 ನೇ ತಾರೀಖಿನ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ. ತಿಂಗಳಲ್ಲಿ 20 ದಿನ ಮಾತ್ರ ಪಡಿತರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದು, ಇದರ ಬದಲಿಗೆ ತಿಂಗಳು ಪೂರ್ತಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಕುರುಬರ ಬೀದಿಯ ಪಿ.ಎಚ್‌.ಎಚ್‌. ಕಾರ್ಡ್‌ದಾರ ಆರ್. ರುದ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.