
ಬಸವಾಪಟ್ಟಣ: ‘ಅವೈಜ್ಞಾನಿಕವಾಗಿ ಭತ್ತದ ಬೆಳೆಗೆ ನೀರನ್ನು ಹಾಯಿಸುವ ಬದಲು ಕಡಿಮೆ ಪ್ರಮಾಣದಲ್ಲಿ ನೀರುಣಿಸಿ ಭತ್ತ ಬೆಳೆಯಿರಿ’ ಎಂದು ರಾಜ್ಯ ಕೃಷಿ ಉಪ ನಿರ್ದೇಶಕ ಎ.ಸಿ.ಮಂಜು ಸಲಹೆ ನೀಡಿದರು.
ಸಮೀಪದ ಚಿರಡೋಣಿಯಲ್ಲಿ ಬುಧವಾರ ಕಡಿಮೆ ನೀರಿನಲ್ಲಿ ಭತ್ತದ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾಟಿ ಮಾಡಿದ 15 ದಿನಗಳ ನಂತರ ಭತ್ತದ ಬೆಳೆಗೆ ನೀರು ಹಾಯಿಸುವಾಗ 10ರಿಂದ 15 ಸೆ.ಮೀ. ವ್ಯಾಸದ 30 ಸೆ.ಮೀ. ಉದ್ದದ ಪಿ.ವಿ.ಸಿ. ಪೈಪ್‌ಗೆ ರಂದ್ರ ಮಾಡಿ ಮಣ್ಣಿನಲ್ಲಿ ಅಳವಡಿಸಬೇಕು. ನೀರು ಹಾಯಿಸುವಾಗ ಗದ್ದೆಯ ತೇವಾಂಶವನ್ನು ಆಗಾಗ ಪರೀಕ್ಷೆ ನಡೆಸಿ ನೀರು ಹಾಯಿಸಿ. ಆದರೆ ಭತ್ತದ ಫಸಲು ಹೂ ಬಿಡುವಾಗ ಸಸಿಗಳಿಗೆ ಬೇರಿನಿಂದ ಐದು ಸೆ.ಮೀ. ನೀರು ಇರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
‘ಈ ಮಾದರಿಯಲ್ಲಿ ಜೆ.ಪಾಲ್ ಖಾಸಗಿ ಕೃಷಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದ ಹಂಗಾಮಿನಲ್ಲಿ ಅಂದಾಜು 300 ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆ ಆಗುವುದರೊಂದಿಗೆ ಇಳುವರಿಯೂ ಉತ್ತಮವಾಗಿ ಬಂದಿದೆ. ಈ ಪದ್ಧತಿಯಲ್ಲಿ ಭತ್ತ ಬೆಳೆಯುವ ರೈತರು ಸಮೀಪದ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.
ಹೊನ್ನಾಳಿ ತಾಲ್ಲೂಕು ಕೃಷಿ ಉಪ ನಿರ್ದೇಶಕ ರೇವಣಸಿದ್ಧನಗೌಡ ಮಾತನಾಡಿ, ‘ಕೃಷಿ ತಂತ್ರಜ್ಞಾನ ನಿಂತ ನೀರಲ್ಲ. ವಿಜ್ಞಾನಿಗಳು ವಿವಿಧ ಕೃಷಿಯ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸಿ, ರೈತರಿಗೆ ನೂತನ ತಂತ್ರಜ್ಞಾನವನ್ನು ಪರಿಚಯಿಸುತ್ತಾರೆ. ರೈತರು ಸಾಂಪ್ರದಾಯಕ ವಿಧಾನಗಳನ್ನು ಅನುಸರಿಸಿ ಅಧಿಕ ಉತ್ಪಾದನಾ ವೆಚ್ಚದಿಂದ ನಷ್ಟಕ್ಕೆ ಒಳಗಾಗುವ ಬದಲು ನೂತನ ತಂತ್ರಜ್ಞಾನವನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಬೇಕು’ ಎಂದರು.
ಕೃಷಿ ಅಧಿಕಾರಿಗಳಾದ ಎನ್.ಲತಾ, ರಂಗಸ್ವಾಮಿ, ಜೆ.ಪಾಲ್ ಸಂಸ್ಥೆಯ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.