ADVERTISEMENT

ಪರಮೇಶ್ವರಪ್ಪಗೆ ಜಾನಪದ ಅಕಾಡೆಮಿ ಗರಿ

ನಾಲ್ಕು ದಶಕಗಳ ಜಾನಪದ ಬದುಕಿಗೆ ಸಂದ ಗೌರವ

ವಿನಾಯಕ ಭಟ್ಟ‌
Published 26 ಫೆಬ್ರುವರಿ 2020, 14:38 IST
Last Updated 26 ಫೆಬ್ರುವರಿ 2020, 14:38 IST
ಪಿ.ಜಿ. ಪರಮೇಶ್ವರಪ್ಪ
ಪಿ.ಜಿ. ಪರಮೇಶ್ವರಪ್ಪ   

ದಾವಣಗೆರೆ: ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಜನೆ ಹಾಗೂ ಜಾನಪದ ಗಾಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದ ಪಿ.ಜಿ. ಪರಮೇಶ್ವರಪ್ಪ ಅವರು 2019ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಮೆಗೆ ಪಾತ್ರರಾಗಿದ್ದಾರೆ.

‘ನಾನೆಂದೂ ಪ್ರಶಸ್ತಿಗೆ ಆಸೆ ಪಟ್ಟವನಲ್ಲ. ಗ್ರಾಮೀಣ ಪ್ರದೇಶದಲ್ಲಿ ಹಾಡುತ್ತಿದ್ದ ನನ್ನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ. ಈ ಪ್ರಶಸ್ತಿ ಸಿಕ್ಕಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿ. ಇಷ್ಟು ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಪರಮೇಶ್ವರಪ್ಪ ಪ್ರತಿಕ್ರಿಯಿಸಿದರು.

68 ವರ್ಷದ ಈ ಹಿರಿಯ ಕಲಾವಿದರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ADVERTISEMENT

* ನಿಮಗೆ ಜಾನಪದ ಗಾಯನದ ಬಗ್ಗೆ ಹೇಗೆ ಆಸಕ್ತಿ ಮೂಡಿತು?

ಶಾಲೆಗೆ ಹೋಗುತ್ತಿದ್ದಾಗ ಗಣೇಶ ಹಬ್ಬ ಹಾಗೂ ಇನ್ನಿತರ ಹಬ್ಬಗಳಲ್ಲಿ ಭಜನೆ ಹಾಡುತ್ತಿರುವುದನ್ನು ಕೇಳುತ್ತ ನನ್ನಲ್ಲೂ ಇದರ ಬಗ್ಗೆ ಆಸಕ್ತಿ ಮೂಡಿತು. ಎಸ್ಸೆಸ್ಸೆಲ್ಸಿ ಬಳಿಕ ಓದು ನಿಲ್ಲಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡೆ. ಜೊತೆಯಲ್ಲೇ ಗುಡಿಯಲ್ಲಿ ದಿನಾಲೂ ಭಜನೆ ಹಾಗೂ ಜಾನಪದ ಹಾಡುಗಳನ್ನು ಹಾಡುತ್ತಿದ್ದೆ.

* ನೀವು ಆರಂಭಿಸಿದ ಬಸವೇಶ್ವರ ಭಜನಾ ಸಂಘದ ಬಗ್ಗೆ ಹೇಳಿ

ಬಿಳಿಚೋಡಿನಲ್ಲಿ ಸುಮಾರು 40 ವರ್ಷಗಳ ಹಿಂದೆ ಬಸವೇಶ್ವರ ಭಜನಾ ಸಂಘವನ್ನು ಆರಂಭಿಸಿದ್ದೆವು. ಊರಿನ 13 ಜನರು ಸಂಘದಲ್ಲಿದ್ದೇವೆ. ಸಿರಿಗೆರೆಯ ತರಳಬಾಳು ಮಠದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆರು ವರ್ಷ ನಮ್ಮ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಚಿತ್ರದುರ್ಗದ ಮುರುಘಾ ಮಠ, ಮೈಸೂರು ದಸರಾ, ಉಕ್ಕಡಗಾತ್ರಿ ಜಾತ್ರೆ ಸೇರಿ ರಾಜ್ಯದ ಹಲವೆಡೆ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ. ಚಿತ್ರದುರ್ಗದ ಆಕಾಶವಾಣಿ ಕೇಂದ್ರದಲ್ಲೂ ಕಾರ್ಯಕ್ರಮ ಕೊಟ್ಟಿದ್ದೇವೆ. ನಮ್ಮನ್ನು ಕರೆದುಕೊಂಡು ಹೋಗಿ ಊರಿಗೆ ವಾಪಸ್‌ ತಂದು ಬಿಡುವುದಾದರೆ ಸಂಭಾವನೆ ಪಡೆಯದೇ ಉಚಿತವಾಗಿ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದೇವೆ.

* ಯಾವ ಬಗೆಯ ಪದಗಳನ್ನು ಹಾಡುತ್ತೀರಿ?

ವಚನ ಗಾಯನ, ತತ್ವ ಪದಗಳು, ದಾಸರ ಪದಗಳು ಹಾಗೂ ಪ್ರಸಿದ್ಧಿ ಪಡೆದಿರುವ ಜಾನಪದ ಹಾಡುಗಳನ್ನು ಹಾಡುತ್ತೇನೆ. ಏಳೆಂಟು ಜಾನಪದ ಹಾಡುಗಳನ್ನು ನಾನೇ ರಚಿಸಿ, ಹಾಡುತ್ತಿದ್ದೇನೆ. ‘ವಾಲ್ಮೀಕಿ ಮಹರ್ಷಿ’ ಜೀವನ ಚರಿತ್ರೆ, ‘ಮರುಳಸಿದ್ಧರ ಮಹಿಮೆ’, ‘ತಾಯಿಯ ಮಮಕಾರ’ದ ಬಗ್ಗೆ ನಾನು ರಚಿಸಿ ಹಾಡಿದ ಹಾಡುಗಳು ಮೆಚ್ಚುಗೆ ಪಡೆದಿದೆ.

* ಯುವ ಜನತೆಗೆ ನಿಮ್ಮ ಸಂದೇಶಗಳೇನು?

ಇಂದು ಯುವಕರು ಮೊಬೈಲ್‌ ಹಿಡಿದು, ಟಿವಿ ಮುಂದೆ ಕುಳಿತು ಮೈಮರೆಯುತ್ತಾರೆ. ಜಾನಪದ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ. ಭಜನಾ ಪದಗಳು, ಜಾನಪದ ಹಾಡುಗಳನ್ನು ಹಾಡುವುದರಿಂದ ನಮ್ಮ ಕಷ್ಟಗಳನ್ನು ಮರೆಯುತ್ತೇವೆ. ಬದುಕಿನ ಒತ್ತಡ ನಿವಾರಣೆಯಾಗಿ, ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ಯುವಕರು ಬಿಡುವಿನ ವೇಳೆಯನ್ನು ಜಾನಪದ ಕಲೆಗೂ ಮೀಸಲಿಡಬೇಕು.

‘ವೀರಗಾಸೆಗಲ್ಲ, ಭಜನೆಗೆ ಪ್ರಶಸ್ತಿ’

ಪರಮೇಶ್ವರಪ್ಪ ಅವರಿಗೆ ‘ವೀರಗಾಸೆ’ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯು ಪ್ರಕಟಿಸಿದ ಪಟ್ಟಿಯಲ್ಲಿ ನಮೂದಿಸಿರುವುದು ಗೊಂದಲ ಮೂಡಿಸಿತ್ತು.

‘ಭಜನೆ ಹಾಗೂ ಜಾನಪದ ಗಾಯನ ವಿಭಾಗದಲ್ಲಿ ಪರಮೇಶ್ವರಪ್ಪ ಅವರ ಹೆಸರನ್ನು ಕಳುಹಿಸಿಕೊಡಲಾಗಿತ್ತು. ಆದರೆ, ಅಕಾಡೆಮಿ ಪ್ರಕಟಿಸಿರುವ ಪಟ್ಟಿಯಲ್ಲಿ ‘ವೀರಗಾಸೆ’ ಎಂದು ತಪ್ಪಾಗಿದೆ. ಈ ಬಗ್ಗೆ ಅಕಾಡೆಮಿಯ ಗಮನಕ್ಕೆ ತರಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.