ADVERTISEMENT

‘ಮಕ್ಕಳನ್ನು ಒತ್ತಡಕ್ಕೆ ದೂಡುವ ಪಾಲಕರು’

ಶಾರದಾ ಪುರಸ್ಕಾರ ಸಮಾರಂಭದಲ್ಲಿ ಸಾಹಿತಿ ಹೇಮಾ ಪಟ್ಟಣಶೆಟ್ಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 14:37 IST
Last Updated 16 ಜೂನ್ 2019, 14:37 IST
ದಾಶ್ರೀಮತಿ ಪ್ರೇಮಾ ಅರುಣಾಚಲ ಎನ್‌.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಪ್ರತಿಭಾವಂತ ಮಕ್ಕಳಿಗೆ ’ಶಾರದಾ ಪುರಸ್ಕಾರ–2109’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನಡೆಯಿತು
ದಾಶ್ರೀಮತಿ ಪ್ರೇಮಾ ಅರುಣಾಚಲ ಎನ್‌.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಪ್ರತಿಭಾವಂತ ಮಕ್ಕಳಿಗೆ ’ಶಾರದಾ ಪುರಸ್ಕಾರ–2109’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನಡೆಯಿತು   

ದಾವಣಗೆರೆ: ಇಂದಿನ ದಿನಗಳಲ್ಲಿ ಮಕ್ಕಳ ಆಸಕ್ತಿ, ಉದ್ದೇಶವನ್ನು ಕೇಳದೇ ಅವರನ್ನು ಯಂತ್ರದಂತೆ ಭಾವಿಸಿದ್ದು, ಪಾಲಕರೇ ಒತ್ತಡಕ್ಕೆ ದೂಡುತ್ತಿದ್ದಾರೆ ಎಂದು ಸಾಹಿತಿ ಹೇಮಾ ಪಟ್ಟಣಶೆಟ್ಟಿ ವಿಷಾದ ವ್ಯಕ್ತಪಡಿಸಿದರು.

ಶ್ರೀಮತಿ ಪ್ರೇಮಾ ಅರುಣಾಚಲ ಎನ್‌.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ನಡೆದ 2018–19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ’ಶಾರದಾ ಪುರಸ್ಕಾರ–2109’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಶಿಕ್ಷಣ ಗಿಳಿಪಾಠವಾಗಿದ್ದು, ಬದುಕನ್ನು ಅಂಕಗಳಲ್ಲಿ ಅಳೆಯುತ್ತಿದ್ದೇವೆ. ಒಬ್ಬ ಸಂಗೀತಗಾರ ಆಗಬೇಕಿದ್ದವರನ್ನು ವೈದ್ಯರನ್ನಾಗಿ ಮಾಡುತ್ತಿದ್ದೇವೆ. ಇದರಿಂದ ಅವರ ಕುಟುಂಬದ ಹಣದ ಜೊತೆಗೆ ಸರ್ಕಾರದ ಹಣ ವ್ಯರ್ಥವಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಇಂದು ಬದುಕಿನ ಮೌಲ್ಯಗಳು ಪತನಗೊಳ್ಳುತ್ತವೆ. ಟಿವಿ. ಮೊಬೈಲ್‌ಗಳ ಮಾಯೆಗೆ ವಿದ್ಯಾರ್ಥಿಗಳು ಸಮ್ಮೋಹನಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಗಿಂತ ಮೊಬೈಲ್‌ ಮೆಮೊರಿಯನ್ನು ನಂಬುತ್ತಿದ್ದಾರೆ. ನಮ್ಮ ಬುದ್ಧಿಯನ್ನು, ನೆನ‍ಪಿನ ಶಕ್ತಿಯನ್ನು ನಂಬಬೇಕು ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬ ಮಗುವಿಗೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದು ಅಕಾಡೆಮಿಕ್‌ ಆಗಿ ಆಗಬೇಕು ಎಂತಲ್ಲ. ಯಾವುದೇ ಕ್ಷೇತ್ರದಲ್ಲಿ ಆಗಬಹುದು. ಜೀವನವನ್ನು ಓದುವುದು, ಪಾಸಾಗುವುದು ಮುಖ್ಯ. ಪುಸ್ತಕ ಓದುವುದು ಸುಲಭ. ಆದರೆ ಜೀವನ ಓದುವುದು ಕಷ್ಟ. ಜೀವನದಲ್ಲಿ ಪಾಸಾಗುವುದು ಮುಖ್ಯ. ನಿಮ್ಮ ಗುರಿ ಜೀವನ. ಜೀವನಕ್ಕಾಗಿಯೇ ಶಿಕ್ಷಣ. ಇದು ನಮ್ಮ ಬೆನ್ನೆಲುಬಾಗಬೇಕು. ಕೊನೆಯವರೆಗೂ ಜೀವನದ ವಿದ್ಯಾರ್ಥಿಯಾಗಿರುತ್ತೇನೆ ಎಂದು ತಿಳಿದುಕೊಳ್ಳಬೇಕು. ಅದರಿಂದ ಮಾತ್ರ ಕಲಿಕೆ ಸಾಧ್ಯ’ ಎಂದು ಹೇಳಿದರು.

ರೇವಣಕರ್ ಪ್ರತಿಷ್ಠಾನ ಕೌಟುಂಬಿಕ ಸಂಸ್ಥೆಯಾಗಿದ್ದರೂ ಸಮಾಜಮುಖಿ ಕೆಲಸ ಮಾಡಿದೆ. ಸಮಾಜಮುಖಿ ಕೆಲಸ ಮಹತ್ವದ್ದು, ಸಾಮಾಜಿಕ ಸಂಸ್ಥೆಗಳೂ ಕೌಟುಂಬಿಕ ಸ್ವಾರ್ಥಕ್ಕಾಗಿ ಕೆಲಸ ಮಾಡುವ ಕಾಲ ಇದು. ಇಂತಹ ಕಾಲದಲ್ಲಿ ಟ್ರಸ್ಟ್ ಸಮುದಾಯದ ಏಳಿಗೆಗಾಗಿ ಸೇವೆ ಹಾಗೂ ಸಂಘಟನೆ ಮಾಡುವುದು ಮಹತ್ವದ ಕೆಲಸ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಹಣವನ್ನು ಗಳಿಸಲು ವಿದ್ಯೆ ಕಲಿಯುತ್ತಿದ್ದಾರೆ. ನಮ್ಮ ಬದುಕು ಇರುವುದು ದುಡ್ಡು ಮಾಡಲಿಕ್ಕೆ ಎಂದು ತಿಳಿದುಕೊಂಡಿದ್ದಾರೆ. ವಿದ್ಯೆಯನ್ನು ಐಷಾರಾಮಿ ಜೀವನಕ್ಕೆ ಬಳಸುತ್ತಿದ್ದಾರೆ. ಆದರೆ ಬಸವಣ್ಣ ಹಣವನ್ನು ಬಡ್ಡಿಗೆ ನೀಡುವುದು ವ್ಯಭಿಚಾರ ಎಂದು ಹೇಳಿದ್ದಾರೆ. ಅದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಕನಸ್ಸನ್ನು ಕಾಣಬೇಕು. ಆ ಕನಸ್ಸನ್ನು ನನಸು ಮಾಡಿಕೊಳ್ಳಲು ಶ್ರದ್ಧೆಯಿಂದ ಕೆಲಸ ಮಾಡಬೇಕು. ತಂದೆ ತಾಯಿಗಳು ಜೀವ ಕೊಡುತ್ತಾರೆ. ಆದರೆ ಜೀವನವನ್ನು ನೀವು ಪಡೆಯಬೇಕು ಎಂದು ಸಲಹೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳ 100 ವಿದ್ಯಾರ್ಥಿಗಳಿಗೆ ಶಾರದಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ಡಾ.ನಲ್ಲೂರು ಅರುಣಾಚಲ ಎನ್‌. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀಧರ್ ಶೇಟ್‌ ಶಿರಾಲಿ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸತ್ಯನಾರಾಯಣ ಆರ್.ರಾಯ್ಕರ್‌, ಪ್ರತಿಷ್ಠಾನದ ಅಧ್ಯಕ್ಷೆ ಪ್ರೇಮಾ ಅರುಣಾಚಲ ಎನ್‌.ರೇವಣಕರ್ ಇದ್ದರು. ಸಾಲಿಗ್ರಾಮ ಗಣೇಶ್‌ ಶೆಣೈ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.