ADVERTISEMENT

ಹರಿಹರ | ಜನನ, ಮರಣ ಪ್ರಮಾಣಪತ್ರ ಪಡೆಯಲು ಪರದಾಟ

ಹರಿಹರ: ನಗರಸಭೆಯಿಂದ ಜನರಿಗೆ ಬಿಸಿಲಲ್ಲಿ ನಿಲ್ಲಿಸುವ ಶಿಕ್ಷೆ

ಟಿ.ಇನಾಯತ್‌ ಉಲ್ಲಾ
Published 3 ಮಾರ್ಚ್ 2025, 7:21 IST
Last Updated 3 ಮಾರ್ಚ್ 2025, 7:21 IST
ಹರಿಹರ ನಗರಸಭೆಯ ಆರೋಗ್ಯ ಶಾಖೆಯ ಕೌಂಟರ್ ಮುಂದೆ ಅರ್ಜಿ ಸಲ್ಲಿಸಲು ಬಿಸಿಲಲ್ಲಿ ನಿಂತಿರುವ ಸಾರ್ವಜನಿಕರು
ಹರಿಹರ ನಗರಸಭೆಯ ಆರೋಗ್ಯ ಶಾಖೆಯ ಕೌಂಟರ್ ಮುಂದೆ ಅರ್ಜಿ ಸಲ್ಲಿಸಲು ಬಿಸಿಲಲ್ಲಿ ನಿಂತಿರುವ ಸಾರ್ವಜನಿಕರು   

ಹರಿಹರ: ಹೊಸ ಕಟ್ಟಡ ಕಾಮಗಾರಿ ಸ್ಥಗಿತ ಹಾಗೂ ಸಿಬ್ಬಂದಿ ಕೊರತೆಯಿಂದ ನಲುಗಿರುವ ಇಲ್ಲಿನ ನಗರಸಭೆಯು ಜನನ, ಮರಣ ಪ್ರಮಾಣಪತ್ರ ಪಡೆಯಲು ಬರುವ ಜನರಿಗೆ ಬಿಸಿಲಲ್ಲಿ ನಿಲ್ಲುವ ಶಿಕ್ಷೆಯನ್ನೂ ನೀಡುತ್ತಿದೆ.

ಒಂದು ಲಕ್ಷ ಜನಸಂಖ್ಯೆ ಹೊಂದಿರುವ ನಗರದಲ್ಲಿ ನಿತ್ಯ ನೂರಾರು ಜನರು ಜನನ, ಮರಣ ಪ್ರಮಾಣಪತ್ರ ಪಡೆಯಲು ನಗರಸಭೆಯ ಆರೋಗ್ಯ ಶಾಖೆಗೆ ಎಡತಾಕುತ್ತಾರೆ. ಹೊಸ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಆರೋಗ್ಯ ಶಾಖೆಯನ್ನು ಎಂಜಿನಿಯರಿಂಗ್ ಶಾಖೆಯ ಸಣ್ಣ ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿದವರು ಪ್ರಮಾಣಪತ್ರ ಪಡೆಯಲು ಆರೋಗ್ಯ ಶಾಖೆಯ ಕೌಂಟರ್ ಮುಂದೆ ನಿಲ್ಲಬೇಕು.
ಇಲ್ಲಿ ಬರುವವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಚಾವಣಿಯ ಆಸರೆಯೂ ಇಲ್ಲದೇ ಇರುವುದರಿಂದ ಬಿಸಿಲು, ಮಳೆಗೆ ಮೈಯೊಡ್ಡುವ ಶಿಕ್ಷೆ ಅನುಭವಿಸಬೇಕಿದೆ. ವಯಸ್ಸಿಗೆ ಬಂದ ಮಕ್ಕಳು ನೌಕರಿ, ವ್ಯಾಪಾರಕ್ಕೆ ಹೋಗುವುದರಿಂದ ಪ್ರಮಾಣ ಪತ್ರಗಳನ್ನು ಪಡೆಯಲು ವೃದ್ಧರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಇಲ್ಲಿನ ಅವ್ಯವಸ್ಥೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ADVERTISEMENT

ಆರೋಗ್ಯ ಶಾಖೆಯು ಈ ಕಟ್ಟಡಕ್ಕೆ ಸ್ಥಳಾಂತರಗೊಂಡು ಒಂದೂವರೆ ವರ್ಷವಾಗಿದೆ. ಆಗಿನಿಂದಲೂ ಜನರು ಚಾವಣಿ ನಿರ್ಮಿಸಿಕೊಡುವಂತೆ ಪೌರಾಯುಕ್ತರು, ಎಂಜಿನಿಯರ್ ಹಾಗೂ ನಗರಸಭಾ ಸದಸ್ಯರಿಗೆ ಮನವಿ ಮಾಡುತ್ತಿದ್ದಾರೆ. ಹೀಗಿದ್ದರೂ ಯಾರೊಬ್ಬರೂ ಅವರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. 

ಚಾವಣಿ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ 

ತೆರಿಗೆ ಶುಲ್ಕ ಸಂಗ್ರಹಿಸುವ ನಗರಸಭೆಯಿಂದ ನಗರದ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅರ್ಜಿ ಸಲ್ಲಿಸಲು ಜನ ಸುಡು ಬಿಸಿಲಲ್ಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಅವರಿಗೆ ಕುಳಿತುಕೊಳ್ಳಲು ಆಸನ ಹಾಗೂ ಚಾವಣಿ ವ್ಯವಸ್ಥೆ ಮಾಡದಿದ್ದರೆ ಸಂಘಟನೆಯಿಂದ ನಗರಸಭೆ ಎದುರು ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಜೈ ಕರುನಾಡು ರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್ ಕೊಡ್ಲಿ ಎಚ್ಚರಿಸಿದರು. 

ಚಾವಣಿ ನಿರ್ಮಿಸಲು ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಸೂಚಿಸಿದ್ದೇನೆ. ಆದರೂ ಸ್ಪಂದಿಸಿಲ್ಲ. ಲಿಖಿತವಾಗಿ ಪತ್ರ ಬರೆಯಲಾಗುವುದು. ಆಗಲೂ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ
ಕವಿತಾ ಮಾರುತಿ ಬೇಡರ್, ನಗರಸಭೆ ಅಧ್ಯಕ್ಷೆ
ಹರಿಹರ ನಗರಸಭೆಯ ಆರೋಗ್ಯ ಶಾಖೆಯ ಕೌಂಟರ್ ಮುಂದೆ ಅರ್ಜಿ ಸಲ್ಲಿಸಲು ಬಿಸಿಲಲ್ಲಿ ನಿಂತಿರುವ ಸಾರ್ವಜನಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.