ADVERTISEMENT

ಗಣರಾಜ್ಯೋತ್ಸವಕ್ಕಿಲ್ಲ ‘ಫಲ–ಪುಷ್ಪ’ದ ಮೆರುಗು

ಬಾರದ ಅನುದಾನ; ಈ ಬಾರಿ ಗಾಜಿನಮನೆಯಲ್ಲಿ ನೀರವ ಮೌನ!

ವಿನಾಯಕ ಭಟ್ಟ‌
Published 19 ಜನವರಿ 2020, 10:40 IST
Last Updated 19 ಜನವರಿ 2020, 10:40 IST
ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದಾಗ ದಾವಣಗೆರೆಯ ಗಾಜಿನಮನೆ ವಿದ್ಯುತ್‌ ದೀಪಗಳಿಂದ ಕಂಗೊಳಿಸಿತ್ತು.
ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದಾಗ ದಾವಣಗೆರೆಯ ಗಾಜಿನಮನೆ ವಿದ್ಯುತ್‌ ದೀಪಗಳಿಂದ ಕಂಗೊಳಿಸಿತ್ತು.   

ದಾವಣಗೆರೆ: ಕಳೆದ ವರ್ಷ ಫಲಪುಷ್ಪ ಪ್ರದರ್ಶನದ ಮೂಲಕ ಗಣರಾಜ್ಯೋತ್ಸವ ಮೆರುಗು ಹೆಚ್ಚಿಸಿದ್ದ ನಗರದ ಗಾಜಿನಮನೆಯಲ್ಲಿ ಈ ಬಾರಿ ನೀರವ ಮೌನ. ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದರೂ ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಯದೇ ಇರುವುದು ಪುಷ್ಪಪ್ರಿಯರಲ್ಲಿ ನಿರಾಸೆ ಮೂಡಿಸಿದೆ.

ಹಲವು ವರ್ಷಗಳಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯು ನಗರದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತಿತ್ತು. ಕಳೆದ ವರ್ಷ ಮೊದಲ ಬಾರಿಗೆ ಗಾಜಿನಮನೆಯಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಫಲುಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿತ್ತು. ಬಗೆ ಬಗೆಯ ವಿದ್ಯುತ್‌ ದೀಪಗಳಿಂದ ಗಾಜಿನಮನೆ ಕಂಗೊಳಿಸುತ್ತಿತ್ತು. ಈ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು, ಗಾಜಿನಮನೆಯನ್ನು ಜನಾಕರ್ಷಣೆ ತಾಣವನ್ನಾಗಿ ಮಾರ್ಪಡಿಸಿತ್ತು.

ಆಗಸ್ಟ್‌ ತಿಂಗಳಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ಎರಡನೇ ಫಲಪುಷ್ಪ ಪ್ರದರ್ಶನಕ್ಕೂ 25 ಸಾವಿರಕ್ಕಿಂತ ಹೆಚ್ಚು ಜನ ಭೇಟಿ ಕೊಟ್ಟಿದ್ದರು. ‘ಈ ಬಾರಿಯೂ ಜನವರಿ 26ರಿಂದ ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ’ ಎಂದು ಪುಷ್ಪಪ್ರಿಯರು ಕಾಣುತ್ತಿದ್ದ ಕನಸು ಮುದುಡುವಂತಾಗಿದೆ.

ADVERTISEMENT

ಅನುದಾನದ ಕೊರತೆ

ತೋಟಗಾರಿಕೆ ಇಲಾಖೆಯು ವರ್ಷಕ್ಕೆ ಒಂದು ಬಾರಿ ಫಲಪುಷ್ಪ ಪ್ರದರ್ಶನ ನಡೆಸಲು ಪ್ರತಿ ಜಿಲ್ಲೆಗೆ ಗರಿಷ್ಠ ₹ 10 ಲಕ್ಷದವರೆಗೆ ಅನುದಾನ ನೀಡುತ್ತದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾತ್ರ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ದಾವಣಗೆರೆಯಲ್ಲೂ ಬೃಹತ್‌ ಗಾಜಿನಮನೆ ನಿರ್ಮಿಸಿದ್ದರಿಂದ ಕಳೆದ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಈ ಬಾರಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಫಲಪುಷ್ಪ ಪ್ರದರ್ಶನಕ್ಕೆ ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ.

‘ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಗಾಜಿಮನೆಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಅಂದಾಜು ₹ 25 ಲಕ್ಷ ಅಗತ್ಯವಿದೆ. ₹ 15 ಲಕ್ಷ ನೀಡುವಂತೆ ಇಲಾಖೆಗೆ ನವೆಂಬರ್‌ನಲ್ಲೇ ಪ್ರಸ್ತಾವ ಕಳುಹಿಸಿಕೊಡಲಾಗಿತ್ತು. ಜನಪ್ರತಿನಿಧಿಗಳಿಂದ ₹ 5 ಲಕ್ಷ ಹಾಗೂ ವಿವಿಧ ಸರ್ಕಾರಿ ಇಲಾಖೆಗಳಿಂದ ₹ 5 ಲಕ್ಷ ಸಂಗ್ರಹಿಸಲು ಉದ್ದೇಶಿಸಿದ್ದೇವು. ಇಲಾಖೆಯ ಅಧಿಕಾರಿಗಳು ಮೌಖಿಕವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಗಣರಾಜ್ಯೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಸಾಧ್ಯವಾಗುವುದಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೋಮ್ಮನ್ನರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಫಲಪುಷ್ಪ ಪ್ರದರ್ಶನದ ಸಮಿತಿಗೆ ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷರಾಗಿದ್ದಾರೆ. ಮಾರ್ಚ್‌ ಮೊದಲ ವಾರ ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ನಡೆಯುವುದರಿಂದ ಜಿಲ್ಲೆಯ ವಿವಿಧೆಡೆಯಿಂದ ನಗರಕ್ಕೆ ಜನ ಬರುತ್ತಾರೆ. ಹೀಗಾಗಿ ಆ ಸಂದರ್ಭದಲ್ಲೇ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದರೆ ಹೆಚ್ಚಿನ ಜನರಿಗೆ ವೀಕ್ಷಿಸಲು ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಒ ಹಾಗೂ ಶಾಸಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಲಕ್ಷ್ಮೀಕಾಂತ್‌ ತಿಳಿಸಿದರು.

*

ಅನುದಾನ ಲಭ್ಯವಾಗದೇ ಇರುವುದರಿಂದ ಗಣರಾಜ್ಯೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಸಾಧ್ಯವಾಗುತ್ತಿಲ್ಲ. ದುರ್ಗಾಂಬಿಕಾ ದೇವಿ ಜಾತ್ರೆ ವೇಳೆ ಆಯೋಜಿಸಲು ಚಿಂತನೆ ನಡೆಸಿದ್ದೇವೆ.

– ಲಕ್ಷ್ಮೀಕಾಂತ್‌ ಬೋಮ್ಮನ್ನರ್‌, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.