ADVERTISEMENT

ರಸ್ತೆ ಮಾಹಿತಿ ಫಲಕವಿಲ್ಲದೇ ದಾರಿ ತಪ್ಪುವ ಜನ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:43 IST
Last Updated 12 ಫೆಬ್ರುವರಿ 2020, 14:43 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಾರಿಗೆ ಇಲಾಖೆ ಅಧಿಕಾರಿ ಎನ್.ಜೆ.ಬಣಕಾರ್ ಇದ್ದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಾರಿಗೆ ಇಲಾಖೆ ಅಧಿಕಾರಿ ಎನ್.ಜೆ.ಬಣಕಾರ್ ಇದ್ದರು   

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಿಂದ ಅತ್ತಿತ್ತ ಸಾಗುವ ರಸ್ತೆಗಳು ಎಲ್ಲಿಗೆ ಸಂಪರ್ಕಿಸುತ್ತವೆ ಎಂಬ ಮಾಹಿತಿ ಇಲ್ಲ. ಇದರಿಂದ ಅನೇಕರು ಸುತ್ತು ಬಳಸಿ ಹೋಗುವಂತಾಗಿದೆ. ಅದಕ್ಕಾಗಿ ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಹಿತಿ ಫಲಕ ಹಾಕಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವ ರಸ್ತೆ ಯಾವ ಕಡೆ ಹೋಗುತ್ತಿದೆ ಎಂದು ಗೊತ್ತಾದರೆ ಸಾರ್ವಜನಿಕರು ತಲುಪಬೇಕಾದ ನಗರ ಅಥವಾ ಗ್ರಾಮಕ್ಕೆ ನೇರವಾಗಿ ಸಾಗಲು ಸಾಧ್ಯವಾಗುತ್ತದೆ. ಇದರಿಂದ ಸಮಯ ಉಳಿಯುತ್ತದೆ ಎಂದು ಹೇಳಿದರು.

ADVERTISEMENT

ಸುಪ್ರೀಂಕೋರ್ಟ್ ಆದೇಶದಂತೆ ರಸ್ತೆ ಬದಿಗಳಲ್ಲಿ ಆಸ್ಪತ್ರೆಗಳ ವಿವರ ಮತ್ತು ದೂರವಾಣಿ ಸಂಖ್ಯೆಯನ್ನು ಹೊಂದಿರುವ ಸಂಪೂರ್ಣ ಮಾಹಿತಿ ಇರುವ ಫಲಕಗಳನ್ನು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟಿ ಸಿಟಿಯವರು ಆಳವಡಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಸೂಚಿಸಿದರು.

ನಗರದ 7 ಕಡೆಗಳಲ್ಲಿ ಟ್ಯಾಕ್ಸಿ ನಿಲುಗಡೆಗೆ ಸ್ಥಳವನ್ನು ನಿಗದಿ ಮಾಡಿ ನಗರ ಡಿವೈಎಸ್‌ಪಿ, ಪಾಲಿಕೆ ಆಯುಕ್ತರು ವರದಿ ಸಲ್ಲಿಸಿದ್ದಾರೆ. ಇಲ್ಲಿ ಟ್ಯಾಕ್ಸಿ, ಮೂರು ಮತ್ತು ನಾಲ್ಕು ಚಕ್ರಗಳ ಸರಕು ಸಾಗಾಣಿಕೆ ವಾಹನಗಳನ್ನು ನಿಲುಗಡೆ ಮಾಡಬಹುದು. ಅದಕ್ಕೆ ಅನುಮತಿ ನೀಡಬೇಕು ಎಂದು ತಿಳಿಸಿದರು.

ಕೆ.ಆರ್ ರಸ್ತೆ ಚರ್ಚ್ ಹತ್ತಿರ ಈಗಾಗಲೇ ವಾಹನಗಳು ನಿಲುಗಡೆಯಾಗುತ್ತಿವೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಚರ್ಚ್‌ನ ಬಳಿ ವಾಹನ ನಿಲ್ಲಿಸುವವರು ಸ್ವಚ್ಛತೆ ಕಾಪಾಡಬೇಕು ಎಂದು ಎಸ್‌ಪಿ ಹನುಮಂತರಾಯ ಸಲಹೆ ನೀಡಿದರು.

ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಬಳಿ ಇರುವ ಟ್ಯಾಕ್ಸಿ ಸ್ಟ್ಯಾಂಡ್‌ನಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ರಸ್ತೆಗಳಿಗೆ ಹಂಪ್ಸ್‌ಗಳನ್ನು ಆಳವಡಿಸಬೇಕು ಎಂದು ಕಾಲೇಜಿನ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಸ್ ಮಂಜಪ್ಪ ಮನವಿ ಮಾಡಿದರು. ಅಲ್ಲಿ ತೊಂದರೆಯಾಗುತ್ತಿಲ್ಲ. ಹಂಪ್ಸ್‌ ಹಾಕಿದರೆ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದು ಎಸ್‌ಪಿ ತಿಳಿಸಿದರು.

ದಾವಣಗೆರೆ ತಹಶೀಲ್ದಾರ್ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ನಗರದ ಹಳೇ ಬಾತಿ ಗ್ರಾಮದ ಜಾಗವನ್ನು ಸೂಚಿಸಿದ್ದಾರೆ ಎಂದು ಆರ್‌ಟಿಒ ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳ ಮುಂಭಾಗದ ರಿಂಗ್‌ರೋಡ್ ಪೂರ್ಣಗೊಳ್ಳದೆ ಕಾಮಗಾರಿಯು ಸ್ಥಗಿತಗೊಂಡಿದೆ, ಇದರಿಂದ ತೊಂದರೆಯಾಗಿದೆ ಎಂದು ಅವರು ತಿಳಿಸಿದಾಗ, ‘ಶೀಘ್ರವಾಗಿ ದುರಸ್ತಿ ಮಾಡಲಾಗುವುದು’ ಎಂದು ಸ್ಮಾರ್ಟ್ ಸಿಟಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹಾದೇವಪ್ಪ ಭರವಸೆ ನೀಡಿದರು.

ಅಶೋಕ ರಸ್ತೆಯಲ್ಲಿ ಅನಧಿಕೃತವಾಗಿ ಲಾರಿಗಳು ನಿಲುಗಡೆಯಾಗುತ್ತವೆ. ಕೆಲವು ಲಾರಿ ಸಂಸ್ಥೆಗಳು ತಮ್ಮ ಕಚೇರಿಯ ಬಳಿಯಲ್ಲಿ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡಿದಾಗ ಮಣ್ಣನ್ನು ನಿಗದಿತ ಸ್ಥಳದಲ್ಲಿ ಹಾಕುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಆರೋಪಿಸಿದರು.

ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಭಾರತಿ, ಹೆಬ್ಬಾಳ್ ಟೋಲ್ ಮ್ಯಾನೇಜರ್ ಟಿ. ಉಮಕಾಂತ್, ಲಾರಿ ಮಾಲೀಕರ ಸಂಘ, ಸರಕು ವಾಹನಗಳ ಸಂಘದವರು, ಐಕಾನ್ ಇಂಟರ್‌ನ್ಯಾಷನಲ್, ದೂಡಾ, ಲೋಕೋಪಯೋಗಿ ಅಧಿಕಾರಿಗಳುಮ ಎಂಜಿನಿಯರ್‌ಗಳು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.