ADVERTISEMENT

ಲಸಿಕೆಗಾಗಿ ಜನರ ಗಲಾಟೆ: ಪೊಲೀಸರ ಮಧ್ಯಪ್ರವೇಶ

ನೋಂದಣಿ ಮಾಡಿಕೊಂಡ ಎಲ್ಲರಿಗೂ ಸಿಗುತ್ತದೆ ಎಂದು ಭಾವಿಸಿ ಬಂದ ಜನ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:26 IST
Last Updated 12 ಮೇ 2021, 5:26 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಮುಗಿಬಿದ್ದ ಜನ
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಮುಗಿಬಿದ್ದ ಜನ   

ದಾವಣಗೆರೆ: 18 ವರ್ಷ ದಾಟಿದ ಎಲ್ಲರಿಗೂ ಕೋವಿಡ್‌ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಮಂಗಳವಾರ ಭಾರಿ ಸಂಖ್ಯೆಯಲ್ಲಿ ಜನರು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಬಂದಿದ್ದರಿಂದ ಗೊಂದಲ ಉಂಟಾಯಿತು. ದಿನಕ್ಕೆ 150 ಮಂದಿಗೆ ಮಾತ್ರ ನೀಡಲಾಗುವುದು ಎಂದರೂ ಕೇಳದೇ ಲಸಿಕೆಗಾಗಿ ಗಲಾಟೆ ಮಾಡಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಎಲ್ಲರಿಗೂ ಸಿಗುತ್ತದೆ ಎಂದು ಭಾವಿಸಿ ಬಂದಿದ್ದರು. 150ರ ವರೆಗೆ ಸೀರಿಯಲ್‌ ನಂಬರ್‌ ಪಡೆದವರು ಒಂದು ಸಾಲಿನಲ್ಲಿ ನಿಂತಿದ್ದರೆ ಇನ್ನೊಂದು ಸಾಲಿನಲ್ಲಿ ಇತರರು ನಿಂತಿದ್ದರು. ಅವರ ನಡುವೆಯೇ ಜಗಳ ಶುರುವಾಯಿತು. ಯಾವ ಅಂತರವೂ ಇಲ್ಲದೇ ಗುಂಪುಗೂಡಿದರು. ಗೊಂದಲದ ಪರಿಸ್ಥಿತಿ ಉಂಟಾಯಿತು. ಟೋಕನ್‌ ಇರುವವರನ್ನು ಹೊರತುಪಡಿಸಿ ಉಳಿದವರನ್ನು ಪೊಲೀಸರು ವಾಪಸ್‌ ಕಳುಹಿಸಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾತ್ರ 18 ವರ್ಷ ದಾಟಿದವರಿಗೆ ಲಸಿಕೆ ನೀಡುತ್ತಿರುವುದರಿಂದ ಈ ಗೊಂದಲ ಉಂಟಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಬೇಕು ಎಂದು ಲಸಿಕೆ ಪಡೆಯಲು ಬಂದಿದ್ದವರು ಒತ್ತಾಯಿಸಿದರು.

ADVERTISEMENT

ಆನ್‌ಲೈನ್‌ ಬುಕಿಂಗ್‌ ಸಮಸ್ಯೆ

18 ವರ್ಷ ದಾಟಿದವರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು www.cowin.gov.inನಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಸುಲಭದಲ್ಲಿ ಆಗುತ್ತಿದೆ. ನೋಂದಣಿ ಮಾಡಿಕೊಂಡ ಬಳಿಕ ದಿನ ಮತ್ತು ಕೇಂದ್ರವನ್ನು ಬುಕ್‌ ಮಾಡಬೇಕು. ಆದರೆ ಬುಕಿಂಗ್ ಮಾಡುವುದೇ ಸಮಸ್ಯೆಯಾಗಿದೆ. ಸ್ಲಾಟ್‌ ತೆರೆದ ಕೆಲವೇ ನಿಮಿಷಗಳಲ್ಲಿ ಬುಕ್ಡ್‌ ಎಂದು ತೋರಿಸುತ್ತಿದೆ. ಬೇರೆ ದಿನಗಳಿಗೆ ಬುಕ್‌ ಮಾಡಲು ಹೋದರೆ ‘ನೋ ಸೆಷನ್ಸ್‌ ಅವೈಲೇಬಲ್‌’ ಎಂದು ಬರುತ್ತಿದೆ. ಬುಕಿಂಗ್‌ ಮಾಡಿಕೊಂಡು ಬಂದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿರುವುದರಿಂದ ಇದು ಸಮಸ್ಯೆಯಾಗುತ್ತಿದೆ.

‘ಸ್ಲಾಟ್‌ ತೆರೆದ ಕೂಡಲೇ ಹೇಗೆ ಭರ್ತಿಯಾಗುತ್ತಿದೆ ಎಂಬುದು ನಮಗೂ ಗೊತ್ತಾಗಿಲ್ಲ. ಈ ಸಮಸ್ಯೆ ಪರಿಹರಿಸಲಾಗುವುದು’ ಎಂದು ಆರ್‌ಸಿಎಚ್‌ಒ ಡಾ. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.