ADVERTISEMENT

ದಾವಣಗೆರೆ | ಅಮಾನತು ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಅಬಕಾರಿ ಪರವಾನಗಿ ನೀಡಲು ಲಂಚ ಪಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:22 IST
Last Updated 17 ಏಪ್ರಿಲ್ 2024, 15:22 IST

ದಾವಣಗೆರೆ: ಅಬಕಾರಿ ಪರವಾನಗಿ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು, ಅಮಾನತುಗೊಂಡಿದ್ದ ಅಬಕಾರಿ ಅಧಿಕಾರಿಗಳಿಗೆ ಹಿನ್ನಡೆಯಾಗಿದೆ. ಅಮಾನತು ಆದೇಶಕ್ಕೆ ತಡೆಯಾಜ್ಞೆ ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಏಪ್ರಿಲ್‌ 5ರಂದು ವಜಾ ಮಾಡಿದೆ.

ಅಬಕಾರಿ ಇಲಾಖೆಯ ಉಪ ಆಯುಕ್ತೆ ಆರ್.ಎಸ್. ಸ್ವಪ್ನಾ, ಹರಿಹರ ಇನ್‌ಸ್ಪೆಕ್ಟರ್ ಶೀಲಾ, ಎಫ್‌ಡಿಎ ಅಶೋಕ್, ಇಲಾಖೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ರವಿಕುಮಾರ್ ಮರಿಗೌಡರ್‌ ಕೆ.ಎ.ಟಿ ಮೊರೆ ಹೋಗಿದ್ದರು.

ಸಿಎಲ್– 7 ಬಾರ್‌ಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು ₹ 60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸೆಪ್ಟೆಂಬರ್ 13ರಂದು ಲೋಕಾಯುಕ್ತಕ್ಕೆ ದೂರು ನೀಡಿ, ಸೆ. 14ರಂದು ಮುಂಗಡವಾಗಿ ₹ 3 ಲಕ್ಷ ಲಂಚ ನೀಡುವಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ, ಆರ್.ಎಸ್. ಸ್ವಪ್ನಾ, ಶೀಲಾ, ಅಶೋಕ್, ಶೈಲಶ್ರೀ ಅವರನ್ನು ಬಂಧಿಸಿದ್ದರು. ಮತ್ತೊಬ್ಬ ಆರೋಪಿ, ಇಲಾಖೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ರವಿಕುಮಾರ್ ಮರಿಗೌಡರ್‌ ತಲೆಮರೆಸಿಕೊಂಡಿದ್ದರು. ನಂತರ ಎಲ್ಲರೂ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.

ADVERTISEMENT

ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಇಲಾಖೆ ಅಮಾನತು ಮಾಡಿತ್ತು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಸಿಬ್ಬಂದಿ ಕೆಎಟಿಯಿಂದ ಅಮಾನತು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು. ಆ ಪೈಕಿ ಶೀಲಾ, ರವಿಕುಮಾರ್‌ ಮರಿಗೌಡರ್, ಸ್ವಪ್ನಾ ಅವರು ಮತ್ತೆ ಅದೇ ಕಚೇರಿಯ, ಅದೇ ಹುದ್ದೆಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.