ADVERTISEMENT

ಹಂದಿ ದಾಳಿ: ಪೌರ ಕಾರ್ಮಿಕನಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 10:50 IST
Last Updated 1 ಸೆಪ್ಟೆಂಬರ್ 2018, 10:50 IST

ದಾವಣಗೆರೆ: ನೀರು ಸರಬರಾಜಿಗಾಗಿ ವಾಲ್ವು ತಿರುಗಿಸಲು ಹೋದ ಪಾಲಿಕೆಯ ಕಾರ್ಮಿಕನ ಮೇಲೆ ಶನಿವಾರ ಬೆಳಿಗ್ಗೆ ಹಂದಿ ದಾಳಿ ಮಾಡಿ ಮರ್ಮಾಂಗ ಹಾಗೂ ತೊಡೆಗೆ ಕಚ್ಚಿದೆ.

ಜಾಲಿನಗರ ಕರೂರು ಗ್ರಾಮದ ನಿವಾಸಿ ಎಚ್‌.ಎನ್‌. ಮಂಜುನಾಥ (52) ಗಾಯಗೊಂಡವರು. ಅವರು ಶನಿವಾರ ಬೆಳಿಗ್ಗೆ 7 ಗಂಟೆಗೆ ನೀರು ಸರಬರಾಜು ಮಾಡುವುದಕ್ಕಾಗಿ ಪಾಲಿಕೆಯ 10ನೇ ವಾರ್ಡ್‌ ಜಾಲಿನಗರದಲ್ಲಿ ವಾಲ್ವು ತಿರುಗಿಸಲು ಹೋಗಿದ್ದಾರೆ. ಪಕ್ಕದಲ್ಲಿಯೇ ಬೃಹದಾಕಾರದ ಹಂದಿ ಮಲಗಿರುವುದನ್ನು ಅವರು ಗಮನಿಸಿರಲಿಲ್ಲ. ಮಂಜುನಾಥ ಅವರು ಬಗ್ಗಿ ವಾಲ್ವು ತಿರುಗಿಸುತ್ತಿದ್ದಾಗ ಹಿಂದಿನಿಂದ ದಾಳಿ ಮಾಡಿದ ಹಂದಿ ತೊಡೆಗೆ ಕಚ್ಚಿದೆ. ಬಳಿಕ ಮರ್ಮಾಂಗಕ್ಕೆ ಬಾಯಿ ಹಾಕಿದೆ. ಅವರು ಬೊಬ್ಬೆ ಹೊಡೆದಾಗ ಹಂದಿ ಬಿಟ್ಟು ಹೋಗಿದೆ. ಮಂಜುನಾಥ ಅವರಿಗೆ ತೀವ್ರ ರಕ್ತಸ್ರಾವ ಆಗಿದೆ.

ಮಂಜುನಾಥ ಅವರ ಮನೆಯವರು, ಜಿಲ್ಲಾ ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಗೋವಿಂದರಾಜ್, ಎಸ್‌.ಕೆ. ಪಾಂಡುರಾಜ್‌, ಟಿ.ಸಿ. ಬಸವರಾಜಯ್ಯ ಸೇರಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತಸ್ರಾವ ನಿಲ್ಲಲು ಮತ್ತು ಹಂದಿಯಿಂದ ಯಾವುದೇ ನಂಜು ಹರಡದಂತೆ ವೈದ್ಯರು ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನು ಆಪರೇಶನ್‌ ಥಿಯೇಟರ್‌ಗೆ ಒಯ್ಯಲಾಗಿದೆ.

ADVERTISEMENT

ಖಂಡನೆ: ನೌಕರ ಮಂಜುನಾಥ ಅವರ ಮೇಲೆ ಹಂದಿ ದಾಳಿ ಮಾಡಿದ ಮೂರು ಗಂಟೆವರೆಗೂ ಯಾವುದೇ ಅಧಿಕಾರಿ ಬಾರದೆ ಇರುವುದನ್ನು ನೌಕರರ ಸಂಘದ ಅಧ್ಯಕ್ಷ ಕೆ.ಎಸ್‌. ಗೋವಿಂದರಾಜ್‌ ಖಂಡಿಸಿದ್ದಾರೆ. ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌, ಸ್ಥಳೀಯ ಪಾಲಿಕೆ ಸದಸ್ಯರಾದ ಗೌರಮ್ಮ ಚಂದ್ರಪ್ಪ, ಲಕ್ಷ್ಮೀದೇವಿ ವೀರಣ್ಣ ಭೇಟಿ ನಿಡಿದ್ದಾರೆ. ಆದರೆ ಆಯುಕ್ತ ಮಂಜುನಾಥ ಆರ್‌. ಬಳ್ಳಾರಿ ಬರುವವರೆಗೆ ಇತರ ಯಾವ ಅಧಿಕಾರಿಯೂ ಬಂದಿಲ್ಲ ಎಂದು ದೂರಿದರು.

ಹಂದಿ ನಿಯಂತ್ರಣಕ್ಕೆ ಆಗ್ರಹ: ಸ್ವಚ್ಛತೆಗೆ ಮಾರಕವಾಗಿದ್ದ ಹಂದಿಗಳು ಆಗಾಗ ಮನುಷ್ಯರ ಮೇಲೆಯೂ ದಾಳಿ ಮಾಡುತ್ತಿವೆ. ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ, ಬೆದರಿಕೆಗೆ ಬಗ್ಗದೆ ಎಲ್ಲಾ ಹಂದಿಗಳನ್ನು ನಗರದ ಹೊರಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗೋವಿಂದರಾಜ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.