ADVERTISEMENT

ದಾವಣಗೆರೆ: ನಗರದಿಂದ ಹೊರಗೆ ಹೋಗಲಿವೆ 15 ಸಾವಿರ ಹಂದಿಗಳು!

ಹಂದಿ ಪುನರ್ವಸತಿಗೆ ಜಾಗ ಒದಗಿಸಿದ ಜಿಲ್ಲಾಡಳಿತ, ಟೆಂಡರ್‌ ಪ್ರಕ್ರಿಯೆ ಆರಂಭ

ಬಾಲಕೃಷ್ಣ ಪಿ.ಎಚ್‌
Published 24 ಆಗಸ್ಟ್ 2021, 2:41 IST
Last Updated 24 ಆಗಸ್ಟ್ 2021, 2:41 IST
ರಸ್ತೆ ಬದಿಯಲ್ಲಿಯಲ್ಲಿರುವ ಹಂದಿಗಳು
ರಸ್ತೆ ಬದಿಯಲ್ಲಿಯಲ್ಲಿರುವ ಹಂದಿಗಳು   

ದಾವಣಗೆರೆ: ಮಂದಿಗೆ ಬಹಳ ತ್ರಾಸ ಕೊಡುತ್ತಿರುವ ಹಂದಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತವು ಪಾಲಿಕೆಗೆ 3 ಎಕರೆ ಜಮೀನನ್ನು ಹಸ್ತಾಂತರಿಸಿದೆ. ಪಾಲಿಕೆಯು ಟೆಂಡರ್ ಕರೆದಿದ್ದು, ಆ.26ಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಂದಿ ಪುನರ್ವಸತಿ ಕೇಂದ್ರ ನಿರ್ಮಾಣ ಕಾರ್ಯ ಮುಗಿದರೆ ನಗರದ 15 ಸಾವಿರ ಹಂದಿಗಳು ಅಲ್ಲಿಗೆ ಸಾಗಾಟವಾಗಲಿದೆ.

ದಾವಣಗೆರೆಯಲ್ಲಿ ಹಂದಿ ಸಮಸ್ಯೆ ದಶಕಗಳಿಂದ ಇದೆ. ಸಮಸ್ಯೆಗೆ ಮುಕ್ತಿ ಕಾಣಿಸಬೇಕು ಎಂಬ ಹೋರಾಟವೂ ಅಷ್ಟೇ ಇತಿಹಾಸವನ್ನು ಹೊಂದಿದೆ. ಈ ನಡುವೆ ಮಕ್ಕಳು, ದೊಡ್ಡವರೆನ್ನದೇ ಹಲವು ಮಂದಿಗೆ ಹಂದಿಗಳು ಕಚ್ಚಿ ಗಾಯಗೊಳಿಸಿವೆ. ಕಚ್ಚಿದ ಹಂದಿಯ ಮಾಲೀಕ ಯಾರು? ಎಂಬುದು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿಲ್ಲ. ಹಂದಿ ಎಲ್ಲೋ ಮಾಲೀಕರು ಎಲ್ಲೋ ಇರುತ್ತಾರೆ. ಹಾಗಾಗಿ ಹಂದಿ ತೊಂದರೆ ನೀಡಿದರೆ ಮಾಲೀಕರು ಸಿಕ್ಕಿ ಬೀಳುವುದಿಲ್ಲ. ಮಾಲೀಕರು ಮಾತ್ರ ತಮ್ಮ ಹಂದಿ ಯಾವುದು ಎಂಬುದನ್ನು ಪತ್ತೆ ಹಚ್ಚಲು ಅದರ ಕಿವಿಗೆ ಗುರುತು ಹಾಕಿರುತ್ತಾರೆ.

ಹಂದಿ ಮಾಲೀಕರೇ ಹಂದಿ ಸಾಕಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ, ಮಹಾ ನಗರ ಪಾಲಿಕೆಯ ಅಧಿಕಾರಿಗಳು ಹಲವು ಬಾರಿ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಮೂರು ವರ್ಷಗಳ ಹಿಂದೆ ಬೀದಿಯಲ್ಲಿ ತಿರುಗುವ ಹಂದಿಗಳನ್ನು ಹಿಡಿಸಿ ತಮಿಳುನಾಡಿಗೆ ಸಾಗಿಸುವ ಕೆಲಸಕ್ಕೆ ಪಾಲಿಕೆ ಕೈ ಹಾಕಿತ್ತು. ನಾಲ್ಕೈದು ಸಾವಿರ ಹಂದಿಗಳ ಸಾಗಾಟವೂ ಆಗಿತ್ತು. ಹಂದಿ ಮಾಲೀಕರ ಪರವಾಗಿಅಖಿಲ ಕರ್ನಾಟಕ ಕುಳುವ ಮಹಾ ಸಂಘವು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಹೊರ ರಾಜ್ಯಕ್ಕೆ ಹಂದಿ ಸಾಗಿಸುವುದನ್ನು ನಿಲ್ಲಿಸಲಾಯಿತು. ಹಂದಿ ಸಾಕುವವರ ಆರ್ಥಿಕ ಪ್ರಗತಿಗೆ ಕ್ರಮ ಕೈಗೊಳ್ಳಬೇಕು. ಹಂದಿಗಳಿಗೆ ನಗರದ ಹೊರವಲಯದಲ್ಲಿ ಪುನರ್ವಸತಿ ಕೇಂದ್ರ ಮಾಡಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಹಂದಿ ಪುನರ್‌ವಸತಿ ವ್ಯವಸ್ಥೆಗ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ಬಳಿಕ ನಗರದಿಂದ 15 ಕಿಲೋಮೀಟರ್‌ ದೂರದಲ್ಲಿ ಇರುವ 3 ಎಕರೆ ಜಮೀನಿನಲ್ಲಿ ಕಾಂಪೌಂಡ್‌ ಹಾಕಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗುವುದು. ಹಂದಿಗಳನ್ನು ಸಾಗಾಟ ಮಾಡುವ ಜತೆಗೆ ಹಂದಿಗಳ ಆಹಾರವಾದ ಹಸಿ ಆಹಾರ ತ್ಯಾಜ್ಯವನ್ನು ಕೂಡ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹಂದಿ ಮಾಲೀಕರಿಗೆ ದಶಕಗಳ ಕಾಲ ಹೇಳಿಯಾಗಿದೆ. ಈಗಲೂ ಅವರು ನಮ್ಮ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿಕೊಂಡರು.

ಹಂದಿಗಳಿಂದ ಸ್ವಚ್ಛತೆಗೆ, ಜನರಿಗೆ, ವಾಹನಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಮಾಲೀಕರಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಿಕೊಡಲಾಗಿದೆ. ಈಗ ಹಂದಿ ಸಾಗಾಟ ಅನಿವಾರ್ಯ.
- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಹಂದಿ ಮಾಲೀಕರು ಒಪ್ಪಲಿ, ಬಿಡಲಿ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಬೇಕಾಗಿದೆ. ಹಂದಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸಬೇಕಿದೆ.
- ವಿಶ್ವನಾಥ ಪಿ. ಮುದಜ್ಜಿ, ಪಾಲಿಕೆ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.