
ದಾವಣಗೆರೆ: ಪ್ಲಾಸ್ಟಿಕ್ ತ್ಯಾಜ್ಯವು ನದಿಗಳ ಮೂಲಕ ನೂರಾರು ಕಿ.ಮೀ ಸಾಗಿ ಸಾಗರ ತಲುಪುತ್ತದೆ. ಕರ್ನಾಟಕದ ವಿಸ್ತೀರ್ಣಕ್ಕಿಂತ 6 ಪಟ್ಟು ಹೆಚ್ಚಿನ ಸಾಗರ ಪ್ರದೇಶ ಪ್ಲಾಸ್ಟಿಕ್‍ನಿಂದ ಆವೃತವಾಗಿದೆ. ಮನೆಯಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಸಾಗರಗಳ ಉಸಿರುಗಟ್ಟುತ್ತಿದೆ ಎಂದು ಪರಿಸರ ತಜ್ಞ ವಿನೋದ್ ಬೋಧನಕರ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಈಚೆಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೂಮಿ ಕೇವಲ ನೆಲವಲ್ಲ. ಅದು ನೀರಿನ ಲೋಕ. ಭೂಮಿಯ ಶೇ 70ರಷ್ಟು ಭಾಗ ಸಾಗರ ಹಾಗೂ ಶೇ 30ರಷ್ಟು ಭೂಮಿ. ಇದನ್ನು ‘ಭೂ-ಜಲ-ಗೋಳ’ ಎಂದು ಕರೆಯಬೇಕಿದೆ. ಸಾಗರವೆಂದರೆ ಕೇವಲ ನೀರಿನ ಅಲೆಗಳ ಸಮೂಹವಲ್ಲ. ಅದು ಭೂಮಿಯ ಉಸಿರಾಟದ ಶಕ್ತಿ’ ಎಂದರು.
‘ನದಿ, ಮಳೆ, ಮೋಡಗಳೆಲ್ಲವೂ ಸಾಗರದ ಉಡುಗೊರೆಗಳು. ಸಾಗರವಿಲ್ಲದಿದ್ದರೆ ನದಿಯಿಲ್ಲ, ನದಿಯಿಲ್ಲದಿದ್ದರೆ ಆಹಾರವಿಲ್ಲ, ಆಹಾರವಿಲ್ಲದಿದ್ದರೆ ಜೀವನವೇ ಇಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸಾಗರ ಸೇರಿದ ಪ್ಲಾಸ್ಟಿಕ್ ಸೂರ್ಯನ ಕಿರಣವನ್ನು ತಡೆಯುತ್ತದೆ. ಸಮುದ್ರ ಸಸ್ಯಗಳನ್ನು ಕೊಲ್ಲುತ್ತದೆ. ಆಮ್ಲಜನಕ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಈ ಪ್ರವೃತ್ತಿ ಮುಂದುವರಿದರೆ 2070ರೊಳಗೆ ಮಾನವಕುಲವು ಉಸಿರಾಡಲು, ಆಹಾರ ಪಡೆಯಲು ಹಾಗೂ ತಾಪಮಾನ ತಾಳಲು ಕಷ್ಟಪಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ’ ಎಂದರು.
‘ಪ್ರತಿಯೊಬ್ಬರು ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಬೇಕು. ಹೊರಗಿನಿಂದ ಪ್ಲಾಸ್ಟಿಕ್ ತರುವುದನ್ನು ನಿಲ್ಲಿಸಬೇಕು. ಪ್ರತಿ ತಿಂಗಳು ಕಾಲೇಜಿಗೆ ತಂದು ನೀಡಬೇಕು. ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ನ್ನು ಮರುಬಳಕೆಗೆ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲ ಗಣೇಶ್ ಡಿ.ಬಿ., ಮಂಜಪ್ಪ ಎಸ್., ಶಿವಯೋಗಿ ಬಿ.ಎಚ್., ಎಂ.ರಮೇಶ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.