ADVERTISEMENT

ಗುಟ್ಟು ಬಿಡದ ಬಿಡ್‌ ರಾಜಕೀಯ

ಮೊದಲ ಹಂತದ ಚುನಾವಣೆ: ನಾಮಪತ್ರ ವಾಪಸ್‌ಗೆ ಇಂದು ಕೊನೇ ದಿನ

ಬಾಲಕೃಷ್ಣ ಪಿ.ಎಚ್‌
Published 14 ಡಿಸೆಂಬರ್ 2020, 4:53 IST
Last Updated 14 ಡಿಸೆಂಬರ್ 2020, 4:53 IST

ದಾವಣಗೆರೆ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಡಿ.22ರಂದು ನಡೆಯಲಿದೆ. ಅದಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಡಿ.14 ಕೊನೇ ದಿನವಾಗಿದೆ. ಹಲವು ಕಡೆ ದೇವಸ್ಥಾನಕ್ಕೆ ಹರಾಜು ಕೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಡುತ್ತಿದೆ. ಆದರೆ ಗ್ರಾಮಸ್ಥರು ಇದನ್ನು ಅಧಿಕೃತವಾಗಿ ಹೇಳುತ್ತಿಲ್ಲ. ಅಧಿಕಾರಿಗಳ ತಂಡಗಳು ಗ್ರಾಮಗಳಿಗೆ ಭೇಟಿ ನೀಡಿದರೂ ದೂರು ದಾಖಲಿಸಿಕೊಳ್ಳಲು ಬೇಕಾದ ಸಾಕ್ಷ್ಯಗಳು ದೊರೆತಿಲ್ಲ.

ಜಗಳೂರು ತಾಲ್ಲೂಕಿನ ಕೆಚ್ಚೇನಹಳ್ಳಿ ಸಹಿತ ಹಲವು ಗ್ರಾಮಗಳಲ್ಲಿ ಈ ರೀತಿ ಸ್ಥಳೀಯ ದೇವಸ್ಥಾನಕ್ಕೆ ಹೆಚ್ಚು ಹಣ ನೀಡಿದವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ ದಾವಣಗೆರೆ ತಾಲ್ಲೂಕಿನ ಕಂದಗಲ್‌, ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ ಸೇರಿ ಅನೇಕ ಗ್ರಾಮಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಆದರೆ ಯಾರೂ ಅಧಿಕೃತವಾಗಿ ತಿಳಿಸದೇ ಇರುವುದು ಅಧಿಕಾರಿಗಳಿಗೆ ಕಗ್ಗಂಟು ಉಂಟು ಮಾಡಿದೆ.

‘ಕಂದಗಲ್‌ನಲ್ಲಿ ಹರಾಜು ನಡೆದಿದೆ ಎಂದು ಮಾಹಿತಿ ಬಂದಿತ್ತು. ಅಲ್ಲಿಗೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಆದರೆ ಆ ರೀತಿ ಯಾವುದೇ ಪ್ರಕ್ರಿಯೆಗಳು ನಡೆದೇ ಇಲ್ಲ ಎಂದು ಗ್ರಾಮಸ್ಥರೇ ಬರೆದುಕೊಟ್ಟಿದ್ದಾರೆ. ನಿಯಮ ಮೀರಿದ ಕ್ರಮಗಳು ನಡೆದಾಗ ಅದನ್ನು ಧೈರ್ಯವಾಗಿ ತಿಳಿಸಲು ಆಯಾ ಗ್ರಾಮಗಳ ವಿದ್ಯಾ
ವಂತರು ಮುಂದೆ ಬರ
ಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಸದ್ಯಕ್ಕೆ ನಮ್ಮಲ್ಲಿ ಎಲ್ಲ ಸ್ಥಾನಗಳಿಗೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಮವಾರ ನಾಮ
ಪತ್ರ ಹಿಂತೆಗೆದು
ಕೊಳ್ಳಲು ಕೊನೇ ದಿನವಾದ ಕಾರಣ ಕೆಲವರು ನಾಮಪತ್ರ ಹಿಂತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಿ ಹರಾಜು ನಡೆದಿದೆಯೋ ಅಲ್ಲಿಯ ಜನರೇ ತಿಳಿಸಬೇಕು. ಇಲ್ಲದೇ ಇದ್ದರೆ ಹರಾಜು ನಡೆದಿರುವುದಕ್ಕೆ ಸಾಕ್ಷ್ಯಗಳು ಸಿಗಬೇಕು’ ಎಂದು ಜಗಳೂರು ತಹಶೀಲ್ದಾರ್‌ ಡಾ.ನಾಗವೇಣಿ ಮಾಹಿತಿ ನೀಡಿದ್ದಾರೆ.

‘ಹರಾಜುಗಳಾದರೆ ಕೂಡಲೇ ಗೊತ್ತಾಗಬೇಕು. ಆಗ ಅಲ್ಲಿ ಮನವೊಲಿಸಲು ಸಾಧ್ಯವಾಗುತ್ತದೆ. ಯಾವುದಾದರೂ ಕ್ಷೇತ್ರದಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಬೇಕು. ಅವರನ್ನೇ ಅವಿರೋಧ ಆಯ್ಕೆ ಮಾಡಬೇಕು ಎಂದು ಹರಾಜು ಮೂಲಕ ನಿರ್ಧರಿಸಿದ್ದರೂ, ಇಬ್ಬರು ನಾಮಪತ್ರ ಸಲ್ಲಿಸುತ್ತಾರೆ. ಬಳಿಕ ಒಬ್ಬರು ಹಿಂತೆಗೆದುಕೊಳ್ಳುತ್ತಾರೆ. ಮೊದಲೇ ಗೊತ್ತಾದರೆ ಅಲ್ಲಿ ಸ್ಪರ್ಧೆ ನಡೆಯುವಂತೆ ಮಾಡ
ಬಹುದು. ಅಧಿಕೃತ ವಾಗಿ ಯಾವುದೇ ದೂರುಬಂದಿಲ್ಲ’ ಎಂದು ಹೊನ್ನಾಳಿ ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರು ವಿವರಿಸಿದ್ದಾರೆ.

ಜಿಲ್ಲೆಯ ಹರಿಹರ, ಚನ್ನಗಿರಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಎರಡನೇ ಹಂತದಲ್ಲಿ ಅಂದರೆ ಡಿ.27ಕ್ಕೆ ಮತದಾನ ನಡೆಯಲಿದೆ. ಈ ತಾಲ್ಲೂಕುಗಳಲ್ಲೂ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಅಲ್ಲಿಯೂ ಕೆಲವುಕಡೆ ಅನಧಿಕೃತ ಹರಾಜು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಬರತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.