ದಾವಣಗೆರೆ: ಮಾನವ ಕಳ್ಳ ಸಾಗಣೆಯಂತಹ ಹೀನಾಯ ಸ್ಥಿತಿಗೆ ದೇಶದಲ್ಲಿರುವ ಬಡತನವೇ ಕಾರಣ. ಬಡತನ ನಿರ್ಮೂಲನೆಗೆ ಒತ್ತು ನೀಡಿದರೆ ಈ ವಿಷವರ್ತುಲದಿಂದ ಹೊರಬರಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುಧಾರಣಾ ಸಂಸ್ಥೆಯ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಮಾನವ ಕಳ್ಳ ಸಾಗಾಣಿಕೆ ತಡೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ದುಡಿಮೆಗೆ ದೂಡಲು ಮಾನವ ಕಳ್ಳಸಾಗಣೆ ಮಾಡಲಾಗುತ್ತದೆ. ಲೈಂಗಿಕ ಚಟುವಟಿಕೆಗೆ ತಳ್ಳುವ ಜಾಲವೂ ಇದರಲ್ಲಿದೆ. ಮಹಿಳೆಯರು ಇಂತಹ ಜಾಲಕ್ಕೆ ಸಿಲುಕುತ್ತಿರುವುದು ಬಡತನದ ಕಾರಣಕ್ಕೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳು ಕಳ್ಳ ಸಾಗಣೆ ಜಾಲಕ್ಕೆ ಸಿಲುಕುವ ಅಪಾಯವಿದೆ. ಪಾಲಕರು ಹಾಗೂ ಮಕ್ಕಳು ವಲಸೆ ಹೋದರೆ ಗ್ರಾಮೀಣ ಸ್ಥಳೀಯ ಸಂಸ್ಥೆಯಲ್ಲಿ ದಾಖಲಿಸಬೇಕು ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಬಡತನದ ಕಾರಣಕ್ಕೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಕಳ್ಳಸಾಗಣೆ ನಡೆಯುತ್ತಿದೆ’ ಎಂದು ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಸದಸ್ಯ ರೂಪಾ ನಾಯ್ಕ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾ ನಾಯ್ಕ, ರಾಜ್ಯ ಮಾನವ ಕಳ್ಳ ಸಾಗಾಣಿಕೆ ತಡೆ ಸಮಿತಿ ಸದಸ್ಯ ಎ.ರಾಜೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ವಕೀಲೆ ಪಿ.ಸಿ. ಅನಿತಾ, ಜಗಳೂರು ಪಿಎಸ್‌ಐ ಆಶಾ, ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.