ADVERTISEMENT

ಅಧಿಕಾರ ನಮ್ಮದೇ, ಕೆಲಸ ಮಾಡಿ

ಪಾಲಿಕೆ ಕಾಂಗ್ರೆಸ್ ಸದಸ್ಯೆಯರಿಗೆ ಸನ್ಮಾನ ಸಮಾರಂಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 15:53 IST
Last Updated 5 ಜನವರಿ 2020, 15:53 IST
ದಾವಣಗೆರೆಯ ಕಾಂಗ್ರೆಸ್ ಭವನದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯೆಯರನ್ನು ಸನ್ಮಾನಿಸಲಾಯಿತು. ಶಾಸಕ ಶಾಮನೂರು ಶಿವಶಂಕರಪ್ಪ, ದಿನೇಶ್ ಕೆ.ಶೆಟ್ಟಿ, ಅನಿತಾಬಾಯಿ ಮಾಲತೇಶ್ ಇದ್ದರು.–ಪ್ರಜಾವಾಣಿ ಚಿತ್ರ
ದಾವಣಗೆರೆಯ ಕಾಂಗ್ರೆಸ್ ಭವನದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯೆಯರನ್ನು ಸನ್ಮಾನಿಸಲಾಯಿತು. ಶಾಸಕ ಶಾಮನೂರು ಶಿವಶಂಕರಪ್ಪ, ದಿನೇಶ್ ಕೆ.ಶೆಟ್ಟಿ, ಅನಿತಾಬಾಯಿ ಮಾಲತೇಶ್ ಇದ್ದರು.–ಪ್ರಜಾವಾಣಿ ಚಿತ್ರ   

ದಾವಣಗೆರೆ: ಪಾಲಿಕೆಯಲ್ಲಿ ಹೆಚ್ಚು ಸದಸ್ಯರನ್ನು ಗೆದ್ದಿರುವ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದ್ದು, ಯಾರೂ ಆತಂಕ ಪಡಬೇಕಿಲ್ಲ. ನೀವು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಘಟಕದಿಂದ ಕಾಂಗ್ರೆಸ್ ಸದಸ್ಯೆಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನಿಂದ 22 ಸದಸ್ಯರಿದ್ದು, ಜೆಡಿಎಸ್ ಸದಸ್ಯೆ ಬೆಂಬಲ ನೀಡುವ ವಿಶ್ವಾಸವಿದೆ. ಇದರಿಂದ ಪಾಲಿಕೆ ನಮ್ಮ ಆಡಳಿತಕ್ಕೆ ಬರಲಿದ್ದು, ಯಾವುದೇ ಸದಸ್ಯರು ಎದೆಗುಂದುವುದು ಬೇಡ. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಅದು ಸಫಲವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯವರು ಪದೇ ಪದೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಿದ್ದು, ಅವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗುವುದಿಲ್ಲ ಎಂದ ಅವರು, ಮಹಾನಗರ ಪಾಲಿಕೆ ಆಯುಕ್ತರನ್ನು ಬದಲಾಯಿಸುವ ಮೂಲಕ ಅಧಿಕಾರಿ ವರ್ಗವನ್ನು ಬೆದರಿಸುವ ಕೆಲಸ ಬಿಜೆಪಿ ಆಡಳಿತದಿಂದ ಆಗುತ್ತಿದೆ’ ಎಂದು ದೂರಿದರು.

‘ವಾರ್ಡ್‌ನಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಂಡು, ಜನರು ಸಮಸ್ಯೆಗಳಿಗೆ ಸ್ಪಂದಿಸಿಸಬೇಕು. ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿ ಸ್ಪಂದಿಸದೇ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ’ ಎಂದು ಹೇಳಿದರು.

‘ಜಲಸಿರಿ’ ಯೋಜನೆಯನ್ನು ಈಗಾಗಲೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್‍ನ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಕೆಲವೇ ತಿಂಗಳಲ್ಲಿ ದಾವಣಗೆರೆಯಲ್ಲಿ ಅನುಷ್ಠಾನಗೊಳ್ಳಲಿದೆ. ಜ.15ರ ನಂತರ ಪ್ರತಿದಿವಸ ನೀರು ಕೊಡಬಹುದು. ಆಗ ಆ ಭಾಗದ ಸದಸ್ಯರಿಗೆ ಹೆಸರು ಬರುತ್ತದೆ’ ಎಂದು ಹೇಳಿದರು.

‘ಹಳೇ ದಾವಣಗೆರೆಯಲ್ಲಿ 100 ಎಕರೆ ಜಮೀನು ಖರೀದಿಸಿ ಆಶ್ರಯ ಮನೆ ಯೋಜನೆಯಡಿ ಬಡವರಿಗೆ ಮನೆ ನೀಡಲು ವಸತಿ ಸಚಿವರಿಗೆ ಮನವಿ ಮಾಡಲಾಗುವುದು. ನಗರದ ಹೊರಗಡೆ ಜಮೀನು ಖರೀದಿಸಿ ಅಲ್ಲಿ ಹಂದಿಗಳು ಹಾಗೂ ಬೀಡಾಡಿ ದನಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯೆ ಆಶಾ ಉಮೇಶ್‌ ಮಾತನಾಡಿ,‘ಮಹಿಳೆಯರಿಗೆ ಪಡಿತರಚೀಟಿ ಹಾಗೂ ವಿಧವಾ ವೇತನ ಕಲ್ಪಿಸಲು ಸದಸ್ಯೆಯರು ಮುಂದಾಗಬೇಕು. ಆಗ ಜನರಿಗೆ ಹತ್ತಿರವಾಗುತ್ತೇವೆ’ ಎಂದು ಹೇಳಿದರು.

ಪಾಲಿಕೆ ಸದಸ್ಯ ಎ.ನಾಗರಾಜು ಮಾತನಾಡಿ, ಜನರು ನಿರೀಕ್ಷೆ ಇಟ್ಟು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಪಾಲಿಕೆ ಸಭೆಗಳಲ್ಲಿ ಎಲ್ಲರೂ ಮಾತನಾಡಿ ಉತ್ತಮ ಕೆಲಸ ಮಾಡಬೇಕು ಎಂದರು.

ಸದಸ್ಯೆಯರಾದ ಶ್ವೇತಾ ಶ್ರೀನಿವಾಸ್, ಸುಧಾ ಮಂಜುನಾಥ್, ಹುರ್ ಬಾನು, ಯಶೋಧ ಉಮೇಶ್, ಶಿವಲೀಲಾ ಕೊಟ್ರಯ್ಯ, ಸವಿತಾ ಗಣೇಶ್ ಹುಲ್ಮನಿ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಸದಸ್ಯ ದೇವರಮನಿ ಶಿವಕುಮಾರ್, ಪ್ರಿಯದರ್ಶಿನಿ ಮಹಿಳಾ ಸಂಘದ ಸುಧಾ ಗೌಡ್ರು, ಮುಖಂಡರಾದ ರಹಜಾನ್ ದಾದಾಪೀರ್, ವಿಜಯ ಅಕ್ಕಿ, ಶುಭಮಂಗಳ, ದ್ರಾಕ್ಷಾಯಣಮ್ಮ, ರಾಧಾಬಾಯಿ, ಸುನೀತಾ ಬೀಮಣ್ಣ, ಮಂಗಳಮ್ಮ, ಅಲಿ ರಹಮತ್, ಮುಜಾಹಿದ್, ಸುಷ್ಮಾ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.