ದಾವಣಗೆರೆ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧವನ್ನು ರೋಗಿಗಳಿಗೆ ಒದಗಿಸುವ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ರದ್ದುಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. ಇದರಿಂದ ಲ್ಲಿರುವ ಜನೌಷಧ ಕೇಂದ್ರಗಳ ಬಾಗಿಲು ಮುಚ್ಚುವ ಭೀತಿ ಎದುರಾಗಿದೆ.
ಆರೋಗ್ಯ ಇಲಾಖೆಯ ಈ ಆದೇಶ ಜನರ ತಳಮಳಕ್ಕೆ ಕಾರಣವಾಗಿದೆ. ಅಗತ್ಯ ಔಷಧಗಳಿಗೆ ಈ ಕೇಂದ್ರಗಳ ಮೇಲೆ ಅವಲಂಬಿತರಾಗಿದ್ದ ಬಡ ರೋಗಿಗಳಿಗೆ ಆತಂಕ ಕಾಡತೊಡಗಿದೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 7 ಜನೌಷಧ ಕೇಂದ್ರಗಳಿವೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ ಒಂದು ಕೇಂದ್ರಗಳಿವೆ. 2017ರಿಂದ ಕಾರ್ಯಾರಂಭವಾಗಿರುವ ಈ ಕೇಂದ್ರಗಳನ್ನು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ನಿರ್ವಹಣೆ ಮಾಡುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿನ ಜನೌಷಧ ಕೇಂದ್ರ ತಾತ್ಕಾಲಿಕವಾಗಿ ಮುಚ್ಚಿದೆ.
ಭಾರತೀಯ ಔಷಧ ಮಂಡಳಿಯು (ಬಿಪಿಪಿಐ) ಜನೌಷಧ ಕೇಂದ್ರಗಳಿಗೆ ನೋಡಲ್ ಸಂಸ್ಥೆಯಾಗಿದೆ. 400ಕ್ಕೂ ಹೆಚ್ಚು ವಿಧದ ಔಷಧಗಳು ಈ ಕೇಂದ್ರದಲ್ಲಿ ಲಭ್ಯವಾಗುತ್ತಿವೆ. ರಕ್ತದೊತ್ತಡ, ಮಧುಮೇಹ, ನೋವು ನಿವಾರಕ, ರೋಗ ನಿರೋಧಕ, ವಿಟಮಿನ್ ಸೇರಿ ಹಲವು ಬಗೆಯ ಔಷಧ ಲಭ್ಯವಾಗುತ್ತವೆ. ಬಿಪಿಪಿಐ ಪೂರೈಕೆ ಮಾಡುವ ಔಷಧ ಹೊರತುಪಡಿಸಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ. ಆಸ್ಪತ್ರೆಯ ಹೊರರೋಗಿ ವಿಭಾಗದ ಸಮಯಕ್ಕೆ ಅನುಗುಣವಾಗಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2.15ರಿಂದ ಸಂಜೆ 5.30ರವರೆಗೆ ಇವು ಕಾರ್ಯನಿರ್ವಹಿಸುತ್ತಿವೆ.
ರಕ್ತದೊತ್ತಡಕ್ಕೆ ಸೇವಿಸುವ 10 ಮಾತ್ರೆಗಳು ಜನೌಷಧ ಕೇಂದ್ರದಲ್ಲಿ ₹ 24ಕ್ಕೆ ಲಭ್ಯವಿದೆ. ಇದೇ ಮಾತ್ರೆಗೆ ರೋಗಿಯೊಬ್ಬರು ಖಾಸಗಿ ಔಷಧ ಅಂಗಡಿಯಲ್ಲಿ ₹ 160ಕ್ಕೂ ಹೆಚ್ಚು ಬೆಲೆ ತೆರಬೇಕು. ಮಧುಮೇಹಕ್ಕೆ ಸೇವಿಸುವ 30 ಮಾತ್ರೆಗಳು ಇಲ್ಲಿ ₹ 54ಕ್ಕೆ ಲಭ್ಯ ಇವೆ. ‘ಟ್ಯಾಕ್ಲೊಮಸ್’ ಎಂಬ ಮುಲಾಮು ಜನೌಷಧ ಕೇಂದ್ರದಲ್ಲಿ ₹ 100ಕ್ಕೆ ಸಿಗುತ್ತಿದೆ. ಖಾಸಗಿ ಔಷಧ ಅಂಗಡಿಯಲ್ಲಿ ಇದಕ್ಕೆ ₹ 350 ಬೆಲೆ ಇದೆ. ಮಧುಮೇಹ ಮತ್ತು ರಕ್ತದೊತ್ತಡದ ಮಾತ್ರೆಗಳಿಗೆ ಜನೌಷಧ ಕೇಂದ್ರದಲ್ಲಿ ಭಾರಿ ಬೇಡಿಕೆ ಇದೆ.
‘ರಕ್ತದ ಒತ್ತಡಕ್ಕೆ ನಮ್ಮ ಕುಟುಂಬದ ಇಬ್ಬರು ಸದಸ್ಯರು ನಿತ್ಯ ಎರಡು ಮಾತ್ರೆ ಸೇವಿಸುತ್ತಾರೆ. ಇಬ್ಬರಿಗೂ ತಿಂಗಳಿಗೆ ಅಗತ್ಯವಿರುವ ಮಾತ್ರೆಗಳು ಜನೌಷಧ ಕೇಂದ್ರದಲ್ಲಿ ₹ 144ಕ್ಕೆ ಸಿಗುತ್ತಿವೆ. ಖಾಸಗಿ ಔಷಧದಂಡಿಯಲ್ಲಿ ಇಷ್ಟು ಮಾತ್ರೆಗೆ ₹ 500ಕ್ಕೂ ಹೆಚ್ಚು ಬೆಲೆ ತೆರಬೇಕಿದೆ. ಸರ್ಕಾರ ಯಾವುದೇ ಕಾರಣಕ್ಕೂ ಜನೌಷಧ ಕೇಂದ್ರ ಮುಚ್ಚಬಾರದು’ ಎಂದು ಒತ್ತಾಯಿಸುತ್ತಾರೆ ದೇವರಾಜ ಅರಸು ಬಡಾವಣೆಯ ಕೆ.ಎಂ.ನಿರಂಜನ.
‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಲ್ಲ ರೋಗಿಗಳಿಗೆ ಔಷಧಗಳನ್ನು ಉಚಿತವಾಗಿಯೇ ನೀಡಲಾಗುತ್ತಿದೆ. ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಯಾವುದೇ ಔಷಧಗಳಿಗೆ ಕೊರತೆ ಇಲ್ಲ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಷಣ್ಮುಖಪ್ಪ.
ಜನೌಷಧ ಕೇಂದ್ರ ನಿರ್ವಹಿಸುತ್ತಿರುವ ಸಂಸ್ಥೆಯ ಜೊತೆಗಿನ ಒಡಂಬಡಿಕೆ ರದ್ದುಪಡಿಸಿಕೊಳ್ಳಲು ಸೂಚನೆ ಬಂದಿದೆ. ಕೇಂದ್ರವನ್ನು ಸ್ಥಗಿತಗೊಳಿಸಲು ಅಥವಾ ಮುಚ್ಚಲು ಸರ್ಕಾರ ಆದೇಶಿಸಿಲ್ಲ.– ಡಾ.ಎಸ್. ಷಣ್ಮುಖಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ದಾವಣಗೆರೆ
ರಕ್ತದೊತ್ತಡಕ್ಕೆ 2 ವರ್ಷದಿಂದ ಮಾತ್ರೆ ಖರೀದಿಸುತ್ತಿದ್ದೇನೆ. ಖಾಸಗಿ ಔಷಧ ಮಳಿಗೆಗಿಂತ ಶೇ 80ರಷ್ಟು ಕಡಿಮೆ ಬೆಲೆಗೆ ಮಾತ್ರೆ ಸಿಗುತ್ತಿವೆ. ಕೇಂದ್ರ ಮುಚ್ಚಿದರೆ ತೊಂದರೆ ಆಗಲಿದೆ.– ಕೆ.ಎಂ.ನಿರಂಜನ, ದಾವಣಗೆರೆ
ಉದರ ಸಮಸ್ಯೆಗೆ ಸಂಬಂಧಿಸಿದ ತಿಂಗಳ ಮಾತ್ರೆ ಜನೌಷಧ ಕೇಂದ್ರದಲ್ಲಿ ₹ 154ಕ್ಕೆ ಲಭ್ಯವಾಯಿತು. ಖಾಸಗಿ ಔಷಧ ಅಂಗಡಿಯಲ್ಲಿ ಈ ಮಾತ್ರೆಗೆ ₹ 450ಕ್ಕೂ ಹೆಚ್ಚು ಬೆಲೆ ಹೇಳಿದ್ದರು.– ಮಧುಸೂದನ್, ದಾವಣಗೆರೆ
ಆಸ್ಪತ್ರೆಯಲ್ಲಿ ಸಿಗದು
ಎಲ್ಲ ಔಷಧ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಔಷಧಗಳು ಲಭ್ಯವಾಗುತ್ತಿಲ್ಲ. ಚಿಕಿತ್ಸೆ ನೀಡಿದ ವೈದ್ಯರು ಹೊರಗೆ ಔಷಧ ಖರೀದಿಸುವಂತೆ ರೋಗಿಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ಖಾಸಗಿ ಔಷಧದ ಅಂಗಡಿಯ ಬದಲು ರೋಗಿಗಳು ಜನೌಷಧ ಕೇಂದ್ರದಲ್ಲಿ ಸೇವೆ ಪಡೆಯುತ್ತಿದ್ದಾರೆ. ಇಂತಹ ರೋಗಿಗಳಿಗೆ ಇನ್ನು ಮುಂದೆ ತೊಂದರೆಯಾಗುವ ಸಾಧ್ಯತೆ ಇದೆ.
‘ಸರ್ಕಾರಿ ಆಸ್ಪತ್ರೆಯಲ್ಲಿಯೇ ಔಷಧ ನೀಡುತ್ತಿರುವಾಗ ಜನೌಷಧ ಕೇಂದ್ರ ಏಕೆ?’ ಎಂಬುದು ಸಚಿವರೊಬ್ಬರ ಪ್ರಶ್ನೆ. ಆದರೆ ಎಲ್ಲ ಔಷಧಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿಲ್ಲ ಎಂಬುದು ಜನರ ಆರೋಪ. ‘ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಔಷಧವನ್ನು ಉಚಿತವಾಗಿ ನೀಡಬೇಕು ಎಂಬುದು ಸರ್ಕಾರದ ನಿಯಮ. ಆದರೆ ಎಲ್ಲ ಔಷಧಗಳು ಪೂರೈಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನೌಷಧ ಕೇಂದ್ರದಿಂದ ಕಡಿಮೆ ಬೆಲೆಗೆ ಖರೀದಿಸಿ ಒದಗಿಸಲಾಗುತ್ತಿತ್ತು. ಜನೌಷಧ ಕೇಂದ್ರ ಮುಚ್ಚಿದರೆ ಇದಕ್ಕೂ ತೊಂದರೆ ಆಗಲಿದೆ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಮೇಲ್ದರ್ಜೆಗೆ ಏರಿಸುವ ಪ್ರಯತ್ನ
ಜಿಲ್ಲೆಯ ಜನೌಷಧ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಗಳ ಸ್ಥಗಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಹೊರಬಿದ್ದ ಬಳಿಕ ಸಿದ್ಧತೆ ಮೊಟಕುಗೊಂಡಿದೆ. ಕಾರ್ಪೊರೇಟ್ ಕಂಪನಿಗಳ ಔಷಧ ಅಂಗಡಿಗಳ ಮಾದರಿಯಲ್ಲಿ ಜನೌಷಧ ಕೇಂದ್ರ ರೂಪಿಸಲು ಎಂಎಸ್‌ಐಎಲ್ ಯೋಜನೆ ರೂಪಿಸಿತ್ತು. ಕೇಂದ್ರವನ್ನು ಮರುವಿನ್ಯಾಸಗೊಳಿಸಲು ನಿರ್ಧರಿಸಿತ್ತು. ಪ್ರತಿ ಕೇಂದ್ರದಲ್ಲಿ ಇರುವ ಇಬ್ಬರು ಸಿಬ್ಬಂದಿಗೆ ತರಬೇತಿ ನೀಡಲು ಮುಂದಾಗಿತ್ತು. ಕೇಂದ್ರ ಮುಚ್ಚಿದರೆ ಈ ಸಿಬ್ಬಂದಿ ಅತಂತ್ರರಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.