ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಹರಿಹರ ಸೇತುವೆಗಳ ಮೇಲೆ ಬೀದಿ ದೀಪಗಳ ಬೆಳಕು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:11 IST
Last Updated 22 ಅಕ್ಟೋಬರ್ 2025, 6:11 IST
ಹರಿಹರದ ತುಂಗಭದ್ರಾ ಹೊಳೆ ಸೇತುವೆ ಮೇಲಿನ ಬೀದಿ ದೀಪಗಳು ಬೆಳಗಿರುವುದು
ಹರಿಹರದ ತುಂಗಭದ್ರಾ ಹೊಳೆ ಸೇತುವೆ ಮೇಲಿನ ಬೀದಿ ದೀಪಗಳು ಬೆಳಗಿರುವುದು   

ಹರಿಹರ: ನಗರದ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳು ಬೆಳಗುತ್ತಿವೆ.

‘ಹರಿಹರ: ಬೀದಿ ದೀಪಗಳಿಲ್ಲದ ಕತ್ತಲೆ ಸಾಮ್ರಾಜ್ಯ’ ಶೀರ್ಷಿಕೆಯಡಿ ಪ್ರಜಾವಾಣಿ ಶನಿವಾರ (ಅ.18)ದ ಸಂಚಿಕೆಯಲ್ಲಿ ವಿಶೇಷ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಶನಿವಾರ ರಾತ್ರಿಯೇ ದಾವಣಗೆರೆ ರಸ್ತೆ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳನ್ನು ಸರಿಪಡಿಸಿದ್ದಾರೆ. 

ಈ ಎರಡೂ ಸೇತುವೆಗಳ ಮೇಲೆ ಬೆಳಗಿನ ಜಾವ ಹಾಗೂ ಸಂಜೆಯ ವಾಯು ವಿಹಾರಕ್ಕೆ ಹೋಗುವವರು, ಸಂಚರಿಸುವ ಪಾದಚಾರಿಗಳು, ಸೈಕಲ್ ಸವಾರರು ನಿರಾತಂಕವಾಗಿ ಸಂಚರಿಸಲು ಅನುಕೂಲವಾಗಿದೆ.

ADVERTISEMENT

ಹೊಸ ಸೇತುವೆ ಮೇಲೆ ಇನ್ನೂ ಕತ್ತಲು: ತುಂಗಭದ್ರಾ ಹೊಸ ಸೇತುವೆ ಮೇಲಿನ ಬೀದಿ ದೀಪಗಳು ಇನ್ನೂ ಬೆಳಗಿಲ್ಲ, ರೈಲ್ವೆ ಮೇಲ್ಸೇತುವೆ ಇಕ್ಕೆಲಗಳ ಸರ್ವಿಸ್ ರಸ್ತೆಗಳ ಬೀದಿ ದೀಪಗಳೂ ಇನ್ನೂ ಬೆಳಗುತ್ತಿಲ್ಲ.

‘ಹೊಸ ಸೇತುವೆ ಮೇಲಿನ ದೀಪಗಳನ್ನು ಆನ್ ಮಾಡಲು ತಾಂತ್ರಿಕ ತೊಂದರೆ ಇದೆ. ಪ್ರಕ್ರಿಯೆ ನಡೆಸಿ ಆದಷ್ಟು ಬೇಗ ಆ ದೀಪಗಳನ್ನೂ ಆನ್ ಮಾಡಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.

ಸೇತುವೆಗಳನ್ನು ಹೊರತುಪಡಿಸಿ ನಗರದ ಹೊರ ಭಾಗದ ಹಾಗೂ ನಗರದೊಳಗಿನ ಹಲವು ಬಡಾವಣೆಗಳಲ್ಲೂ ಬೀದಿ ದೀಪಗಳ ನಿರ್ವಹಣೆ ತಾಳತಪ್ಪಿದೆ, ಆ ಬಡಾವಣೆಗಳ ಬೀದಿ ದೀಪಗಳು ಬೆಳಗುವಂತಾಗಬೇಕು, ವಿದ್ಯಾರ್ಥಿಗಳು, ಮಹಿಳೆಯರು, ಜನರು ನಿರಾತಂಕವಾಗಿ ಸಂಚರಿಸುವಂತಾಗಬೇಕು ಎಂಬುದು ಜನರ ಆಗ್ರಹವಾಗಿದೆ.

ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಮೇಲಿನ ಬೀದಿ ದೀಪಗಳು ಬೆಳಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.