ADVERTISEMENT

ದಾವಣಗೆರೆ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮತಯಂತ್ರಗಳ ‍ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ದಾವಣಗೆರೆ ಮಹಾನಗರಪಾಲಿಕೆ ಚುನಾವಣೆಗೆ ಸೋಮವಾರ ಮಸ್ಟರಿಂಗ್ ಕೇಂದ್ರದಿಂದ ತೆರಳಿದ ಸಿಬ್ಬಂದಿ
ದಾವಣಗೆರೆ ಮಹಾನಗರಪಾಲಿಕೆ ಚುನಾವಣೆಗೆ ಸೋಮವಾರ ಮಸ್ಟರಿಂಗ್ ಕೇಂದ್ರದಿಂದ ತೆರಳಿದ ಸಿಬ್ಬಂದಿ   

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಲ್ಲಿನ ಡಿ.ಆರ್‌.ಆರ್ ಪ್ರೌಢಶಾಲೆಯಲ್ಲಿ ಸೋಮವಾರ ಮಸ್ಟರಿಂಗ್ ನಡೆದಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಎ.ಎಸ್‌ಪಿ ರಾಜೀವ್ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು.

ಬೆಳಿಗ್ಗೆ 8 ಗಂಟೆಗೆ ಮಸ್ಟರಿಂಗ್ ಕೇಂದ್ರಕ್ಕೆ ಬಂದ ಸಿಬ್ಬಂದಿ ಬೋರ್ಡ್‌ನಲ್ಲಿ ಸೂಚಿಸಿರುವ ಟೇಬಲ್ ಬಳಿಗೆ ಹೋದರು. ಮತಪೆಟ್ಟಿಗೆ ಹಾಗೂ ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ವಾಹನ ಹತ್ತಿದ್ದರು. ಭದ್ರತೆ ಕಲ್ಪಿಸಲೂ ಪೊಲೀಸರೂ ಅವರ ಜೊತೆ ವಾಹನವನ್ನೇರಿದರು.

ADVERTISEMENT

ಮತದಾನ ಕೇಂದ್ರಕ್ಕೆ ಹೋಗುವ ಮುನ್ನ ಮತ ಪೆಟ್ಟಿಗೆ ಹಾಗೂ ಕಂಟ್ರೋಲರ್ ಯುನಿಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸಿದರು. ಮತದಾನ ಸಾಮಗ್ರಿಗಳು ಬ್ಯಾಗ್‌ನಲ್ಲಿ ತುಂಬಿಕೊಡು ಮತದಾನ ಕೇಂದ್ರಕ್ಕೆ ತೆರಳಿದರು.

ಪ್ರತಿ ಬೂತ್‌ನಲ್ಲಿ ನಾಲ್ವರು ಸಿಬ್ಬಂದಿ

ಪಾಲಿಕೆ ಚುನಾವಣೆಯಲ್ಲಿ ಒಬ್ಬ ಪಿಆರ್‌ಒ (ಅಧ್ಯಕ್ಷಾಧಿಕಾರಿ) ಎಪಿಆರ್‌ಒ (ಸಹಾಯಕ ಅಧ್ಯಕ್ಷಾಧಿಕಾರಿ) ಹಾಗೂ ಇಬ್ಬರು ಮತಗಟ್ಟೆ ಅಧಿಕಾರಿ ಹಾಗೂ ಒಬ್ಬರು ಡಿ ಗ್ರೂಪ್ ನೌಕರರು ಸೇರಿ ಐದು ಸಿಬ್ಬಂದಿ ಪ್ರತಿ ಬೂತ್‌ನಲ್ಲಿ ಇರುವರು. ತರಬೇತಿ, ಮಸ್ಟರಿಂಗ್‌, ಹಾಗೂ ಚುನಾವಣೆ ಈ ಮೂರು ದಿವಸಗಳಿಗೆ ಒಂದು ಮತಗಟ್ಟೆಗೆ ₹4,900 ಗೌರವ ಧನ ನೀಡಲಿದ್ದು, ಚುನಾವಣಾ ದಿವಸದ ಉಪಾಹಾರ ಹಾಗೂ ಊಟದ ಭತ್ಯೆಯನ್ನು ಇದರಲ್ಲಿ ಸೇರಿಸಲಾಗಿದೆ.

9 ಕೌಂಟರ್‌: ಒಂದು ಕೌಂಟರ್‌ಗೆ 5 ವಾರ್ಡ್‌ಗಳಂತೆ 45 ವಾರ್ಡ್‌ಗಳಿಗೆ 9 ಕೌಂಟರ್‌ ತೆರೆಯಲಾಗಿತ್ತು. ವಾರ್ಡ್‌ಗೆ ಒಂದರಂತೆ ಟೇಬಲ್ ಅಳವಡಿಸಿದ್ದು, ಒಂದು ವಾರ್ಡ್‌ಗೆ 6ರಿಂದ 10 ಬೂತ್‌ಗಳವರೆಗೂ ಇದ್ದವು.

ಒಂದು ವೇಳೆ ಮತಯಂತ್ರ ಕೆಟ್ಟುಹೋದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಸಿಬ್ಬಂದಿಗೆ ಅನಾರೋಗ್ಯವಾದರೆ ಬದಲೀ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗುತ್ತದೆ.

ಚುನಾವಣೆಗೆ ಭದ್ರತೆ ಎಷ್ಟು

ಸೆಕ್ಟರ್ ಮೊಬೈಲ್ ಆಫೀಸರ್ 20

ಹೆಡ್‌ಕಾನ್‌ಸ್ಟೆಬಲ್ 107

ಕಾನ್‌ಸ್ಟೆಬಲ್ 407

ಹೋಮ್‌ಗಾರ್ಡ್ಸ್ 175

ಎಎಸ್‌ಐ 75

ಎಸ್‌ಐ 72

ಇನ್‌ಸ್ಪೆಕ್ಟರ್ 6

***

ಮತಗಟ್ಟೆಗಳು

ಅತಿಸೂಕ್ಷ್ಮ 28

ಸೂಕ್ಷ್ಮ 67

ಸಾಮಾನ್ಯ 282

ಒಟ್ಟು 377

***

ಪುರುಷರು 1,89,618

ಮಹಿಳೆಯರು 1,89,345

ಇತರೆ 65

ಒಟ್ಟು ಮತದಾರರು 3,79,028

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.