ADVERTISEMENT

ಊರಮ್ಮದೇವಿ ದೇಗುಲ ಉದ್ಘಾಟನೆ 30ಕ್ಕೆ

ಕಕ್ಕರಗೊಳ್ಳ ಗ್ರಾಮದಲ್ಲಿ ಮೂರು ದಿನ ಧಾರ್ಮಿಕ ಕೈಂಕರ್ಯ, ದೇಗುಲಗಳ ಕಳಸಾರೋಹ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:00 IST
Last Updated 27 ಏಪ್ರಿಲ್ 2025, 15:00 IST

ದಾವಣಗೆರೆ: ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಊರಮ್ಮದೇವಿ ದೇಗುಲದ ಲೋಕಾರ್ಪಣೆ ಹಾಗೂ ಆಂಜನೇಯಸ್ವಾಮಿ, ಅರಕೇರಮ್ಮ ದೇವಸ್ಥಾನದ ಕಳಸಾರೋಹಣ ಸಮಾರಂಭವನ್ನು ಏ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಹದಡಿ ಯಲ್ಲಪ್ಪ ತಿಳಿಸಿದರು.

‘ಏ.28ರಿಂದ ಧಾರ್ಮಿಕ ಕೈಂಕರ್ಯಗಳು ಆರಂಭವಾಗಲಿವೆ. ಗಂಗಾಪೂಜೆ, ಯಾಗ ಮಂಟಪದಿಂದ ದೇವಿ ಪ್ರವೇಶ ಮೊದಲ ದಿನ ನಡೆಯಲಿದೆ. ಏ.29ರಂದು ನವಗ್ರಹ ಆರಾಧನೆ, ವಾಸ್ತುಪೂಜೆ, ಹೋಮ, ದಿಕ್ಪಾಲಕರ ಪೂಜೆ ನೆರವೇರಲಿವೆ. ಅಂದು ರಾತ್ರಿ 9ಕ್ಕೆ ವಿವಿಧ ತಂಡಗಳು ಭಜನೆ ನಡೆಸಿಕೊಡಲಿವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಏ.30ರಂದು ನಸುಕಿನ 5.30ಕ್ಕೆ ದೇವಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಬೆಳಿಗ್ಗೆ 10.20ಕ್ಕೆ ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ಬೆಳಿಗ್ಗೆ 11ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ದೇಗುಲ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಸವ ಜಯಂತಿ ಹಾಗೂ ಸರ್ವ ಶರಣರ ಸಮ್ಮೇಳನವನ್ನು ಮೇ 1ರಂದು ಬೆಳಿಗ್ಗೆ 11ಕ್ಕೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಅಂಬಿಗರಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಮಡಿವಾಳ ಮಹಾಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಗ್ರಾಮದ ಮುಖಂಡರಾದ ಕೆ.ಜಿ.ಬಸವನಗೌಡ, ಆರ್‌.ಡಿ.ಕುಲಕರ್ಣಿ, ಮಹಾಂತೇಶಗೌಡ, ಎಂ.ನಾಗರಾಜ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.