ಪ್ರಾತಿನಿಧಿಕ ಚಿತ್ರ
ದಾವಣಗೆರೆ: ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದನ್ನು ವಿರೋಧಿಸಿ ಶನಿವಾರ ಕರೆ ನೀಡಿದ್ದ ‘ದಾವಣಗೆರೆ ಬಂದ್’ ವೇಳೆ ಕೆಲ ಪ್ರತಿಭಟನಕಾರರು ಕೈಯಲ್ಲಿ ಕಲ್ಲು ಹಿಡಿದು ಬಸ್, ಆಟೊ ಚಾಲಕರು ಹಾಗೂ ಅಂಗಡಿಗಳ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಬಿಜೆಪಿ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಬಂದ್‌ಗೆ ಕರೆ ನೀಡಲಾಗಿತ್ತು. ಮುಂಜಾನೆಯೇ ರಸ್ತೆಗಿಳಿದ ಬಿಜೆಪಿ ಮುಖಂಡರು ಪ್ರತಿಭಟನಾ ರ‍್ಯಾಲಿ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಒತ್ತಾಯಿಸಿದರು.
ಈ ವೇಳೆ ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಕೈಯಲ್ಲಿ ಕಲ್ಲು ಹಿಡಿದು ಬಸ್, ಆಟೊ ಚಾಲಕರು, ಹೋಟೆಲ್ ಮತ್ತು ಇನ್ನಿತರ ಅಂಗಡಿಗಳ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಿದರು.
‘ಮತ್ತೆ ರಸ್ತೆಗಳಲ್ಲಿ ಕಾಣಿಸಿಕೊಂಡರೆ ಕಲ್ಲೇಟು ಬೀಳುತ್ತೆ’ ಎಂದು ಹೆದರಿಸಿದರು. ದೊಡ್ಡ ಗಾತ್ರದ ಕಲ್ಲು ಹಿಡಿದು ಬೇಕರಿಯೊಂದರತ್ತ ನುಗ್ಗಿದರು. ಅವರ ಜೊತೆಗಿದ್ದವರು ಬೇಕರಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
‘ಬಂದ್ ವೇಳೆ ಬಿಜೆಪಿಯ ಕೆಲ ಮುಖಂಡರು ಕಲ್ಲು ಹಿಡಿದು ಹೆದರಿಸಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಗೊತ್ತಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ’ ಎಂದು ಎಸ್‌ಪಿ ಉಮಾ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.