ADVERTISEMENT

‘ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ’

ಆನಗೋಡಿನಲ್ಲಿ‌ ರೈತ ಹುತಾತ್ಮರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 7:56 IST
Last Updated 14 ಸೆಪ್ಟೆಂಬರ್ 2020, 7:56 IST
ಮಾಯಕೊಂಡ ಸಮೀಪದ ಆನಗೋಡಿನ ರೈತ ಹುತಾತ್ಮರ ಸ್ಮಾರಕಕ್ಕೆ ರೈತ ಮುಖಂಡರು ಭಾನುವಾರ ನಮನ‌ ಸಲ್ಲಿಸಿದರು
ಮಾಯಕೊಂಡ ಸಮೀಪದ ಆನಗೋಡಿನ ರೈತ ಹುತಾತ್ಮರ ಸ್ಮಾರಕಕ್ಕೆ ರೈತ ಮುಖಂಡರು ಭಾನುವಾರ ನಮನ‌ ಸಲ್ಲಿಸಿದರು   

ಮಾಯಕೊಂಡ:ಮೆಕ್ಕೆಜೋಳ, ಭತ್ತ ಸೇರಿ ಎಲ್ಲಾ‌ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಸ್ವಾಮಿನಾಥನ್ ವರದಿ‌ ಜಾರಿಗೊಳಿಸಿ ರೈತರ ಆತ್ಮಹತ್ಯೆ ತಡೆಯಬೇಕು ಎಂದುರೈತ ಮುಖಂಡ ಹೊನ್ನೂರು ಮುನಿಯಪ್ಪ ಒತ್ತಾಯಿಸಿದರು.

ಸಮೀಪದ ಆನಗೋಡಿನಲ್ಲಿ ಭಾನುವಾರ ನಡೆದ ರೈತ ಹುತಾತ್ಮರ ದಿನಾಚರಣೆ ಮತ್ತು ರೈತ ಹುತಾತ್ಮರ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೆಕ್ಕೆಜೋಳ ‌ಖರೀದಿ‌ ಕೇಂದ್ರ ಶೀಘ್ರ ತೆರೆಯಬೇಕು. ರೈತರ ಹಿತ ಕಾಪಾಡಲು ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ‌ಸದಸ್ಯ ಕೆ.ಎಸ್. ಬಸವಂತಪ್ಪ, ‘ರೈತ ಸಂಘಟನೆ ಛಿದ್ರವಾಗಿದ್ದರಿಂದ ಹೋರಾಟ ಮೊನಚು‌ ಕಳೆದುಕೊಂಡಿದೆ. ಎಲ್ಲಾ ಬಣಗಳು‌ ಒಗ್ಗಟ್ಟಾಗಿ ವೈಜ್ಞಾನಿಕ ಬೆಲೆ ದೊರಕಿಸಲು 1992ರ ಮಾದರಿಯಲ್ಲಿ ಹೋರಾಡಬೇಕಿದೆ’ ಎಂದು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸ ಗೌಡರ್, ‘ರೈತ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಡಳಿತ 37 ಗುಂಟೆ ಜಮೀನು ನೀಡಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತಡರೆಯಲು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಿದೆ’ ಎಂದರು.

ರೈತ ಹುತಾತ್ಮರ ಸ್ಮಾರಕ ‌ಸಮಿತಿ‌ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ‘ರೈತ ಸಂಘಟನೆಗಳ ಮನವಿಗೆ ಓಗೊಟ್ಟು ಹುತಾತ್ಮರ ಸಮಾಧಿಗೆ ಒಂದೇ ದಿನದಲ್ಲಿ 37 ಗುಂಟೆ ಜಾಗ ಮಂಜೂರು‌ ಮಾಡಲಾಗಿದೆ. ಹುತಾತ್ಮರ ಸ್ಮಾರಕ ರಾಜ್ಯದ ಐತಿಹಾಸಿಕ ಸ್ಥಳವಾಗಲಿದೆ. ರೈತ ಹೋರಾಟ ಪರ‌ ಚಟುವಟಿಕೆ ಕೇಂದ್ರವಾಗಲಿದೆ‌‌’ ಎಂದು ಹೇಳಿದರು.

ತಹಶೀಲ್ದಾರ್ ಗಿರೀಶ್, ‘ರೈತರಾಗಲು ಯಾರೂ ಇಷ್ಟಪಡದ, ರೈತರ ಮಕ್ಕಳಿಗೆ ಹೆಣ್ಣು ಕೊಡದ ದುಃಸ್ಥಿತಿ ಬಂದಿದೆ. ಅನ್ನವನ್ನು ವಿನಾ ಕಂಪನಿಗಳು ಉತ್ಪಾದಿಸಲಾರವು’ ಎಂದರು.

ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ‘ರೈತರುಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಂತ. ಮೋಜಿನ ಜೀವನ, ದುಂದುವೆಚ್ಚ ಕೈಬಿಟ್ಟು ಆರ್ಥಿಕವಾಗಿ ಸಬಲರಾಗಬೇಕಿದೆ‌‌’ ಎಂದು ಸಲಹೆ ನೀಡಿದರು.

ಆವರಗೊಳ್ಳ ಷಣ್ಮುಖಯ್ಯ, ಅರುಣ್ ಕುಮಾರ್, ಆನಗೋಡು‌ ನಂಜುಂಡಪ್ಪ, ಶಾಮನೂರು ಲಿಂಗರಾಜು, ಹೆದ್ನೆ ಮುರುಗೇಂದ್ರಪ್ಪ, ಅಥಣಿ‌‌ ವೀರಣ್ಣ, ಹೊನ್ನಾನಾಯ್ಕನಹಳ್ಳಿ ಮುರುಗೇಶಣ್ಣ, ಆವರಗೆರೆ ರುದ್ರಮುನಿ, ಚಿನ್ನಸಮುದ್ರ ಶೇಖರ ನಾಯ್ಕ, ಆರ್.ಜಿ.ಹಳ್ಳಿ ಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.