ADVERTISEMENT

ಜೈಲು ಹಕ್ಕಿಗಳಲ್ಲೂ ಕೊರೊನಾ ಭೀತಿ: ಹೊಸ ಕೈದಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ನಿಗಾ

ವಿನಾಯಕ ಭಟ್ಟ‌
Published 26 ಮಾರ್ಚ್ 2020, 19:30 IST
Last Updated 26 ಮಾರ್ಚ್ 2020, 19:30 IST
   

daದಾವಣಗೆರೆ: ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳಿಗೂ ಕೊರೊನಾ ಸೋಂಕು ಹರಡುವ ಭೀತಿ ಕಾಡಿದ್ದರಿಂದ ಸಾರ್ವಜನಿಕರ ಭೇಟಿ ಹಾಗೂ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಕಾರಾಗೃಹದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದರೂಒಟ್ಟಿಗೆ ಇರುವ ಕೈದಿಗಳನ್ನು ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಅಧಿಕಾರಿಗಳ ಪಾಲಿಗೆ ಸವಾಲಿನ ಕೆಲಸವಾಗಿದೆ. ಸದ್ಯ ಇಲ್ಲಿ 181 ಕೈದಿಗಳಿದ್ದು, ಇವರ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ.

ಸಾರ್ವಜನಿಕರ ಭೇಟಿ ರದ್ದು

ADVERTISEMENT

‘ವಾರಕ್ಕೆ ಒಂದು ಬಾರಿ ಕೈದಿಗಳಿಗೆ ಸಂಬಂಧಿಕರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿದ್ದೆವು. ದಿನಾಲೂ ಬೆಳಿಗ್ಗೆ ಹಾಗೂ ಸಂಜೆ ನಿಗದಿತ ಸಮಯದಲ್ಲಿ ಸಂಬಂಧಿಕರು ಕೈದಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ 15 ದಿನಗಳ ಹಿಂದೆಯೇ ಜೈಲಿಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಿದ್ದೇವೆ’ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಕರ್ಣ ಬಿ. ಕ್ಷತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗ ಕೈದಿಗಳಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಎರಡು ವಾರಗಳ ಹಿಂದೆಯೇ ಕೈದಿಗಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ನಿಲ್ಲಿಸಿದ್ದೇವೆ. ತೀರಾ ಪ್ರಮುಖ ಪ್ರಕರಣಗಳನ್ನು ಮಾತ್ರ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರತ್ಯೇಕ ಕೊಠಡಿ

‘ಜೈಲಿಗೆ ಸಾಮಾನ್ಯವಾಗಿ ದಿನಾಲೂ ಮೂರು–ನಾಲ್ಕು ಕೈದಿಗಳು ಹೊಸದಾಗಿ ಬರುತ್ತಾರೆ. ಇವರಲ್ಲಿ ಕೊರೊನಾ ಸೋಂಕು ಇದ್ದರೆ ಉಳಿದ ಕೈದಿಗಳಿಗೂ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪ್ರತ್ಯೇಕ ಕೊಠಡಿಯಲ್ಲಿ ಇವರನ್ನು ಉಳಿಸಿಕೊಳ್ಳಲಾಗುತ್ತಿದೆ. ನಾಲ್ಕೈದು ದಿನಗಳ ಕಾಲ ಇವರನ್ನು ಪ್ರತ್ಯೇಕವಾಗಿಟ್ಟುಕೊಂಡು ನಿಗಾ ವಹಿಸಲಾಗುತ್ತಿದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಉಳಿದವರ ಜೊತೆಗೆ ಸೇರಲು ಬಿಡುತ್ತೇವೆ’ ಎಂದು ಕರ್ಣ ಮಾಹಿತಿ ನೀಡಿದರು.

‘ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳು ತಯಾರಿಸಿದ ತೊಳೆದು ಬಳಸಬಹುದಾದ ಬಟ್ಟೆಯ ಮಾಸ್ಕ್‌ಗಳನ್ನು ತರಿಸಿ ನಮ್ಮಲ್ಲಿನ ಎಲ್ಲಾ ಕೈದಿಗಳಿಗೆ ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಜೈಲಿನ ಪ್ರವೇಶ ದ್ವಾರದಲ್ಲೇ ನೀರು ಹಾಗೂ ಸೋಪನ್ನು ಇಡಲಾಗಿದೆ. ಕೈದಿಗಳು ಹಾಗೂ ಸಿಬ್ಬಂದಿ ಬಂದ ಕೂಡಲೇ ಕೈ–ಕಾಲು, ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡ ಬಳಿಕವೇ ಜೈಲಿನ ಒಳಗೆ ಪ್ರವೇಶಿಸಲಾಗುತ್ತಿದೆ. ಜೈಲಿನ ಒಳಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

‘ಕಾರಾಗೃಹಕ್ಕೆ ಬರುತ್ತಿದ್ದ ಸಂಬಂಧಿಕರು ಕೈದಿಗಳಿಗೆ ಬ್ರೆಡ್‌, ಹಣ್ಣು ಸೇರಿ ತಿನಿಸುಗಳನ್ನು ತರುತ್ತಿದ್ದರು. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಎಂಬ ಮಾಹಿತಿ ತಿಳಿದು ಕೈದಿಗಳೂ ನೆಮ್ಮದಿಯಿಂದ ಇರುತ್ತಿದ್ದರು. 15 ದಿನಗಳಿಂದ ಕುಟುಂಬದವರ ಮಾಹಿತಿ ಸಿಗದಿರುವುದರಿಂದ ಚಿಂತೆಗೀಡಾಗಿದ್ದಾರೆ. ಕೊನೆ ಪಕ್ಷ ಫೋನಿನಲ್ಲಾದರೂ ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೈದಿಗಳು ಮನವಿ ಮಾಡುತ್ತಿದ್ದಾರೆ’ ಎಂದು ಹೇಳಿದರು.

ವೈದ್ಯರ ನಿಯೋಜನೆಗೆ ಮನವಿ

‘ಹೃದಯ, ಚರ್ಮ ಸೇರಿ ಕೆಲವು ಕಾಯಿಲೆಗಳಿಗೆ ರೋಗಿಗಳನ್ನು ನಿಯಮಿತವಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜೈಲಿಗೇ ಬಂದು ತಪಾಸಣೆ ಮಾಡಲು ವೈದ್ಯರನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ’ ಎಂದು ಕಾರಾಗೃಹದ ಅಧೀಕ್ಷಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.