ADVERTISEMENT

ಪರಿಶಿಷ್ಟರ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ: ಸಿದ್ದರಾಮಯ್ಯ ಭರವಸೆ

ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 7:54 IST
Last Updated 10 ಫೆಬ್ರುವರಿ 2024, 7:54 IST
<div class="paragraphs"><p>ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಜನ ಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರತ್ತ ಕೈಮುಗಿದರು</p></div>

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಜನ ಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರತ್ತ ಕೈಮುಗಿದರು

   

ಹರಿಹರ(ದಾವಣಗೆರೆ): ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ರಾಜ್ಯದಲ್ಲಿನ ಸೂಕ್ತ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ತೀರ್ಮಾನ ಮಾಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಆಯೋಜಿಸಿದ್ದ ಮಠದ 26ನೇ ವಾರ್ಷಿಕೋತ್ಸವ ಮತ್ತು ಪುಣ್ಯಾನಂದ ಸ್ವಾಮೀಜಿಯವರ 17ನೇ ಪುಣ್ಯಸ್ಮರಣೆ, ಪ್ರಸನ್ನಾನಂದ ಸ್ವಾಮೀಜಿಯವರ 16ನೇ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ನಡೆದ ಮಹರ್ಷಿ ವಾಲ್ಮೀಕಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ADVERTISEMENT

‘ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಮೀಸಲಾತಿ ಹೆಚ್ಚಳಕ್ಕೆ ಜನಸಂಖ್ಯೆಗನುಗುಣವಾಗಿ ಶಿಫಾರಸು ಮಾಡಿದ ವರದಿಯನ್ವಯ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಾಲು ಸಿಗಬೇಕು ಎಂಬುದರಲ್ಲಿ ಬದ್ಧತೆ ಇದೆ. ಮೀಸಲಾತಿ ಜನರ ಹಕ್ಕು, ಇದು ಭಿಕ್ಷೆಯಲ್ಲ. ಬರೀ ಭಾಷಣದಿಂದ ಸಮಾನತೆ ಬರುವುದಿಲ್ಲ’ ಎಂದರು.

‘2013ರಲ್ಲಿ ಪರಿಶಿಷ್ಟರ ಕಾನೂನು ಜಾರಿಗೆ ತಂದಿದ್ದರಿಂದ ಅನುದಾನದಲ್ಲಿ ಇವರಿಗಾಗಿ ಶೇ 24.1 ರಷ್ಟು ಅನುದಾನವನ್ನು ಮೀಸಲಿರಿಸಿ ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಕೇಂದ್ರವೂ ಸರ್ಕಾರವು ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಕಾಯ್ದೆ ಜಾರಿಗೆ ತಂದು ಅನುದಾನ ಮೀಸಲಿರಿಸಿ ಇವರ ಅಭಿವೃದ್ದಿಗೆ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ’ ಎಂದರು.

‘ರಾಮಾಯಣ, ಮಹಾಭಾರತ, ವಚನ ಸಾಹಿತ್ಯ ಇವು ವರ್ಗ ರಹಿತ, ಜಾತಿ ರಹಿತವಾದ ಸಮಾಜ ರಾಮರಾಜ್ಯ ಅಂದಿನ ಕಾಲದಲ್ಲಿಯೇ ಇತ್ತು. ನಾವೆಲ್ಲರೂ ಮನುಷ್ಯರು ನಮ್ಮಲ್ಲಿ ಭೇದಭಾವ ಬರಬಾರದು, ಪರಸ್ಪರ ಪ್ರೀತಿಯಿಂದ ಬದುಕಬೇಕು. ಧರ್ಮ ನಮಗೋಸ್ಕರ ಇರುವುದು, ಧರ್ಮಕ್ಕೋಸ್ಕರ ಇರುವುದಿಲ್ಲ. ಅಸಮಾನತೆ, ಭಿನ್ನ ಭಾವಗಳಿರಬಾರದು. ಪಟ್ಟಭದ್ರ ಹಿತಾಸಕ್ತಿ ಜಾತಿಯನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟುವ ಕೆಲಸವಾಗಬಾರದು’ ಎಂದು ತಿಳಿಸಿದರು.

‘ಸಂವಿಧಾನದ ಎಲ್ಲಾ ಧ್ಯೇಯೋದ್ದೇಶಗಳನ್ನು ಜಾರಿಗೆ ತರುವುದೇ ಸರ್ಕಾರದ ಉದ್ದೇಶ. ಎಲ್ಲ ಜನರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬಂದಾಗ ಸಮಸಮಾಜದ ನಿರ್ಮಾಣ ಸಾಧ್ಯ. ವಿದ್ಯೆ ಯಾರ ಸ್ವತ್ತಲ್ಲ, ವಿದ್ಯೆ ಕಲಿತು ಬುದ್ದಿವಂತಿಕೆ ಹಾಗೂ ಸ್ವಾಭಿಮಾನದಿಂದ ಮನುಷ್ಯರಾಗಿ ಎಲ್ಲರಂತೆ ಸಮಾನರಾಗಿ ಬದುಕಬೇಕು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಾಲ್ಮೀಕಿ ಸಮುದಾಯ ದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯವಾಗಿದೆ. ರಾಜ್ಯ ಮತ್ತು ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಪಂಜಾಬ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆ ಇದೆ. ಆದರೂ ಸಹ ಈ ಸಮುದಾಯ ಹಿಂದಿದೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಈ ಹಿಂದೆ ಸಚಿವನಾದಾಗ ಮೀಸಲಾತಿ ಹೆಚ್ಚಳಕ್ಕೆ ಪ್ರತಿಭಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸಿ ಹೆಚ್ಚಳದ ಭರವಸೆ ನೀಡಿದ್ದೆ ಎಂದರು.

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸವನಗೌಡ ತುರುವಿನಾಳ್, ಶಾಸಕರಾದ ಲತಾ ಮಲ್ಲಿಕಾರ್ಜುನ್, ಕೆ.ಎಸ್. ಬಸವಂತಪ್ಪ, ಎನ್.ವೈ.ಗೋಪಾಲಕೃಷ್ಣ, ಜೆ.ಎನ್.ಗಣೇಶ್, ಎನ್.ಟಿ.ಶ್ರೀನಿವಾಸ್, ಬಸವನಗೌಡ ದದ್ದಲ್ ಇದ್ದರು.

ಆಂಧ್ರದ ಕೇಂದ್ರೀಯ ಬುಡಕಟ್ಟು ವಿ.ವಿ.ಕುಲಪತಿ ನಾಡೋಜ ಪ್ರೊ.ತೇಜಸ್ವಿ ಕಟ್ಟಿಮನಿ ಅವರಿಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿ ಮತ್ತು ಸಾಹಿತಿ ಬಿ.ಎಲ್.ವೇಣು ಅವರಿಗೆ ‘ಮದಕರಿನಾಯಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜನ ಜಾಗೃತಿ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ವಾಲ್ಮೀಕಿ ಜಾತ್ರೆಯಲ್ಲಿ ಸಾಹಿತಿ ಬಿ.ಎಲ್ ವೇಣು ಅವರಿಗೆ ‘ಮದಕರಿ ನಾಯಕ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಮಾಜಿ ಸಚಿವ ರೇಣುಕಾಚಾರ್ಯ ರಾಜು ಗೌಡ ಶಾಸಕ ಬಿ.‍ಪಿ. ಹರೀಶ್ ಹಾಗೂ ಇತರ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಆಂದ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಅವರಿಗೆ ‘ವಾಲ್ಮೀಕಿ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

Cut-off box - ‘ತಾಯಿ ಸ್ಥಾನದಲ್ಲಿ ವಾಲ್ಮೀಕಿ ಸಮಾಜ’ ‘ವಾಲ್ಮೀಕಿ ಜನಾಂಗ ಹಾಗೂ ನಮ್ಮ ಜನಾಂಗದ ನಡುವೆ ಯುಗಯುಗಳ ಸಂಬಂಧವಿದೆ. ಎಲ್ಲಾ ಯುಗಗಳಲ್ಲೂ ವಾಲ್ಮೀಕಿ ಸಮಾಜ ನಮ್ಮ ಸಮಾಜಕ್ಕೆ ತಾಯಿಯ ಸ್ಥಾನದಲ್ಲಿ ಇರುತ್ತಾರೆ. ಯಾವುದೇ ಹಳ್ಳಿಯಲ್ಲಿ ಗಲಾಟೆಯಾದರೂ ನಮ್ಮನ್ನು ಮೊದಲು ರಕ್ಷಣೆ ಮಾಡುವವರು ವಾಲ್ಮೀಕಿ ಸಮಾಜದವರು’ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು. ‘ರಾಮನ ಬಗ್ಗೆ ಮಾತನಾಡುವ ಬಿಜೆಪಿಯವರು ಎಷ್ಟು ಜನ ವಾಲ್ಮೀಕಿ ರಾಮಾಯಣವನ್ನು ಪಠನೆ ಮಾಡ್ತಾರೆ. ನಾನು ವರ್ಷಕ್ಕೆ ಎರಡು ಬಾರಿ ವಾಲ್ಮೀಕಿ ರಾಮಾಯಣ ಪಠಿಸುತ್ತಾರೆ. ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ. ನಾವೆಲ್ಲಾ ರಾಮ ಭಕ್ತರೇ. ನಾವು ರಾಮನನ್ನೂ ಪೂಜೆ ಮಾಡುತ್ತೇವೆ. ನಾವು ರಾಮ ರಹೀಮ ಒಂದೇ ಎಂದು ಕೊಂಡು ಜೀವನ ನಡೆಸುತ್ತಿದ್ದೇವೆ’ ಎಂದು ಹೇಳಿದರು.

Cut-off box - ಶ್ರೀರಾಮ ದೇಗುಲಗಳ ಜೀರ್ಣೋದ್ಧಾರ ‘ರಾಜ್ಯದಲ್ಲಿ ಶಿಥಿಲಗೊಂಡಿರುವ ಶ್ರೀರಾಮನ ದೇವಾಲಯಗಳನ್ನು ಕರ್ನಾಟಕ ಸರ್ಕಾರದಿಂದ ಜೀರ್ಣೋದ್ಧಾರ ಮಾಡಿ. ಅಯೋಧ್ಯೆಯಲ್ಲಿ ನಿರ್ಮಿಸಿರುವ ಮೋದಿ ರಾಮನ ವಿರುದ್ಧವಾಗಿ ನಾವು ದಶರಥ ರಾಮನ ದೇವಾಲಯಗಳ ಪುನರುಜ್ಜೀವನ ಮಾಡೋಣ ಎಂದು ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು. ‘ಸಂಬಂಧ ಇಲ್ಲದವರು ಶ್ರೀರಾಮನ ಹೆಸರಿನಲ್ಲಿ ಏನೇನೋ ಮಾಡುತ್ತಿದ್ದಾರೆ. ಯಾರು ಏನೇ ಟೀಕೆ ಮಾಡಲಿ ಈ ಬಾರಿಯ ಬಜೆಟ್‌ನಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಘೋಷಣೆ ಮಾಡಬೇಕು’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.