ADVERTISEMENT

ಪಾದಯಾತ್ರೆ ಮೂಲಕ ಭರವಸೆ ರಾಜಕಾರಣ:

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 5:26 IST
Last Updated 30 ನವೆಂಬರ್ 2020, 5:26 IST
ಹರಪನಹಳ್ಳಿಗೆ ಆಗಮಿಸಿದ ಮಹಿಮ ಜೆ. ಪಟೇಲ್ ತಂಡವನ್ನು ವಿವಿಧ ಪಕ್ಷದ ಮುಖಂಡರು ಸ್ವಾಗತಿಸಿದರು.
ಹರಪನಹಳ್ಳಿಗೆ ಆಗಮಿಸಿದ ಮಹಿಮ ಜೆ. ಪಟೇಲ್ ತಂಡವನ್ನು ವಿವಿಧ ಪಕ್ಷದ ಮುಖಂಡರು ಸ್ವಾಗತಿಸಿದರು.   

ಹರಪನಹಳ್ಳಿ: ಸಮಾಜವಾದಿ, ಜಾತ್ಯಾತೀತ ತತ್ವಗಳಡಿ ಆರಂಭ ವಾಗಿರುವ ಪಾದಯಾತ್ರೆಯ ಮೂಲಕ ಜಿಗುಪ್ಸೆ ರಾಜಕಾರಣದ ಬದಲಿಗೆ, ಭರವಸೆ ರಾಜಕಾರಣ ಉದ್ದೇಶ ಹೊಂದಿದ್ದೇವೆ ಎಂದು ಜೆ.ಎಚ್. ಪಟೇಲ್ ಫೌಂಡೇಷನ್‍ ವ್ಯವಸ್ಥಾಪಕ ಟ್ರಸ್ಟಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ. ಪಟೇಲ್ ತಿಳಿಸಿದರು.

ಕಾರಿಗನೂರಿನಿಂದ ಕೂಡಲ ಸಂಗಮಕ್ಕೆ ಹಮ್ಮಿಕೊಂಡಿರುವ ಕರ್ನಾಟಕ ಕಲ್ಯಾಣ ಪಾದಯಾತ್ರೆ ವೇಳೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಕ್ರಿಯ ರಾಜಕಾರಣದಲ್ಲಿ ಚುನಾವಣೆಗಳು ದುಬಾರಿ ಆಗಿವೆ. ಸರಳ, ಪಾರದರ್ಶಕ ಚುನಾವಣೆಗಳು ನಡೆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹತ್ವ ಬರುತ್ತದೆ. ರಾತ್ರೋ ರಾತ್ರಿ ನೋಟು ಬದಲಾಯಿಸುವ ಭ್ರಷ್ಟ ವ್ಯವಸ್ಥೆಯ ಬಗ್ಗೆ ಜನರಿಗೆ ಅರಿವು ಬರಬೇಕು. ಸರ್ಕಾರಗಳ ಮೇಲೆ ಭರವಸೆ ಕಳೆದುಕೊಂಡಿರುವ ಜನರಿಗೆ ಪಾದಯಾತ್ರೆ ಒಂದು ಉತ್ತಮ ಸಂದೇಶ ನೀಡುತ್ತದೆ ಎನ್ನುವ ವಿಶ್ವಾಸ ನನಗಿದೆ’ ಎಂದು ತಿಳಿಸಿದರು.

ADVERTISEMENT

‘ಅರ್ಜೆಂಟ್‍ ಶಾಸಕನಾಗಬೇಕು, ಅಧಿಕಾರ ಎನ್ನುವ ಅರ್ಜೆಂಟ್ ಪದ ಕೈಬಿಟ್ಟು, ಸಮ ಸಮಾಜದ ನಿರ್ಮಾಣ ಪರಿಕಲ್ಪನೆ ಬೀಜ ಬಿತ್ತುತ್ತಿದ್ದೇವೆ. ರಾಜಕಾರಣ ಒಂದು ಸೇವೆ ಎಂದು ಭಾವಿಸುವವರ ಅಗತ್ಯವಿದೆ’ ಎಂದರು.
‘ಇದೇ ಮನಃಸ್ಥಿತಿ ಇರುವವರು ನಮ್ಮ ಜೊತೆಗೆ ಬರುವಂತೆ ಆಹ್ವಾನ ಕೊಡುತ್ತಿದ್ದೇವೆ ಅಷ್ಟೆ. ಹೊಸ ಪಕ್ಷ ಕಟ್ಟುವ ಆಲೋಚನೆ ಸದ್ಯಕ್ಕಿಲ್ಲ, ಆದರೆ ಹೊಸತನ ತರಬೇಕು ಎನ್ನುವುದು ನಮ್ಮ ಉದ್ದೇಶಗಳಲ್ಲಿ ಒಂದು’ ಎಂದು ಹೇಳಿದರು.

ನಾಲ್ಕನೇ ಹಂತದ ಪಾದಯಾತ್ರೆ ಕೂಡಲಸಂಗಮದಿಂದ ಬಸವ ಕಲ್ಯಾಣಕ್ಕೆ ತೆರಳುತ್ತದೆ. ಐದನೇ ಹಂತದ ಪಾದಯಾತ್ರೆ ಮಾರ್ಗ ಇನ್ನೂ ನಿಗದಿಯಾಗಿಲ್ಲ ಎಂದರು.

ಪಾದಯಾತ್ರೆಗೆ ಬಂದ ಮಹಿಮ ಜೆ.ಪಟೇಲ್‍ ಅವರ ತಂಡವನ್ನು ಮುಖಂಡರಾದ ಎಂ.ಪಿ. ವೀಣಾ ಮಹಾಂತೇಶ್, ಮತ್ತಿಹಳ್ಳಿ ಅಜ್ಜಣ್ಣ, ಪಟೇಲ್ ಬೆಟ್ಟನಗೌಡ, ಶಶಿಧರ ಪೂಜಾರ್, ಎಂ.ಟಿ.ಬಸವನಗೌಡ, ಸದ್ಯೋಜಾತಯ್ಯ, ಡಾ.ಮಲ್ಕಪ್ಪ ಅಧಿಕಾರ್, ನಂದೀಶ್, ಚಂದ್ರು, ಪುರಸಭೆ ಮಾಜಿ ಅಧ್ಯಕ್ಷೆ ಪ್ರಭಾವತಿ ಅವರು ಸ್ವಾಗತಿಸಿದರು. ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಕೈಗಾರಿಕೋದ್ಯಮಿ ಧನಂಜಯ, ದೀಪಕ್ ಅವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.