ADVERTISEMENT

ಪೊಲೀಸರ ಕಿರುಕುಳ ಆರೋಪ: ಸಂತೇಬೆನ್ನೂರು ಠಾಣೆಗೆ ಮುತ್ತಿಗೆ

ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:04 IST
Last Updated 2 ನವೆಂಬರ್ 2025, 7:04 IST
ಪೊಲೀಸರ ಹಿಂಸೆಗೆ ಬೇಸತ್ತು ಯುವಕನ ಆತ್ಮಹತ್ಯೆ ಯತ್ನಿಸಿದ್ದು ನ್ಯಾಯಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ಸಂತೇಬೆನ್ನೂರು ಪೊಲೀಸ್ ಠಾಣೆಗೆ ಶನಿವಾರ ಮುತ್ತಿಗೆ ಹಾಕಿದರು
ಪೊಲೀಸರ ಹಿಂಸೆಗೆ ಬೇಸತ್ತು ಯುವಕನ ಆತ್ಮಹತ್ಯೆ ಯತ್ನಿಸಿದ್ದು ನ್ಯಾಯಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ಸಂತೇಬೆನ್ನೂರು ಪೊಲೀಸ್ ಠಾಣೆಗೆ ಶನಿವಾರ ಮುತ್ತಿಗೆ ಹಾಕಿದರು   

ಸಂತೇಬೆನ್ನೂರು: ಸಮೀಪದ ಚಿಕ್ಕಬೆನ್ನೂರು ಗ್ರಾಮದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಪೊಲೀಸರ ಕಿರುಕುಳ ನೀಡಿದ್ದೇ ಯುವಕ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ಆರೋಪಿಸಿ ಯುವಕನ ಸಂಬಂಧಿಗಳು ಮತ್ತು ಸಮುದಾಯದ ಮುಖಂಡರು ಸಂತೇಬೆನ್ನೂರು ಪೊಲೀಸ್‌ ಠಾಣೆಗೆ ಶನಿವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಗ್ರಾಮದ ಯುವಕ ಕಿರಣ್ (25) ಎಂಬವನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದ ಪೊಲೀಸರು, ಮೂರು ದಿನಗಳ ನಂತರ ಮತ್ತೆ ವಿಚಾರಣೆಗೆ ಬರಬೇಕೆಂದು ಸೂಚಿಸಿದ್ದರು. ಆದರೆ, ವಿನಾಕಾರಣ ಕಿರುಕುಳ ನೀಡಿದ್ದರಿಂದ ಶುಕ್ರವಾರ ಸಂಜೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಪೊಲೀಸ್‌ ಠಾಣೆಯಿಂದ ಮನೆಗೆ ಮರಳಿದ ಯುವಕ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದರಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

‘ಯುವಕನನ್ನು ವಿಚಾರಣೆಗೆ ಒಳಪಡಿಸಿ, ಮನೆಗೆ ಕಳುಹಿಸಲಾಗಿತ್ತು. ತಂದೆ, ತಾಯಿ, ಪತ್ನಿ ಪೊಲೀಸರು ಕಿರುಕುಳ ನೀಡಿದ್ದಾರೆಡ ಎಂದು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಎಎಸ್‌ಪಿ ಸ್ಯಾಮ್ ವರ್ಗೀಸ್ ತಿಳಿಸಿದ್ದಾರೆ.

‘ನ. 27ರಂದು ಕಿರಣ್‌ನನ್ನು ಪೊಲೀಸರು ವಿಚಾರಣೆಗೆ ಚನ್ನಗಿರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾತ್ರಿಯಿಡೀ ವಿಚಾರಿಸಿ ಹೊಡೆದಿದ್ದಾರೆ. ಮಾರನೇ ದಿನವೂ ಮತ್ತೆ ಕರೆಯಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದರೂ ಬಿಡದೆ ಕಿರುಕುಳ ನೀಡಲಾಗಿದೆ. ನ.29ರಂದೂ ಹಿಂಸೆ ನೀಡಲಾಗಿದೆ. ಇದರಿಂದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಪತ್ನಿ ಸಿಂಧು ದೂರು ನೀಡಿದ್ದಾರೆ.

ಕೊರಚ ಸಮಾಜದ ಕಾರ್ಯಾಧ್ಯಕ್ಷ ಸಿದ್ದೇಶ್ ಮಾದಾಪುರ, ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ್, ಸಂತೋಷ್, ಕೆಂಚಪ್ಪ, ಕೆ.ಬಿ. ದೇವೇಂದ್ರಪ್ಪ, ಪ್ರಕಾಶ್ ನಿಗಾಡಿ, ಚಂದ್ರಪ್ಪ, ಅಜ್ಜಯ್ಯ, ಮಂಜುನಾಥ್ ಮತ್ತಿತರರು ಪೊಲೀಸ್‌ ಠಾಣೆ ಎದುರು ಇದ್ದರು.

ಕಿರಣ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.