ADVERTISEMENT

ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 13:12 IST
Last Updated 10 ಆಗಸ್ಟ್ 2020, 13:12 IST
ರಾಜ್ಯದಲ್ಲಿ ಶಿವಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. –ಪ್ರಜಾವಾಣಿ ಚಿತ್ರ
ರಾಜ್ಯದಲ್ಲಿ ಶಿವಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಬೆಳಗಾವಿ ಜಿಲ್ಲೆಯ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ನೆಪದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡಿಗರ ಮೇಲೆ ನಡೆಸಿದ ಪುಂಡಾಟ ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಉಪವಿಭಾಗಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ‘ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಿದ ನಾಡದ್ರೋಹಿ ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರ ಮೂಲಕ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.

ADVERTISEMENT

ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ್ ಮಾತನಾಡಿ, ‘ಕನ್ನಡಿಗರ ಸ್ವಾಭಿಮಾನದ ನೆಲ ಬೆಳಗಾವಿಯಲ್ಲಿ ಶಿವಸೇನೆಯವರು ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಗಡಿ ವಿವಾದದ ಹೆಸರಿನಲ್ಲಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ನಿರಂತರ ದೌರ್ಜನ್ಯ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

‘ಮರಾಠರ ಮತಗಳಿಗಾಗಿ ಬೆಳಗಾವಿಯ ಕೆಲವು ರಾಜಕಾರಣಿಗಳು ಎಂಇಎಸ್ ಮತ್ತು ಶಿವಸೇನೆಗೆ ಬೆಂಬಲಿಸಿ, ಅವರ ಪುಂಡಾಟಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡುವ ನಾಡದ್ರೋಹ ಕೆಲಸ ನಡೆಸುತ್ತಿದ್ದಾರೆ. ಈ ಸಂಘಟನೆಗಳು ಭಯೋತ್ಪಾದಕರಂತೆ ವರ್ತಿಸಿದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇರ್ ಅಲಿ, ಸಂಘಟನಾ ಕಾರ್ಯದರ್ಶಿ ಅಶ್ಫಕ್ ಅಲಿ, ಕಾರ್ಯದರ್ಶಿ ಅಯಾಜ್ ಖಾನ್, ಸದಸ್ಯ ಪ್ರಸನ್ನ, ಚಮನ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.