ADVERTISEMENT

ನ್ಯಾಮತಿ: ಹೆದ್ದಾರಿ ತಡೆ; ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:34 IST
Last Updated 3 ಆಗಸ್ಟ್ 2025, 6:34 IST
ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು
ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು   

ನ್ಯಾಮತಿ: ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹೊನ್ನಾಳಿ-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ತಡೆದು ಶನಿವಾರ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ರಸ್ತೆಯಲ್ಲಿ ಟೈರ್‌ ಸುಟ್ಟು ಧರಣಿ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಾಜ್ಯದೆಲ್ಲೆಡೆ ರಸ್ತೆಗಳು ಗುಂಡಿ ಬಿದ್ದು ಸಂಪೂರ್ಣ ಹಾಳಾಗಿವೆ. ಹರಿಹರದಿಂದ ಹೊನ್ನಾಳಿ ಮೂಲಕ ಶಿವಮೊಗ್ಗ ನಗರಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ  ಅಡಿಗೊಂದರಂತೆ ಗುಂಡಿಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗುಂಡಿಗಳಿದ್ದಾಗಿ, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ವ್ಯಾಪ್ತಿಯ ರಸ್ತೆಗಳಲ್ಲಿ ಅಪಘಾತಗಳು ನಡೆಯುತ್ತಿವೆ ಎಂದು ಆರೋಪಿಸಿದರು.

‘ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನೀರಾವರಿ ನಿಗಮಕ್ಕೆ ಕೊಡಬೇಕಿರುವ ₹6,500 ಕೋಟಿ ರೂ. ಬಾಕಿ ಇದೆ. ಉಳಿದ ನಿಗಮಗಳಿಗೆ 30,000 ಕೋಟಿ ಬಾಕಿ ಇಟ್ಟುಕೊಂಡಿದೆ. ಗ್ಯಾರಂಟಿ ಯೋಜನೆಗಳಿಗೂ ಹಣ ನೀಡಲಾಗದೇ ಸರ್ಕಾರ ದಿವಾಳಿಯಾಗಿದೆ’ ಎಂದು ದೂರಿದರು. 

ADVERTISEMENT

ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ₹20 ಕೋಟಿ ಅನುದಾನದ ಭದ್ರಾ ನಾಲಾ ದುರಸ್ತಿ ಕಾಮಗಾರಿಗೆ ಮೂರು ಬಾರಿ ಟೆಂಡರ್ ಕರೆದಿರುವುದು ಇದಕ್ಕೆ ನಿದರ್ಶನ. ಬಿಜೆಪಿ ಸರ್ಕಾರ ಅವಧಿಯಲ್ಲಿ ಮಂಜೂರಾಗಿದ್ದ ಏತ ನೀರಾವರಿ ಯೋಜನೆ ಸೇರಿದಂತೆ ಇತರ ಕಾಮಗಾರಿಗಳನ್ನೇ ಮುಂದುವರಿಸಲಾಗಿದ್ದು, ಹಣದ ಕೊರತೆ ಕಾರಣಕ್ಕೆ ಸರ್ಕಾರ ಯಾವುದೇ ಹೊಸ ಕಾಮಗಾರಿಯನ್ನು ಮಾಡುತ್ತಿಲ್ಲ ಎಂದರು.  

ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆಗೊಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ್, ಮುಖಂಡರಾದ ಜೆ.ಕೆ.ಸುರೇಶ್, ಕೆ.ಪಿ.ಕುಬೇಂದ್ರಪ್ಪ, ಶಿವು ಹುಡೇದ್, ಅಜಯ್, ಗಿರೀಶ್ ಚನ್ನಯ್ಯ, ಅನಿಲ್‌ ಕುಮಾರ್, ಎಸ್.ಎಸ್.ಬೀರಪ್ಪ ಹಾಗೂ ಕಾರ್ಯಕರ್ತರು ಇದ್ದರು.

ನ್ಯಾಮತಿ ಸಮೀಪದ ಚೀಲೂರಿನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು

- ‘ಗೊಬ್ಬರದ ಕೃತಕ ಅಭಾವ ಸೃಷ್ಟಿ’

‘ಕೇಂದ್ರ ಸರ್ಕಾರ ರಾಜ್ಯಕ್ಕೆ 8.73 ಲಕ್ಷ ಟನ್ ಯೂರಿಯಾ ಸರಬರಾಜು ಮಾಡಿದೆ. ರಾಜ್ಯ ಸರ್ಕಾರ 7.8 ಲಕ್ಷ ಟನ್ ಖರ್ಚು ತೋರಿಸಿದೆ. ಉಳಿದ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆಗಿದೆ. ಇದಕ್ಕೆ ಮುಖ್ಯಮಂತ್ರಿ ಉತ್ತರಿಸಬೇಕು’ ಎಂದು ರೇಣುಕಾಚಾರ್ಯ ಆಗ್ರಹಿಸಿದರು. ‘ದಾವಣಗೆರೆ ಜಿಲ್ಲೆಗೆ 33000 ಟನ್ ಗೊಬ್ಬರ ಅವಶ್ಯಕತೆ ಇದ್ದು ಕೇಂದ್ರ ಸರ್ಕಾರ 36000 ಟನ್ ಸರಬರಾಜು ಮಾಡಿದೆ. ಅಧಿಕಾರಿಗಳು ನನಗೆ ಇದನ್ನು ದೃಢಪಡಿಸಿದ್ದಾರೆ. ಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ. ರೈತರು ನನಗೆ ಕರೆ ಮಾಡಿ ಗೊಬ್ಬರ ಕೊಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ’ ಎಂದರು. ಯೂರಿಯಾ ಗೊಬ್ಬರ ಪ್ರತಿ ಚೀಲಕ್ಕೆ ₹266 ಎಂಆರ್‌ಪಿ ಇದ್ದು ಖಾಸಗಿ ಮಾರಾಟ ಮಳಿಗೆಗಳಲ್ಲಿ ₹400ರಿಂದ ₹500ಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.