ADVERTISEMENT

ಆ.1ಕ್ಕೆ ವೀರಶೈವ–ಲಿಂಗಾಯತ ಮಹಾಸಭಾದ ಪ್ರತಿಭಟನೆ

ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:10 IST
Last Updated 30 ಜುಲೈ 2022, 5:10 IST

ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ವೀರಶೈವ –ಲಿಂಗಾಯತ ಮಹಾಸಭಾದಿಂದ ಆ. 1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದರು.

‘ವೀರಶೈವ ಲಿಂಗಾಯತ ಸಮುದಾಯದಲ್ಲಿ 92ಕ್ಕೂ ಹೆಚ್ಚು ಒಳಪಂಗಡಗಳು ಇದ್ದು, ಈ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸುವುದರಿಂದ ಐಎಎಸ್, ಐಪಿಎಸ್, ಐಅರ್‌ಎಸ್ ಇತರೆಡೆ ಉದ್ಯೋಗ ಅವಕಾಶಕ್ಕೆ ಅನುಕೂಲ ಆಗಲಿದೆ. ‌ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಒಳ್ಳೆಯದಾಗಲಿದೆ. ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಆಗಸ್ಟ್ 1ರಂದು ಮಧ್ಯಾಹ್ನ 12ಕ್ಕೆ ಮಹಾತ್ಮ ಗಾಂಧಿ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿಯ ಹಿರೇಕಲ್ಮಠದ ಸ್ವಾಮೀಜಿ, ಹರಪನಹಳ್ಳಿ ತಗ್ಗಿನಮಠದ ಶ್ರೀಗಳು, ಚನ್ನಗಿರಿಯ ಕೇದಾರ ಲಿಂಗೇಶ್ವರ ಸ್ವಾಮೀಜಿ, ಹರಿಹರದ ಪುಣ್ಯಕೋಟಿ ಮಠದ ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವರು’ ಎಂದು ತಿಳಿಸಿದರು.

ಮಹಾಸಭಾದ ಜಿ. ಶಿವಯೋಗಪ್ಪ, ನಿಖಿಲ್ ಕೊಂಡಜ್ಜಿ, ಶುಭ ಐನಳ್ಳಿ, ಶೋಭಾ ಕೊಟ್ರೇಶ್, ಸಂದೀಪ್ ಅಣಬೇರು, ಜಯಪ್ರಕಾಶ್ ಮಾಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.