ADVERTISEMENT

ನಿವೇಶನ ನೀಡಲು ಒತ್ತಾಯ: ಉಪವಾಸ ಸತ್ಯಾಗ್ರಹ

ಶಾಸಕ ಬಸವರಾಜು ವಿ. ಶಿವಗಂಗಾ ಅವರ ಸ್ವಂತ ಗ್ರಾಮದಲ್ಲಿ ಸೂರಿಗಾಗಿ ಕೂಗು

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 14:15 IST
Last Updated 9 ಜೂನ್ 2023, 14:15 IST
ಚನ್ನಗಿರಿಯ ತಾಲ್ಲೂಕು ಕಚೇರಿಯ ಮುಂದೆ ಶುಕ್ರವಾರ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಹಿರೇಕೋಗಲೂರು ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಿವೇಶನ ಕಲ್ಪಿಸಲು 15 ಎಕರೆ ಜಮೀನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.
ಚನ್ನಗಿರಿಯ ತಾಲ್ಲೂಕು ಕಚೇರಿಯ ಮುಂದೆ ಶುಕ್ರವಾರ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಹಿರೇಕೋಗಲೂರು ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಿವೇಶನ ಕಲ್ಪಿಸಲು 15 ಎಕರೆ ಜಮೀನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.   

ಚನ್ನಗಿರಿ: ‘ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿನ ಸರ್ಕಾರಿ ಗೋಮಾಳದಲ್ಲಿ ಕನಿಷ್ಠ 15 ಎಕರೆ ಭೂಮಿಯನ್ನು ಗ್ರಾಮದ ಬಡ ವರ್ಗದವರಿಗೆ ಮನೆ ನಿರ್ಮಿಸಿಕೊಳ್ಳಲು ಕಾಯ್ದಿರಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಷ್ಟ್ರೀಯ ಪ್ರಬುಧ್ಧ ಸೇನೆ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಎರಡು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು.

‘ಹಿರೇಕೋಗಲೂರು ಗ್ರಾಮದಲ್ಲಿ 318 ಎಕರೆ ಸರ್ಕಾರಿ ಗೋಮಾಳವಿದೆ. ಅದರಲ್ಲಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ 33 ರೈತರಿಗೆ 33 ಎಕರೆ ಜಮೀನು ನೀಡಲಾಗಿದೆ. ಇನ್ನು ಕೆಲವರು ಗೋಮಾಳದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿದ್ದಾರೆ. 15 ಎಕರೆ ಸ್ಮಶಾನಕ್ಕೆ, 15 ಎಕರೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ, 5 ಎಕರೆ ವಿದ್ಯುತ್ ವಿತರಣಾ ಘಟಕ ನಿರ್ಮಾಣಕ್ಕೆ ನೀಡಲಾಗಿದೆ. ಈ ಗೋಮಾಳದಲ್ಲಿ ಬಡ ವರ್ಗದವರು ಮನೆ ಕಟ್ಟಿಕೊಳ್ಳಲು ಈ ಹಿಂದೆ 7 ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ನಂತರ ಕೇವಲ 2.5 ಎಕರೆ ಜಮೀನನ್ನು ಮಾತ್ರ ಮನೆಗಳನ್ನು ನಿರ್ಮಿಸಿಕೊಳ್ಳಲು ನೀಡಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

ಇದನ್ನು ವಿರೋಧಿಸಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಸತಿ ರಹಿತ ಜನರು ಈ ಗೋಮಾಳದಲ್ಲಿ ತಾತ್ಕಾಲಿಕವಾಗಿ 150ಕ್ಕಿಂತ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ತಿಂಗಳು ಕೆಲವು ಕಿಡಿಗೇಡಿಗಳು ಈ ಗುಡಿಸಲುಗಳಿಗೆ ಬೆಂಕಿ ಇಟ್ಟ ಪರಿಣಾಮ 26 ಗುಡಿಸಲುಗಳು ಸಂಪೂರ್ಣ ಸುಟ್ಟು ಹೋಗಿವೆ. ಈ ಘಟನೆ ನಡೆದ ನಂತರ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ವಾರದೊಳಗೆ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಹದಿನೈದು ದಿನಗಳಾದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಮಸ್ಯೆ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮದ ಬಡ ಜನರಿಗೆ ಸೂರು ಕಲ್ಪಿಸಲು ಕನಿಷ್ಠ 15 ಎಕರೆ ಜಮೀನು ಮೀಸಲಿಡಬೇಕು. ಗ್ರಾಮದ ಜನರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎರಡು ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡೆವು’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ತಿಳಿಸಿದರು.

‘ಸತ್ಯಾಗ್ರಹ ಆರಂಭಿಸಿದ ಬಳಿಕ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ದೂರವಾಣಿ ಕರೆ ಮಾಡಿದರು. ನಂತರ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಸ್ಥಳಕ್ಕೆ ಭೇಟಿ ನೀಡಿ, ‘6.5 ಎಕರೆ ಜಮೀನನ್ನು ನಿವೇಶನಕ್ಕಾಗಿ ನೀಡಲಾಗುವುದು’ ಎಂದು ತಿಳಿಸಿದರು. ಆದರೆ, ಇದಕ್ಕೆ ನಾವು ಸಮ್ಮತಿಸಲಿಲ್ಲ. ಮತ್ತೆ ಜಿಲ್ಲಾಧಿಕಾರಿ ಜೂನ್ 12ರಂದು ದಾವಣಗೆರೆ ಕಚೇರಿಯಲ್ಲಿ ಸಭೆ ಮಾಡಿ ನಿಮ್ಮ ಬೇಡಿಕೆಯನ್ನು ಖಂಡಿತ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಆದ್ದರಿಂದ ಶುಕ್ರವಾರ ಸಂಜೆ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು’ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್, ಕಾರ್ಯದರ್ಶಿ ಮಲ್ಲಿಗೆರೆ ಪ್ರಕಾಶ್, ನೀತಿಗೆರೆ ಮಂಜು, ಗುಮ್ಮನೂರು ಬಸವರಾಜ್, ಗಂಡುಗಲಿ, ಹನುಮಂತಪ್ಪ, ರತ್ನಮ್ಮ, ಸುಶೀಲಮ್ಮ, ಲಕ್ಷ್ಮಮ್ಮ, ಹಸೀನಾಬೀ, ಪುಟ್ಟಮ್ಮ, ಪ್ರವೀಣ್ ಸತ್ಯಾಗ್ರಹದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.