ADVERTISEMENT

ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 5 ಗಂಟೆ ವಿದ್ಯುತ್ ಪೂರೈಸಿ

ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 3:19 IST
Last Updated 29 ಡಿಸೆಂಬರ್ 2022, 3:19 IST
ಅಕ್ರಮ–ಸಕ್ರಮದಡಿ ಟಿಸಿಗಳ ಪೂರೈಕೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರ 5 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಬುಧವಾರ ದಾವಣಗೆರೆಯ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಕ್ರಮ–ಸಕ್ರಮದಡಿ ಟಿಸಿಗಳ ಪೂರೈಕೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರ 5 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಬುಧವಾರ ದಾವಣಗೆರೆಯ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.   

ದಾವಣಗೆರೆ: ಅಕ್ರಮ–ಸಕ್ರಮದಡಿ ರೈತರಿಗೆ ವಿದ್ಯುತ್‌ ಪರಿವರ್ತಕಗಳನ್ನು ವಿತರಿಸಬೇಕು, ಕೃಷಿ ಪಂಪ್‌ಸೆಟ್‌ ಗಳಿಗೆ ಹಗಲುವೇಳೆ ನಿರಂತರ 5 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ರೈತರು ಬುಧವಾರ ಇಲ್ಲಿನ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಿಂದ ಹೊರಟ ಪ್ರತಿಭಟನಕಾರರು ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ತಲುಪಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ‘ಈ ಹಿಂದೆ ಬರಗಾಲದ ಪರಿಸ್ಥಿತಿಯಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇರಲಿಲ್ಲ. ಈ ಸಂದರ್ಭ ರೈತರು ಕೊಟ್ಟಷ್ಟರಲ್ಲಿ ಸಮಾಧಾನಪಟ್ಟು ಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಸಾಮರ್ಥ್ಯ ಹೆಚ್ಚಾಗಿದೆ. ಇದರೊಂದಿಗೆ ಅಡಿಕೆ ತೋಟಗಳೂ ಹೆಚ್ಚಾಗಿವೆ. ಇತರೆ ಬೆಳೆಗಾಗಿ ರೈತರು ಕೊಳವೆ ಬಾವಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ 5 ಗಂಟೆ ವಿದ್ಯುತ್ ಪೂರೈಸಬೇಕು ’ ಎಂದು ಒತ್ತಾಯಿಸಿದರು.

ADVERTISEMENT

‘ಜಗಳೂರು ತಾಲ್ಲೂಕಿನಲ್ಲಿ ಬೆಳಿಗ್ಗೆ ಎರಡು ಗಂಟೆ, ರಾತ್ರಿ ಮೂರು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಅರಣ್ಯ ಪ್ರದೇಶ ಹೆಚ್ಚಾಗಿರುವ ಭಾಗದಲ್ಲಿ ರೈತರು ರಾತ್ರಿ ವೇಳೆ ಜಮೀನುಗಳಿಗೆ ಹೋಗಿ ನೀರು ಹಾಯಿಸುವುದು ಕಷ್ಟದ ಕೆಲಸ. ಈಗಾಗಲೇ ಕರಡಿ, ಚಿರತೆ ದಾಳಿಗೆ ಅನೇಕ ರೈತರು ಜೀವ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಅಂಗವಿಕಲರಾಗಿದ್ದಾರೆ. ಆದ್ದರಿಂದ ರಾತ್ರಿ ಬದಲು ಹಗಲು ವೇಳೆಯಲ್ಲಿಯೇ ವಿದ್ಯುತ್ ಪೂರೈಕೆ ಮಾಡಬೇಕು’ ಎಂದರು.

‘ಅಕ್ರಮ– ಸಕ್ರಮದಡಿ ಹಣ ತುಂಬಿರುವ ಎಲ್ಲ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ನೀಡಬೇಕು. ಸರ್ಕಾರದ ಮಟ್ಟದಲ್ಲಿ ವಿದ್ಯುತ್ ಪರಿವರ್ತಕಗಳ ಪೂರೈಕೆಗೆ ಲಾಬಿ ನಡೆಯುತ್ತಿದ್ದು, ಇದರಿಂದ ಪರಿವರ್ತಕಗಳ ಪೂರೈಕೆ ವಿಳಂಬವಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಅಕ್ರಮ –ಸಕ್ರಮಕ್ಕೆ ಹಣ ತುಂಬಿ ಮೂರು ವರ್ಷವಾದರೂ ಟಿಸಿಗಳನ್ನೇ ನೀಡಿಲ್ಲ’ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಧೀಕ್ಷಕ ಎಂಜಿನಿಯರ್ ಸುರೇಶ್ ಪಾಟೀಲ್ ‘ರೈತರ ಬೇಡಿಕೆ
ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು. ಎಇಇ ಜಗದೀಶ್
ಇದ್ದರು.

ಪ್ರತಿಭಟನೆಯಲ್ಲಿ ಗುಮ್ಮನೂರು ಬಸವರಾಜ್, ಆಲೂರು ಪರಶುರಾಮ್, ಕೆಂಚಮ್ಮನಹಳ್ಳಿ ಹನುಮಂತ, ಚಿಕ್ಕ ಮಲ್ಲನಹೊಳೆ ಚಿರಂಜೀವಿ, ಕೋಗಲೂರು ಕುಮಾರ್, ನಿಟುವಳ್ಳಿ ದೇವರಾಜ್, ಕೋಲುಕುಂಟೆ ಹುಚ್ಚೆಂಗಪ್ಪ, ಹುಚ್ಚವ್ವನಹಳ್ಳಿ ಸಿದ್ದೇಶ್, ಭಗತ್‌ಸಿಂಹ, ರಾಜನಹಟ್ಟಿ ರಾಜು, ನೀರ್ಥಡಿ ಅಜ್ಜಯ್ಯ, ಎರವನಾಗತಿಹಳ್ಳಿ ರುದ್ರಪ್ಪ, ಆಲೂರು ಹಟ್ಟಿ ಪುಟ್ಟನಾಯ್ಕ, ಲಕ್ಷ್ಮಣ್ ನಾಯ್ಕ, ಗಂಗನಕಟ್ಟೆ ಷಣ್ಮುಖಪ್ಪ, ಮಡ್ರಳ್ಳಿ ತಿಪ್ಪೇಸ್ವಾಮಿ ಸೇರಿದಂತೆ 150ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.